More

    ಪಡುಮಲೆ ಪ್ರವಾಸೋದ್ಯಮ ಯೋಜನೆಗೆ ಗ್ರಹಣ

    ಶಶಿ ಈಶ್ವರಮಂಗಲ
    ಕೋಟಿ-ಚೆನ್ನಯರ ಜನ್ಮಸ್ಥಳ ಪಡುಮಲೆಯನ್ನು ಪ್ರಸಾದೋದ್ಯಮ ತಾಣವಾಗಿಸುವ 5 ಕೋಟಿ ರೂ.ಯೋಜನೆ 6 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮೊದಲ ಹಂತದ ಯೋಜನೆಗಳಿಗಾಗಿ ಬಿಡುಗಡೆಯಾಗಿರುವ 1 ಕೋಟಿ ರೂ. ಸರ್ಕಾರಿ ಅನುದಾನ ಬ್ಯಾಂಕ್‌ನಲ್ಲಿ ಠೇವಣಿಯಾಗಿ ಉಳಿದುಕೊಂಡು ಬಡ್ಡಿಗಷ್ಟೇ ಸೀಮಿತವಾಗಿದೆ.
    ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದ 50 ಲಕ್ಷ ರೂ.ಅನುದಾನವೂ ಬ್ಯಾಂಕ್‌ನಲ್ಲಿದ್ದು, 21 ಲಕ್ಷ ರೂ.ಬಡ್ಡಿ ಸೇರಿ ಒಟ್ಟು 1.71 ಕೋಟಿಯಾಗಿದೆ. ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ 25 ಲಕ್ಷ ರೂ.ಅನುದಾನವನ್ನು ಮೊದಲ ಬಾರಿಗೆ ಮಂಜೂರು ಮಾಡಿದ್ದರು. ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಡುಮಲೆ ಅಭಿವೃದ್ಧಿಗೆ 5 ಕೋಟಿ ರೂ.ಅನುದಾನ ಮಂಜೂರು ಮಾಡಲಾಗಿತ್ತು. ಆದರೆ 6 ವರ್ಷಗಳು ಕಳೆದರೂ, ಈ ಅನುದಾನ ಬಳಕೆಯಾಗಿಲ್ಲ.

    ಮೊದಲ ಹಂತದಲ್ಲಿ ಹಲವು ಯೋಜನೆಗಳು
    ಶಂಖಪಾಲ ಬೆಟ್ಟದಲ್ಲಿ ಮೊದಲ ಹಂತದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಬೆಟ್ಟದ ತುದಿಯಲ್ಲಿ 90 ಲಕ್ಷ ರೂ.ನಲ್ಲಿ ಸುಸಜ್ಜಿತ ಸಭಾಭವನ ನಿರ್ಮಾಣ, 40 ಲಕ್ಷ ರೂ. ವೆಚ್ಚದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ,ಗ್ರಂಥಾಲಯ ನಿರ್ಮಾಣ, 8 ಲಕ್ಷ ರೂ.ವೆಚ್ಚದಲ್ಲಿ ಶೌಚಗೃಹ, 40 ಲಕ್ಷ ರೂ.ವೆಚ್ಚದಲ್ಲಿ ಬೆಟ್ಟಕ್ಕೆ ಏರಲು ಎರಡು ಬದಿಗಳಿಂದ ಮೆಟ್ಟಿಲು ಹಾಗೂ ಹಸಿರು ಪಾರ್ಕ್ ವ್ಯವಸ್ಥೆ, 30 ಲಕ್ಷ ರೂ. ವೆಚ್ಚದಲ್ಲಿ ನೆಲ ಸಮತಟ್ಟು ಮತ್ತು ನೀರಿನ ವ್ಯವಸ್ಥೆ, 10 ಲಕ್ಷ ರೂ.ವೆಚ್ಚದಲ್ಲಿ ಮಾಹಿತಿ ಫಲಕಗಳ ಅಳವಡಿಕೆಗೆ 2.75 ಕೋಟಿ ರೂ.ಮೊತ್ತದ ಯೋಜನೆ ರೂಪಿಸಲಾಗಿತ್ತು. ಎರಡನೇ ಹಂತದಲ್ಲಿ ಕೋಟಿ-ಚೆನ್ನಯ ಹಾಗೂ ದೇಯಿ ಬೈದ್ಯೆತಿಯ ಬೃಹತ್ ಪ್ರತಿಮೆ ಸ್ಥಾಪನೆಯ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು.

    ಕಾರ್ಯರೂಪಕ್ಕೆ ಬಾರದ ಯೋಚನೆ
    ಕಳೆದ ಗ್ರಾಪಂ ಚುನಾವಣೆಗೆ ದಿನ ಘೋಷಣೆಯಾಗುತ್ತಿದ್ದಂತೆಯೇ ಚುನಾವಣಾ ನೀತಿ ಸಂಹಿತೆಯಿಂದಾಗಿ ಕಾಮಗಾರಿ ವಿಳಂಬವಾಗಬಾರದು ಎಂದು ಅಂದು ಸಚಿವರಾಗಿದ್ದ ಬಿ.ರಮಾನಾಥ ರೈ ಸೂಚನೆಯಂತೆ ತುರಾತುರಿಯಲ್ಲಿ ಶಂಖಪಾಲ ಬೆಟ್ಟದಲ್ಲಿ 2015ರ ಜನವರಿ 27ರಂದು ಪ್ರಥಮ ಹಂತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಬೆಟ್ಟಕ್ಕೇರಲು ತಾತ್ಕಾಲಿಕ ದಾರಿ ನಿರ್ಮಾಣ, ಕೊಳವೆಬಾವಿ ನಿರ್ಮಾಣ, ನೀರಿನ ಟ್ಯಾಂಕೊಂದರ ರಚನೆ ಬಿಟ್ಟರೆ ಬೇರೆ ಅಭಿವೃದ್ಧಿ ಆಗಿಲ್ಲ. ಪಡುಮಲೆಯನ್ನು ಪ್ರವಾಸೋದ್ಯಮ ತಾಣವನ್ನಾಗಿಸುವ ನಿಟ್ಟಿನಲ್ಲಿ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿ ಹಾಗೂ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ಮತ್ತೊಂದು ಸಮಿತಿ ರಚಿಸಲಾಗಿತ್ತು. ಪುತ್ತೂರು ಉಪವಿಭಾಗಾಧಿಕಾರಿಯಾಗಿದ್ದ ಬಸವರಾಜು ಮತ್ತು ಜಿಲ್ಲಾಧಿಕಾರಿಯಾಗಿದ್ದ ಇಬ್ರಾಹಿಂ ಪಡುಮಲೆ ಅಭಿವೃದ್ಧಿ ಕುರಿತು ನಾಲ್ಕೈದು ಬಾರಿ ಸಮಿತಿ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಪ್ರಯತ್ನ ನಡೆಸಿದ್ದರು. ಆದರೆ ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ.

    ಪಡುಮಲೆಯನ್ನು ಪ್ರವಾಸೋದ್ಯಮ ತಾಣವಾಗಿಸುವ ಪ್ರಯತ್ನ ನಡೆದಿತ್ತು. ಆದರೆ 6 ವರ್ಷಗಳಲ್ಲಿ ಯಾವುದೇ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಅಲ್ಲಿ ಕೊಳವೆಬಾವಿ, ನೀರಿನ ಟ್ಯಾಂಕ್ ಮತ್ತು ನಡೆದುಕೊಂಡು ಹೋಗುವ ದಾರಿ ವ್ಯವಸ್ಥೆ ಮಾತ್ರ ಆಗಿದೆ. ಈಗ ದಾರಿಯೂ ಮುಚ್ಚಿದೆ. ಶೀಘ್ರ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳಬೇಕು.
    ಕೆ.ಸಿ.ಪಾಟಾಳಿ ಪಡುಮಲೆ, ನಿವೃತ್ತ ಶಿಕ್ಷಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ

    ಇತಿಹಾಸಕ್ಕೆ ಸಂಬಂಧಿಸಿದ ಕುರುಹುಗಳಿರುವ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಬಿಡುಗಡೆಗೊಂಡಿರುವ ಹಣ ಹಾಗೂ ಅದರ ಈ ತನಕದ ಬಡ್ಡಿ ಸೇರಿದಂತೆ 1.74 ಕೋಟಿ ರೂ. ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಅಭಿವೃದ್ಧಿಗೆ ಸಂಬಂಧಿಸಿದ ಪಡುಮಲೆ ಅಭಿವೃದ್ಧಿ ಟ್ರಸ್ಟ್ ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿದೆ. ಸಮಿತಿ ಸಭೆ ಕರೆದು ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.
    ಡಾ.ಯತೀಶ್ ಉಳ್ಳಾಲ್
    ಉಪವಿಭಾಗಾಧಿಕಾರಿ, ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts