More

    ಲಡಾಖ್​ನಿಂದ ಭಾರತೀಯ ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಲು ಕುತಂತ್ರ: ಪಾಕ್​-ಚೀನಾ ಕೈಜೋಡಿಸಿದ್ದೇಕೆ?

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮತ್ತೆ ಹೆಚ್ಚಿಸಲು ಪಾಕಿಸ್ತಾನ ಮತ್ತು ಚೀನಾ ಕುತಂತ್ರ ರೂಪಿಸಿ ಪರಸ್ಪರ ಸಹಕರಿಸುತ್ತಿವೆ. ಈ ಮೂಲಕ ಲಡಾಖ್ ಗಡಿಯಲ್ಲಿ ಬೀಡುಬಿಟ್ಟಿರುವ ಯೋಧರನ್ನು ಕಾಶ್ಮೀರಕ್ಕೆ ಮರುನಿಯೋಜಿಸುವಂತೆ ಭಾರತೀಯ ಸೇನೆಯ ಮೇಲೆ ಒತ್ತಡ ಹೇರಲು ಸಂಚು ರೂಪಿಸಿವೆ ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿವೆ.

    ಪೂಂಚ್​ನಲ್ಲಿ ಭಯೋತ್ಪಾದಕರ ಹೊಂಚುದಾಳಿಯಲ್ಲಿ ಈಗಷ್ಟೇ ಐವರು ಸೈನಿಕರು ಹುತಾತ್ಮರಾಗಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ, ವಿಶೇಷವಾಗಿ ಪಾಕಿಸ್ತಾನದ ಗಡಿಯಲ್ಲಿರುವ ಪೂಂಚ್ ಮತ್ತು ರಜೌರಿ ಸೆಕ್ಟರ್‌ಗಳಲ್ಲಿ ಭಾರತೀಯ ಪಡೆಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿವೆ.

    ಭಯೋತ್ಪಾದನೆ ದಾಳಿಯ ಈ ಹೆಚ್ಚಳವು ಇಸ್ಲಾಮಾಬಾದ್ ಮತ್ತು ಬೀಜಿಂಗ್‌ನ ಸಂಘಟಿತ ಕಾರ್ಯತಂತ್ರದ ಪರಿಣಾಮವಾಗಿದೆ ಎಂದು ಮೂಲಗಳು ಹೇಳುತ್ತವೆ.

    ಪಾಕಿಸ್ತಾನವು ಪೂಂಚ್‌ನ ಅರಣ್ಯ ಪ್ರದೇಶಗಳಿಗೆ 25-30 ಭಯೋತ್ಪಾದಕರನ್ನು ನುಗ್ಗಿಸಿದೆ. ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಪ್ರಚೋದಿಸುವ ಉದ್ದೇಶ ಇದರಲ್ಲಿದೆ ಎಂದು ಮೂಲಗಳು ತಿಳಿಸಿವೆ.

    2020ರಲ್ಲಿ ಭಾರತ- ಚೀನಾದ ಗಡಿಯಲ್ಲಿನ ಗಲ್ವಾನ್‌ ಪ್ರದೇಶದಲ್ಲಿ ಉಂಟಾದ ಗಡಿ ಬಿಕಟ್ಟಿನ ನಂತರ ಲಡಾಖ್‌ನಲ್ಲಿ ಗಡಿ ಕಾವಲಿಗಾಗಿ ಭಾರತವು ಹೆಚ್ಚಿನ ಪ್ರಮಾಣದಲ್ಲಿ ಸೇನಾ ಪಡೆಗಳನ್ನು ನಿಯೋಜಿಸಿದೆ. ಇದರಿಂದ ನಿರಾಶೆಗೊಂಡ ಚೀನಾ, ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಿಸುವ ಮೂಲಕ ಭಾರತೀಯ ಸೇನಾ ಪಡೆಗಳು ಕಾಶ್ಮೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಪಸು ಬರುವಂತೆ ಸಂಚು ರೂಪಿಸುತ್ತಿದೆ.

    ಪಾಕಿಸ್ತಾನವು ಚೀನಾದ ಬೆಂಬಲದೊಂದಿಗೆ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ಚೀನಾ ಗಡಿಯಲ್ಲಿನ ಭಾರತೀಯ ಸೇನೆಯ ಕಡಿತ ಮಾಡುವ ದುಷ್ಟ ಸಂಚನ್ನು ಹೊಂದಿದೆ ಎಂದು ಮೂಲಗಳು ವಿವರಿಸುತ್ತವೆ.

    2020ರಲ್ಲಿ ಕಾಶ್ಮೀರದ ಪೂಂಚ್‌ನಿಂದ ಚೀನಾ ಗಡಿ ಬಳಿಯ ಲಡಾಖ್‌ಗೆ ವಿಶೇಷ ಬಂಡಾಯ ನಿಗ್ರಹ ಪಡೆಯಾದ ರಾಷ್ಟ್ರೀಯ ರೈಫಲ್ಸ್‌ ಅನ್ನು ಭಾರತ ನಿಯೋಜಿಸಿದೆ. ಈ ಕ್ರಮವು ಚೀನಾದ ವಿರುದ್ಧ ಭಾರತದ ಮೇಲುಗೈ ಸಾಧಿಸುವ ಮಹತ್ವದ ಕ್ರಮವಾಗಿದೆ. ಆದರೆ, ಇದೇ ವೇಳೆ ಪೂಂಚ್‌ನಲ್ಲಿ ಭಯೋತ್ಪಾದನಾ ವಿರೋಧಿ ಪಡೆಗಳ ಬಲ ಕಡಿಮೆಯಾಗಲು ಈ ಕ್ರಮವು ಕಾರಣವಾಗಿದೆ.

    ಭಯೋತ್ಪಾದಕರ ಬೆದರಿಕೆಯನ್ನು ಎದುರಿಸಲು ಸೇನೆಯು ಈಗಾಗಲೇ ಹೆಚ್ಚುವರಿ ಬ್ರಿಗೇಡ್ ಅನ್ನು ಪೂಂಚ್-ರಜೌರಿ ವಲಯಕ್ಕೆ ಸ್ಥಳಾಂತರಿಸಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ಕಾರ್ಯಾಚರಣೆಗಳಲ್ಲಿ ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ 20ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಹೇಳಲಾಗುತ್ತದೆ.

    ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನ 370ನೇ ವಿಧಿಯನ್ನು 2019 ರಲ್ಲಿ ರದ್ದು ಮಾಡಿರುವುದು ಪಾಕಿಸ್ತಾನ ಮತ್ತು ಚೀನಾಕ್ಕೆ ಬಹಳಷ್ಟು ಅಸಮಾಧಾನ ಉಂಟು ಮಾಡಿದೆ. ಹೀಗಾಗಿ, ಪಾಕಿಸ್ತಾನವು ಕಾಶ್ಮೀರದಲ್ಲಿ, ವಿಶೇಷವಾಗಿ ಅವಳಿ ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಜೌರಿಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

    2023ರಲ್ಲಿ ಈ ವರ್ಗದ ಮ್ಯೂಚುವಲ್ ಫಂಡ್​ಗಳಲ್ಲಿ ದೊರೆತ ಸರಾಸರಿ ಗಳಿಕೆ ಶೇಕಡಾ 32.23; ಮುಂದಿನ ವರ್ಷವೂ ಇದೇ ರೀತಿ ಲಾಭ ಸಿಗುವುದೇ?

    ಲೋಕಸಭೆ ಚೇಂಬರ್​ಗೆ ನುಗ್ಗಿದವರಿಗೆ ಪಾಸ್​ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ದಾಖಲು

    ಅತ್ಯಾಚಾರ ಮಾಡಿ ಚಿತ್ರೀಕರಣ: ಮಾಜಿ ಶಾಸಕ ಸೇರಿ 9 ಮಂದಿ ವಿರುದ್ಧ ಮಹಿಳೆ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts