More

    ಇರಾನ್​​​​ ಮೇಲೆ ಪ್ರತಿದಾಳಿ ನಡೆಸಿದ ಪಾಕ್! ಉಭಯ ದೇಶಗಳ ಸಂಬಂಧಕ್ಕೆ ಹುಳಿ ಹಿಂಡಿದ ಉಗ್ರರು

    ಇಸ್ಲಮಾಬಾದ್​​: ಇರಾನ್​ನ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವೂ ಕೂಡ ಇರಾನಿಯನ್ ಪ್ರದೇಶದ ಒಳಗಿರುವ ಉಗ್ರಗಾಮಿ ನೆಲೆಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿರುವುದಾಗಿ ಪಾಕ್​ನ ಅನೇಕ ಮಾಧ್ಯಮಗಳು ವರದಿ ಮಾಡಿವೆ.

    ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಎರಡು ಉಗ್ರ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದ್ದನ್ನು ಒಪ್ಪಿಕೊಂಡ ಒಂದು ದಿನದ ಬೆನ್ನಲ್ಲೇ ಪಾಕಿಸ್ತಾನ ಪ್ರತಿ ದಾಳಿ ನಡೆಸಿದೆ. ಇರಾನ್​ ದಾಳಿಯನ್ನು ಇಸ್ಲಾಮಾಬಾದ್ “ಕಾನೂನುಬಾಹಿರ ಕೃತ್ಯ” ಎಂದು ಕರೆದಿದೆ. ಇರಾನ್​ ನಡೆಸಿದ ಕ್ಷಿಪಣಿ ಮತ್ತು ಡ್ರೋನ್​ ದಾಳಿಯಲ್ಲಿ ಬಲೂಚಿಸ್ತಾನದಲ್ಲಿ ಇಬ್ಬರು ಮಕ್ಕಳು ದುರಂತ ಸಾವಿಗೀಡಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಪಾಕಿಸ್ತಾನ ಮೇಲೆ ನಡೆದ ಇರಾನ್ ಕಾರ್ಯಾಚರಣೆಯನ್ನು ವಿದೇಶಾಂಗ ಸಚಿವರು ಸಹ ಮಂಗಳವಾರ ಒಪ್ಪಿಕೊಂಡಿದ್ದಾರೆ. ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿರುವ ಜೈಶ್​ ಅಲ್-ಅದ್ಲ್ ಸಂಘಟನೆಯನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಲಾಯಿತು ಎಂದು ತಿಳಿಸಿದರು. ಈ ಜೈಶ್ ಉಲ್-ಅದ್ಲ್, ಅಥವಾ “ಆರ್ಮಿ ಆಫ್ ಜಸ್ಟಿಸ್” ಎಂಬುದು 2012 ರಲ್ಲಿ ಸ್ಥಾಪನೆಯಾದ ಸುನ್ನಿ ಉಗ್ರಗಾಮಿ ಗುಂಪಾಗಿದೆ. ಇದು ಹೆಚ್ಚಾಗಿ ಪಾಕಿಸ್ತಾನದ ಗಡಿಯುದ್ದಕ್ಕೂ ಕಾರ್ಯನಿರ್ವಹಿಸುತ್ತದೆ.

    ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ಇರಾಕ್ ಮತ್ತು ಸಿರಿಯಾದಲ್ಲಿನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ ಮರು ದಿನವೇ ಪಾಕಿಸ್ತಾನದ ಮೇಲೂ ದಾಳಿ ನಡೆಸಿದ್ದು, ಈ ಎಲ್ಲ ಬೆಳವಣಿಗೆಗಳ ನಡುವೆ ಇರಾನ್​ನಿಂದ ತನ್ನ ರಾಯಭಾರಿಯನ್ನು ಹಿಂಪಡೆಯುವುದು ಮತ್ತು ಇರಾನ್ ರಾಯಭಾರಿಯನ್ನು ಪಾಕಿಸ್ತಾನಕ್ಕೆ ಬರದಂತೆ ತಡೆಯುವುದು ಸೇರಿದಂತೆ ಕೆಲ ರಾಜತಾಂತ್ರಿಕ ಕ್ರಮಗಳನ್ನು ಪಾಕಿಸ್ತಾನ ತೆಗೆದುಕೊಂಡಿದೆ.

    ದಾಳಿಯ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಮ್ತಾಜ್ ಬಲೋಚ್ ಮಾತನಾಡಿ, ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಎರಡು ರಾಷ್ಟ್ರಗಳ ನಡುವೆ ಉತ್ತಮ ಸಂವಹನ ಮಾರ್ಗಗಳ ಹೊರತಾಗಿಯೂ ಈ ದಾಳಿ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇನ್ನೂ ಗಡಿಯಾಚೆ ದಾಳಿ ನಡೆಸುವ ಉಗ್ರ ಸಂಘಟನೆಗಳಿಗೆ ಆಶ್ರಯ ನೀಡುತ್ತಿರುವ ಆರೋಪವನ್ನು ಎರಡೂ ರಾಷ್ಟ್ರಗಳು ಪರಸ್ಪರ ಮಾಡಿಕೊಳ್ಳುತ್ತಿವೆ. ಉಭಯ ರಾಷ್ಟ್ರಗಳ ನಡುವೆ ಸುಮಾರು 900 ಕಿಮೀ ಗಡಿ ಹಂಚಿಕೊಂಡಿದ್ದು, ಎರಡೂ ರಾಷ್ಟ್ರಗಳಿಗೆ ಇದು ಭದ್ರತೆಯ ಕಾಳಜಿಯಾಗಿದೆ. ಇರಾನ್ ಗಡಿಗೆ ಸಮೀಪವಿರುವ ಸಬ್ಜ್ ಕೊಹ್ ಗ್ರಾಮದ ಬಳಿ ಇತ್ತೀಚೆಗೆ ನಡೆದ ದಾಳಿಯು ಈಗ ಇರಾನ್ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮಧ್ಯೆ ಉದ್ವಿಗ್ನತೆಯನ್ನು ಉಂಟು ಮಾಡಿದೆ. (ಏಜೆನ್ಸೀಸ್​)

    ಪಾಕಿಸ್ತಾನದ ಮೇಲೆಯೇ ಕ್ಷಿಪಣಿ ಉಡಾಯಿಸಿದ ಇರಾನ್​: ಪರಿಣಾಮ ನೆಟ್ಟಗಿರಲ್ಲ ಎಂದ ಪಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts