More

    ಅಬ್ಬಬ್ಬಾ 7 ಕೋಟಿ ರೂಪಾಯಿ! ಮೀನುಗಾರನ ಜೀವನವನ್ನೇ ಬದಲಿಸಿತು ಅಪರೂಪದ ಮೀನು

    ಇಸ್ಲಮಾಬಾದ್​: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಪಾಕಿಸ್ತಾನದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

    ಪಾಕಿಸ್ತಾನದ ಮೀನುಗಾರನ ಬಾಳಲ್ಲಿ ಭಾರೀ ಗಾತ್ರದ ಅಪರೂಪದ ಮೀನೊಂದು ಭಾಗ್ಯದ ಲಕ್ಷ್ಮಿಯನ್ನು ಹೊತ್ತು ತಂದಿದೆ. ಒಂದೇ ಒಂದು ಮೀನು, ಮೀನುಗಾರನನ್ನು ರಾತ್ರೋರಾತ್ರಿ ಲಕ್ಷಾಧಿಪತಿಯನ್ನಾಗಿ ಮಾಡಿದೆ. ಇದೀಗ ಮೀನುಗಾರನ ಅದೃಷ್ಟ ನೋಡಿ ಎಲ್ಲರು ಅಚ್ಚರಿಗೆ ಒಳಗಾಗಿದ್ದಾರೆ.

    ಮೀನುಗಾರಿಕೆಯನ್ನೇ ಆಧಾರವಾಗಿರಿಸಿಕೊಂಡಿರುವ ಇಬ್ರಾಹಿಂ ಹೈದರಿ ಗ್ರಾಮದ ಹಾಜಿ ಬಲೂಚ್​ ಮತ್ತು ಅವರ ಕೆಲಸಗಾರರು ಸೋಮವಾರ ಅರಬ್ಬಿ ಸಮುದ್ರದಲ್ಲಿ ಎಂದಿನಂತೆ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಅವರ ಬಲೆಗೆ ಸ್ಥಳೀಯ ಆಡುಭಾಷೆಯಲ್ಲಿ “ಗೋಲ್ಡನ್ ಫಿಶ್” ಅಥವಾ “ಸೋವಾ” ಎಂದು ಕರೆಯಲ್ಪಡುವ ಅಪರೂಪದ ಮೀನುಗಳನ್ನು ಹಿಡಿದಿದ್ದಾರೆ.

    ಅವರು ಹಿಡಿದ ಎಲ್ಲ ಮೀನುಗಳು ಸುಮಾರು 70 ಮಿಲಿಯನ್​ ರೂಪಾಯಿ ಅಂದರೆ, 7 ಕೋಟಿ ರೂಪಾಯಿಗೆ ಶುಕ್ರವಾರ ಬೆಳಗ್ಗೆ ಕರಾಚಿ ಹಾರ್ಬರ್​ನಲ್ಲಿ ನಡೆದ ಹರಾಜಿನಲ್ಲಿ ಮಾರಾಟವಾಗಿದೆ ಎಂದು ಪಾಕಿಸ್ತಾನ ಮೀನುಗಾರರ ವೇದಿಕೆಯ ಮುಬಾರಕ್ ಖಾನ್ ಎಂಬುವರು ಮಾಹಿತಿ ನೀಡಿದ್ದಾರೆ.

    ಅಂದಹಾಗೆ ಸೋವಾ ಮೀನನ್ನು ಅತ್ಯಂತ ಬೆಲೆಬಾಳುವ ಮತ್ತು ಅಪರೂಪದ ಮೀನೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಈ ಮೀನುಗಳ ಹೊಟ್ಟೆಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಮೀನಿನಲ್ಲಿರುವ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿಯೂ ಬಳಸಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಸೋವಾ ಮೀನು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಪ್ರಾಮುಖ್ಯತೆಯನ್ನು ಹೊಂದಿದ್ದು, ಸಾಂಪ್ರದಾಯಿಕ ಔಷಧಗಳು ಮತ್ತು ಸ್ಥಳೀಯ ಪಾಕಪದ್ಧತಿಯಲ್ಲಿ ಅದರ ಬಳಕೆ ಅಧಿಕವಾಗಿದೆ.

    ಜೀವನವನ್ನೇ ಬದಲಿಸಿದ ಮೀನು ಸಿಕ್ಕ ಖುಷಿಯಲ್ಲಿ ಮಾತನಾಡಿರುವ ಹಾಜಿ ಬಲೂಚ್​, ನಾವು ಕರಾಚಿಯ ತೆರೆದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದೆವು. ಈ ವೇಳೆ ಇಂತಹ ಬೃಹತ್ ಚಿನ್ನದ ಮೀನು ಸಂಗ್ರಹವನ್ನು ನಾವು ನೋಡಿದಾಗ ನಮ್ಮ ಖುಷಿಗೆ ಪಾರವೇ ಇಲ್ಲದಂತಾಯಿತು ಎಂದಿದ್ದಾರೆ. ಅಲ್ಲದೆ, ಮಾರಾಟದಿಂದ ಬಂದ ಹಣವನ್ನು ತನ್ನ ಏಳು ಜನರ ಸಿಬ್ಬಂದಿಯೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

    ಅಂದಹಾಗೆ ತಜ್ಞರ ಪ್ರಕಾರ ಸಂತಾನೋತ್ಪತ್ತಿ ಅವಧಿಯಲ್ಲಿ ಮಾತ್ರ ಈ ಸೋವಾ ಮೀನುಗಳು ಕರಾವಳಿಯ ಸಮೀಪಕ್ಕೆ ಬರುತ್ತವೆ. (ಏಜೆನ್ಸೀಸ್​)

    ಒಂದೇ ದಿನದಲ್ಲಿ 72 ಲಕ್ಷ ರೂ. ಒಡೆಯನಾದ ಮೀನುಗಾರ: ಈ ಮೀನಿನ ಬಗ್ಗೆ ಕೇಳಿದ್ರೆ ಹುಬ್ಬೇರಿಸ್ತೀರಾ!

    ‘ಗರಡಿ’ ರಿಲೀಸ್​; ಮಲ್ಟಿಪ್ಲೆಕ್ಸ್​ಗಳಿಗೆ ಖಡಕ್​ ಎಚ್ಚರಿಕೆ ಕೊಟ್ಟ ಬಿ.ಸಿ. ಪಾಟೀಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts