More

    ಅಣ್ವಸ್ತ್ರಕ್ಕಾಗಿ ತಂತ್ರಜ್ಞಾನ ಕದ್ದ ಪಾಕಿಸ್ತಾನ!

    ವಾಷಿಂಗ್ಟನ್: ಪಾಕಿಸ್ತಾನ ಅಣ್ವಸ್ತ್ರ ಮತ್ತು ಕ್ಷಿಪಣಿಗಳ ನಿರ್ವಣಕ್ಕೆ ತಂತ್ರಜ್ಞಾನ ಕಳವು ಮಾಡಿದೆ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ರಾವಲ್ಪಿಂಡಿ ಮೂಲದ ‘ಬಿಜಿನೆಸ್ ವರ್ಲ್ಡ್’ ಎಂಬ ಕಂಪನಿಗೆ ಸೇರಿದ ಐದು ಜನರು ಪಾಕಿಸ್ತಾನದ ಅಣ್ವಸ್ತ್ರ ಮತ್ತು ಕ್ಷಿಪಣಿ ಕಾರ್ಯಕ್ರಮಕ್ಕೆ ಅಮೆರಿಕದ ತಂತ್ರಜ್ಞಾನದ ಕಳ್ಳಸಾಗಾಟ ಮಾಡುತ್ತಿದ್ದರು ಎಂದು ಅಮೆರಿಕ ಆರೋಪ ಮಾಡಿದೆ.

    ಕಳ್ಳ ಮಾರ್ಗದಿಂದಲೇ ಅಣ್ವಸ್ತ್ರ ಹಾಗೂ ಕ್ಷಿಪಣಿಗಳನ್ನು ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿರುವ ಪಾಕಿಸ್ತಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ತಳಪಾಯವೇ ಇಲ್ಲ. ಇಷ್ಟಾದರೂ ಅದು ಕಳ್ಳಮಾರ್ಗದಲ್ಲಿ ತಂತ್ರಜ್ಞಾನವನ್ನು ಹೊಂದುವ ದುಷ್ಟ ಬುದ್ಧಿಯನ್ನು ಇನ್ನೂ ಬಿಟ್ಟಿಲ್ಲ ಎನ್ನುವುದಕ್ಕೆ ಇತ್ತೀಚೆಗೆ ಬಯಲಿಗೆ ಬಂದಿರುವ ಐದು ಪಾಕಿಸ್ತಾನಿಯರು ಒಳಗೊಂಡಿರುವ ಪ್ರಕರಣವೇ ಸಾಕ್ಷಿಯಾಗಿದೆ.

    ಹಾಂಕಾಂಗ್, ಕೆನಡಾ ಮತ್ತು ಬ್ರಿಟನ್​ನಲ್ಲಿದ್ದ ಈ ಐವರು ಅಮೆರಿಕ ಮೂಲದ ಸರಕುಗಳನ್ನು ಖರೀದಿಸುವ ಕಂಪನಿಗಳ ಜಾಲ ನಡೆಸುತ್ತಿದ್ದಾರೆ. ಅಧಿಕೃತ ಪರವಾನಗಿ, ದಾಖಲೆಗಳಿಲ್ಲದೆ ಪಾಕಿಸ್ತಾನದ ಮುಂದುವರಿದ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎಇಆರ್​ಒ) ಮತ್ತು ಪಾಕಿಸ್ತಾನದ ಅಣು ಶಕ್ತಿ ಆಯೋಗಕ್ಕೆ (ಪಿಎಇಸಿ) ಸರಕು ಪೂರೈಸುತ್ತಿದ್ದರು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ. ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಎಂದು ಬಹಳ ವರ್ಷಗಳಿಂದ ಘೋಷಿಸಲಾಗಿರುವ ಸಂಸ್ಥೆಗಳಿಗೆ ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮಕ್ಕಾಗಿ ಅವುಗಳನ್ನು ಕಳ್ಳಸಾಗಾಟ ಮಾಡಿದ್ದಾರೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತೆಯ ಸಹಾಯಕ ಅಟಾರ್ನಿ ಜನರಲ್ ಜಾನ್ ಸಿ ಡೆಮರ್ಸ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾನೂನು ಮತ್ತು ರಫ್ತು ನಿಯಂತ್ರಣ ಸುಧಾರಣೆ ಕಾನೂನನ್ನು ಇವರು ಉಲ್ಲಂಘಿಸಿದ್ದಾರೆಂದು ಆರೋಪಿಸಲಾಗಿದೆ.

    ಆರೋಪಿತರ ಬಂಧನ ಇಲ್ಲ

    ಮಹಮದ್ ಕಮ್ರಾನ್ ವಲಿ (ಪಾಕಿಸ್ತಾನ), ಮಹಮದ್ ಅಶಾನ್ ವಲಿ ಹಾಗೂ ಹಾಜಿ ವಲಿ (ಇಬ್ಬರೂ ಕೆನಡಾ), ಅಶ್ರಫ್ ಖಾನ್ ಮಹಮದ್ (ಹಾಂಗ್​ಕಾಂಗ್) ಮತ್ತು ಅಹಮದ್ ವಾಹೀದ್ (ಬ್ರಿಟನ್) ಆರೋಪಿಗಳಾಗಿದ್ದಾರೆ. ಈ ಪೈಕಿ ಯಾರೊಬ್ಬರನ್ನೂ ಇನ್ನೂ ಬಂಧಿಸಲಾಗಿಲ್ಲ. ಅಮೆರಿಕದ ಸರಕುಗಳನ್ನು ಎಲ್ಲಿಗೆ ಸಾಗಿಸುತ್ತಿದ್ದೇವೆ ಎನ್ನುವ ಸತ್ಯವನ್ನು ಅವರು ಮಾರೆಮಾಚಿದ್ದರು.

    ಭಾರತದ ಮೇಲೂ ಪರಿಣಾಮ?

    ಅಮೆರಿಕದಿಂದ ಅಣ್ವಸ್ತ್ರ ಮತ್ತು ಕ್ಷಿಪಣಿ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಕಳ್ಳ ಸಾಗಾಟ ಮಾಡುವ ಜಾಲವನ್ನು ಭೇದಿಸಿದ ಪ್ರಕರಣ ಭಾರತದ ಭದ್ರತೆ ಮೇಲೂ ಪರಿಣಾಮ ಬೀರುವಂಥದ್ದಾಗಿದೆ ಎಂದು ಅಮೆರಿಕದ ಸೂಚ್ಯವಾಗಿ ತಿಳಿಸಿದೆ. ಈ ಐದೂ ಜನರ ವರ್ತನೆ ಅಮೆರಿಕದ ರಫ್ತು ನಿಯಮಗಳ ಉಲ್ಲಂಘನೆ ಮಾತ್ರವಲ್ಲ, ಅಮೆರಿಕದ ಭದ್ರತಾ ಹಿತಾಸಕ್ತಿಗಳಿಗೆ ಹಾಗೂ ಏಷ್ಯಾ ವಲಯದಲ್ಲಿನ ದೇಶಗಳ ನಡುವಿನ ಶಕ್ತಿ ಸಮತೋಲನಕ್ಕೆ ಅಪಾಯ ಒಡ್ಡುವಂಥದ್ದು ಎಂದು ಅದು ಅಭಿಪ್ರಾಯಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts