More

    ಪಾಲಿಕೆಯಲ್ಲಿನ್ನು ಪ್ರಮೀಳಾ ಸಾಮ್ರಾಜ್ಯ

    ಹುಬ್ಬಳ್ಳಿ: ಕಳೆದ 26 ತಿಂಗಳುಗಳಿಂದ ಚುನಾವಣೆ ನಡೆಯದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್​ವಾರು ಕರಡು ಮೀಸಲಾತಿಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಲಾಗಿದೆ. ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಶೇ. 50ರಷ್ಟು ಸ್ಥಾನ ನಿಗದಿಪಡಿಸಲಾಗಿದ್ದು, ಪಾಲಿಕೆಯಲ್ಲಿ ಸದಸ್ಯೆಯರ ಸಂಖ್ಯೆ 40ರ ಗಡಿ ದಾಟಲಿದೆ.

    ಹಿಂದೆ 2014ರಲ್ಲಿ ನಡೆದ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನ ಮೀಸಲಿಡಲಾಗಿತ್ತು. ಅದರಂತೆ 67 ವಾರ್ಡ್​ಗಳಲ್ಲಿ 24 ಜನ ಮಹಿಳೆಯರು (ಇಬ್ಬರು ಸಾಮಾನ್ಯ ಕ್ಷೇತ್ರದಿಂದಲೂ ಆಯ್ಕೆಯಾಗಿದ್ದರು) ಆಯ್ಕೆಯಾಗಿದ್ದರು. ಈ ಬಾರಿ ಹು-ಧಾ ಮಹಾನಗರ ಪಾಲಿಕೆಯ ವಾರ್ಡ್​ಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 40 ವಾರ್ಡ್​ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಮೀಸಲಾತಿ ಇಲ್ಲದ ಅನ್ಯ ವಾರ್ಡ್​ಗಳಿಂದಲೂ ಸ್ಪರ್ಧಿಸಲು ಮಹಿಳೆಯರಿಗೆ ಮುಕ್ತ ಅವಕಾಶವಿದೆ. ಒಂದು ವೇಳೆ ಅಂಥ ವಾರ್ಡ್​ಗಳಿಂದ ಮಹಿಳೆಯರು ಜಯಶಾಲಿಯಾದರೆ ಪಾಲಿಕೆಯಲ್ಲಿ ಚುನಾಯಿತ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಲಿದೆ.

    ಇದೀಗ ಪ್ರಕಟಿತ ಕರಡು ಮೀಸಲಾತಿ ಪ್ರಕಾರ ಸಾಮಾನ್ಯ ಮಹಿಳೆಗೆ 22, ಹಿಂದುಳಿದ ವರ್ಗ ಎ ಮಹಿಳೆಗೆ 11, ಪರಿಶಿಷ್ಟ ಜಾತಿ ಮಹಿಳೆಗೆ 4, ಹಿಂದುಳಿದ ವರ್ಗ ಬಿ ಮಹಿಳೆಗೆ 2 ಹಾಗೂ ಪರಿಶಿಷ್ಟ ಪಂಗಡ ಮಹಿಳೆಗೆ 1 ವಾರ್ಡ್ ಹಂಚಿಕೆ ಮಾಡಲಾಗಿದೆ. ಉಳಿದಂತೆ ಸಾಮಾನ್ಯ ವರ್ಗಕ್ಕೆ 22, ಹಿಂದುಳಿದ ವರ್ಗ ಎ ಗೆ 11, ಪರಿಶಿಷ್ಟ ಜಾತಿಗೆ 4, ಹಿಂದುಳಿದ ವರ್ಗ ಬಿ ಗೆ 3 ಹಾಗೂ ಪರಿಶಿಷ್ಟ ಪಂಗಡಕ್ಕೆ 2 ಸ್ಥಾನಗಳನ್ನು ಮೀಸಲಿಡಲಾಗಿದೆ.

    ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಪಾಲಿಕೆಗೆ ಚುನಾವಣೆ ಸನ್ನಿಹಿತವಾಗಿದ್ದು, ರಾಜಕೀಯ ಪಕ್ಷ, ಸ್ಪರ್ಧಾಕಾಂಕ್ಷಿಗಳಲ್ಲಿ ಕುತೂಹಲ ಮೂಡಿದೆ. ಆದರೆ, ಇನ್ನೂ ಕಾಲಾವಕಾಶವಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು (ಬೆಂಗಳೂರು) 2020ರ ಡಿಸೆಂಬರ್ 17ರಂದು ನೀಡಿದ ತೀರ್ಪಿನಲ್ಲಿ ವಾರ್ಡ್​ವಾರು ಮೀಸಲಾತಿ ಪ್ರಕಟಿಸಿದ 2 ತಿಂಗಳಲ್ಲಿ ಚುನಾವಣೆ ಆಯೋಗ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಮತದಾರರ ಪಟ್ಟಿ ಪ್ರಕಟಿಸಿದ 45 ದಿನಗಳ ಬಳಿಕ ಚುನಾವಣೆ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಹೇಳಿತ್ತು. ಅದರಂತೆ ಈ ಎಲ್ಲ ಪ್ರಕ್ರಿಯೆಗಳು ಜರುಗಬೇಕಿದೆ. ಕೋವಿಡ್ 2ನೇ ಅಲೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ 6 ತಿಂಗಳು ಯಾವುದೇ ಚುನಾವಣೆ ನಡೆಸುವುದಿಲ್ಲವೆಂದು ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ಪ್ರಕಟಿಸಿದ್ದು ಇದೆ.

    2019 ಮಾರ್ಚ್ 6ರಂದು ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡಿದೆ. ಅಂದರೆ, ಕಳೆದ 26 ತಿಂಗಳುಗಳಿಂದ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತ ನಡೆದಿದೆ.

    ಆಕ್ಷೇಪಣೆ ಗೊಂದಲ: ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ಕರಡು ಮೀಸಲಾತಿ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶವಿದೆ. ಆಕ್ಷೇಪಣೆ ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ಲಿಖಿತವಾಗಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕಿಂತ ಮೊದಲು ಜಿಲ್ಲಾಧಿಕಾರಿ ಇವರಿಗೆ ಸಲ್ಲಿಸಬೇಕು. ಆದರೆ, ಮೇ 7ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿರುವ ಈ ಅಧಿಸೂಚನೆಯನ್ನು 4 ದಿನ ತಡವಾಗಿ ಸಾರ್ವಜನಿಕಗೊಳಿಸಿರುವ ಇಲಾಖೆಯ ನಡೆ ಆಕ್ಷೇಪಕ್ಕೆ ಗುರಿಯಾಗಿದೆ.

    ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಅಕ್ಷೇಪಣೆ ಸಲ್ಲಿಕೆಗೆ ಸಂಬಂಧಿಸಿದಂತೆ ಮಂಗಳವಾರ ಸಂಜೆ ಪ್ರಕಟಣೆ ಹೊರಡಿಸಿದ್ದಾರೆ. ಅವರು ಸಹ, ಮೇ 7ರಿಂದ 7ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಬೇಕೆಂದು ಮಾಹಿತಿ ನೀಡಿದ್ದಾರೆ. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ಮೀಸಲಾತಿ ಕರಡು ಅಧಿಸೂಚನೆ ಇಂದು ನಮ್ಮ ಕೈ ಸೇರಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts