More

    ಪಡೀಲ್ ಕ್ರಾಸ್ ಅವೈಜ್ಞಾನಿಕ ತಿರುವು

    ಹರೀಶ್ ಮೋಟುಕಾನ ಮಂಗಳೂರು

    ರಾಷ್ಟ್ರೀಯ ಹೆದ್ದಾರಿ 75ರ ಮರೋಳಿ-ಪಡೀಲ್ ನಡುವಿನ ತಿರುವಿನಲ್ಲಿ ಅಪಘಾತ ಸರಣಿ ಮುಂದುವರಿದಿದೆ. ಆದರೆ ಹೆದ್ದಾರಿ ಪ್ರಾಧಿಕಾರ ಅಥವಾ ಗುತ್ತಿಗೆದಾರ ಸಂಸ್ಥೆ ಅಪಘಾತ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ.

    ಇಲ್ಲಿ ಹೆದ್ದಾರಿ ನಿರ್ಮಾಣಗೊಂಡ ಬಳಿಕ ಸುಮಾರು ಐದು ವರ್ಷಗಳಲ್ಲಿ 100ಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. ಸುಮಾರು 10ಕ್ಕಿಂತಲೂ ಅಧಿಕ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಮಂದಿ ಗಾಯಾಳುಗಳಾಗಿ ಶಾಶ್ವತ ಅಂಗವಿಕಲರಾಗಿದ್ದಾರೆ. ಇಲ್ಲಿರುವಷ್ಟು ಕಡಿದಾದ ತಿರುವು ಹೆದ್ದಾರಿಯಲ್ಲಿ ಎಲ್ಲೂ ಇದ್ದಂತಿಲ್ಲ. ಏಕಾಏಕಿ ತಿರುವು ಎದುರಾಗುವುದರಿಂದ ಚಾಲಕರು, ಸವಾರರು ವಾಹನದ ಮೇಲೆ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತದೆ. ಅಲ್ಲದೆ ಟ್ಯಾಂಕರ್‌ನಂಥ ಘನ ವಾಹನಗಳು ಏಕಾಏಕಿ ತಿರುವು ಪಡೆದುಕೊಳ್ಳುವಾಗ ಅವುಗಳಲ್ಲಿರುವ ಡೀಸೆಲ್, ಆಯಿಲ್, ಡಾಂಬರು ಇಂಥ ಪದಾರ್ಥಗಳು ರಸ್ತೆಗೆ ಚೆಲ್ಲಿ ಅದರ ಹಿಂದಿನಿಂದ ಬರುವ ವಾಹನಗಳು ನಿಯಂತ್ರಣ ಕಳೆದುಕೊಳ್ಳುವಂತಾಗುತ್ತಿವೆ.

    ಹೆದ್ದಾರಿ ಬದಿ ಮರಗಳಿದ್ದು, ಇವು ದೂರದಿಂದ ಗಮನಕ್ಕೆ ಬರುವುದಿಲ್ಲ. ಇದಕ್ಕೆ ಬಿಳಿ ಬಣ್ಣ ಅಥವಾ ರಿಫ್ಲೆಕ್ಟರ್ ಅಳವಡಿಸಬೇಕು. ವಾಹನಗಳು ಡಿಕ್ಕಿ ಹೊಡೆದು ಹಾನಿಗೊಂಡ ಡಿವೈಡರ್ ಹಾಗೆಯೇ ಇದೆ. ಸ್ಥಳದಲ್ಲಿ ಎಚ್ಚರಿಕೆ, ಸೂಚನೆ ಫಲಕಗಳಿಲ್ಲ. ಈ ಸ್ಥಳದಲ್ಲಿ ಐದಾರು ಮಂದಿ ದ್ವಿಚಕ್ರ ವಾಹನ ಸವಾರರು ಓವರ್‌ಟೇಕ್ ಮಾಡುವ ಭರದಲ್ಲಿ ಲಾರಿಗಳ ಅಡಿಗೆ ಬಿದ್ದು ಮೃತಪಟ್ಟಿದ್ದಾರೆ. ಸರಕು ಸಾಗಾಟದ ಹಲವು ಲಾರಿಗಳು ಇಲ್ಲಿ ಪಲ್ಟಿಯಾಗಿ ಬಿದ್ದಿವೆ.

    ಶಾಶ್ವತ ಪರಿಹಾರವೇನು?: ತಿರುವು ಸರಿಪಡಿಸುವುದೊಂದೇ ಅಪಘಾತ ತಡೆಗೆ ಶಾಶ್ವತ ಪರಿಹಾರ. ರಸ್ತೆಯ ಅಂಚಿನಲ್ಲಿ ಸ್ವಲವೂ ಜಾಗ ಇಲ್ಲದಿರುವುದರಿಂದ ಇಲ್ಲಿ ನಡೆದುಕೊಂಡು ಹೋಗುವವರಿಗೂ ವಾಹನಗಳು ಡಿಕ್ಕಿ ಹೊಡೆಯುತ್ತಿವೆ. ಅಪಘಾತಗಳು ನಡೆದಾಗ ಪೊಲೀಸರು, ಹೆದ್ದಾರಿ ಇಲಾಖೆಯವರು, ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ನೋಡಿ ಹೋಗುತ್ತಾರೆ. ಜೀವಗಳು ಹೋಗುತ್ತಲೇ ಇವೆ. ಆದರೆ ಯಾರು ಕೂಡ ಈ ಅವೈಜ್ಞಾನಿಕ ತಿರುವು ಸರಿಪಡಿಸುವ ವಿಷಯದಲ್ಲಿ ಪ್ರಯತ್ನ ನಡೆಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

    ಹೆದ್ದಾರಿಗೆ ಅಗತ್ಯವಾದ ಭೂಸ್ವಾಧೀನಕ್ಕೂ ಕೆಲವೆಡೆ ಸಮಸ್ಯೆ ಇದೆ. ಕೆಲವೊಮ್ಮೆ ನಿರ್ಲಕ್ಷ್ಯದ ಚಾಲನೆಯೂ ಅಪಘಾತಕ್ಕೆ ಕಾರಣವಾಗಿರುತ್ತದೆ. ಅಪಘಾತ ಸಂಭವಿಸುತ್ತಿರುವ ಪಡೀಲ್ ಕ್ರಾಸ್‌ಗೆ ಶೀಘ್ರದಲ್ಲೇ ಶಾಶ್ವತ ಪರಿಹಾರ ಕಲ್ಪಿಸಲಾಗುವುದು.

    ಶಿಶುಮೋಹನ್ 
    ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು

    ಪಡೀಲ್-ಮರೋಳಿ ನಡುವೆ ತಿರುವುಗಳಲ್ಲಿ ಆಗಾಗ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಹಲವು ಬಾರಿ ನಾವು ಹೋಗಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದೇವೆ. ಈ ತಿರುವು ಅವೈಜ್ಞಾನಿಕವಾಗಿದ್ದು, ಅದನ್ನು ಸರಿಪಡಿಸಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ.

    ಕಿಶೋರ್ ಮರೋಳಿ
    ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts