More

    ಸಂಪೂರ್ಣ ಹದಗೆಟ್ಟ ಪಡೀಲ್ ಅಂಡರ್‌ಬ್ರಿಡ್ಜ್, ಭಾರಿ ಮಳೆಗೆ ಗುಂಡಿ ಬಿದ್ದ ರಸ್ತೆ, ನಿರ್ವಹಣೆಯಿಲ್ಲದೆ ಹಾಳಾದ ಕೆಳಸೇತುವೆ

    ಭರತ್ ಶೆಟ್ಟಿಗಾರ್ ಮಂಗಳೂರು

    ರಾಷ್ಟ್ರೀಯ ಹೆದ್ದಾರಿ 72ರ ಪಡೀಲ್‌ನಲ್ಲಿರುವ ರೈಲ್ವೆ ಕೆಳ ಸೇತುವೆ ನಿರ್ವಹಣೆಯಿಲ್ಲದೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದು ವಾಹನ ಸವಾರರು ಕಷ್ಟ ಪಡುವಂತಾಗಿದೆ.

    ಪಡೀಲ್‌ನಲ್ಲಿ ಕೆಲ ವರ್ಷಗಳ ಹಿಂದೆ ಹೆದ್ದಾರಿ ವಿಸ್ತರಣೆ ಭಾಗವಾಗಿ ಬಾಕ್ಸ್ ಪುಶ್ಶಿಂಗ್ ಕಾಮಗಾರಿ ಮೂಲಕ ಅಂಡರ್‌ಪಾಸ್ ನಿರ್ಮಿಸಲಾಗಿತ್ತು. ಆರಂಭದ ಕೆಲವು ತಿಂಗಳು ಹೊರತುಪಡಿಸಿ, ಇಲ್ಲಿ ಸಂಚಾರ ಯಾವಾಗಲೂ ಕಷ್ಟಪಡುವಂತೆಯೇ ಇದೆ. ಮಳೆಗಾಲದಲ್ಲಂತೂ ನೀರು ನಿಂತು ಸ್ಥಗಿತಗೊಂಡ ಉದಾಹರಣೆಯೂ ಇದೆ. ಭಾರಿ ವಾಹನಗಳ ನಿರಂತರ ಸಂಚಾರದಿಂದ ಹೊಂಡ ಗುಂಡಿಗಳು ಸೃಷ್ಟಿಯಾಗುತ್ತವೆ. ಗುತ್ತಿಗೆದಾರರು ಅದಕ್ಕೆ ಜಲ್ಲಿ-ಸಿಮೆಂಟ್ ಮಿಶ್ರಣ ತಂದು ಸುರಿಯುತ್ತಾರಾದರೂ ಪ್ರಯೋಜನವಿಲ್ಲ.

    ಈ ವರ್ಷದಿಂದ ಸೇತುವೆಯಲ್ಲಿ ನೀರು ಸೋರಿಕೆಯೂ ಆರಂಭವಾಗಿದೆ. ಜೋರು ಮಳೆ ಬಂದಾಗ ಮೇಲ್ಭಾಗದಿಂದ ನೀರು ಸುರಿಯುತ್ತದೆ. ನೀರು ಸುರಿಯದಂತೆ ತಗಡು ಶೀಟ್ ಬಡಿದಿದ್ದರೂ, ನಿರ್ವಹಣೆ ಇಲ್ಲದೆ ವಾಹನಗಳ ಮೇಲೇಯೇ ಬೀಳುತ್ತದೆ. ಕಳೆಸೇತುವೆ ದುರಸ್ತಿ ಕೈಗೊಂಡು, ರಸ್ತೆಗೆ ಡಾಂಬರು ಬದಲು ಕಾಂಕ್ರೀಟ್ ಹಾಕಿದರೆ ಮತ್ತೆ ಮತ್ತೆ ಪ್ಯಾಚ್‌ವರ್ಕ್ ಅವಶ್ಯಕತೆ ಇರುವುದಿಲ್ಲ ಎಂದು ವಾಹನ ಸವಾರರು ಅಭಿಪ್ರಾಯಪಟ್ಟಿದ್ದಾರೆ.

    ರಾತ್ರಿ ವೇಳೆ ಕತ್ತಲು: ಅಂಡರ್‌ಬ್ರಿಡ್ಜ್ ನಿರ್ಮಾಣವಾಗಿ ವರ್ಷಗಳು ಕಳೆದರೂ ಸುಮಾರು 50 ಮೀ. ಉದ್ದದ ಸೇತುವೆ ಒಳಭಾಗದಲ್ಲಿ ವಿದ್ಯುತ್ ದೀಪ ಅಳವಡಿಸದೆ ರಾತ್ರಿ ಕತ್ತಲಲ್ಲೇ ಪ್ರಯಾಣಿಸುವಂತಾಗಿದೆ. ಇದರಿಂದ ರಸ್ತೆಯ ಗುಂಡಿಗಳು ಕಾಣಿಸದೆ ಹಲವರು ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದಿರುವ ಉದಾಹರಣೆಯೂ ಇದೆ.

    ಮಳೆ ನಿಂತ ಬಳಿಕ ರಸ್ತೆಗೆ ಡಾಂಬರು ಹಾಕಿ ದುರಸ್ತಿ ಮಾಡಲಾಗುವುದು. ಪಡೀಲ್ ಅಂಡರ್‌ಪಾಸ್‌ಗಳು ರೈಲ್ವೆ ಇಲಾಖೆಗೆ ಸಂಬಂಧಿಸಿದ್ದು, ಅವುಗಳ ನಿರ್ವಹಣೆ ರೈಲ್ವೆ ಇಲಾಖೆಯೇ ಮಾಡಬೇಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಅದು ಬರುವುದಿಲ್ಲ.
    -ಶಿಶು ಮೋಹನ್
    ಎನ್‌ಎಚ್‌ಎಐ ಯೋಜನಾ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts