More

    ಮಳೆಗೆ ಭತ್ತ ಬೆಳೆಗಾರ ಕಂಗಾಲು, ಕೈಗೆ ಬಂದ ಫಸಲು ಕಳೆದುಕೊಂಡ ರೈತರು

    ಮಂಗಳೂರು: ಕರಾವಳಿಯಲ್ಲಿ 15-20 ದಿನಗಳಿಂದ ಸುರಿಯುತ್ತಿರುವ ಮಳೆಗೆ ಭತ್ತ ಬೆಳೆದ ರೈತರು ಕಂಗಾಲಾಗಿದ್ದಾರೆ. ಉತ್ತಮವಾಗಿ ಬಂದ ಫಸಲಿಗೆ ಮಳೆಯಿಂದ ಬಹುತೇಕ ಹಾನಿಯಾಗಿದ್ದು, ಸಾವಿರಾರು ರೂ. ವೆಚ್ಚ ಮಾಡಿ ತೆಗೆದ ಬೆಳೆ ಕಣ್ಣೆದುರಲ್ಲೇ ನಾಶವಾಗಿ ಏನೂ ಇಲ್ಲ ಎನ್ನುವಂತಾಗಿದೆ. ಇನ್ನೊಂದೆಡೆ ಬೈಹುಲ್ಲು ಕೂಡ ಜಾನುವಾರುಗಳ ಉಪಯೋಗಕ್ಕೆ ಸಿಗದಂತೆ ಗದ್ದೆಯಲ್ಲೇ ಕೊಳೆತು ಹೋಗಿದೆ.

    ದ.ಕ. ಜಿಲ್ಲೆಯಲ್ಲಿ ಪ್ರಸ್ತಕ ಮುಂಗಾರು ಅವಧಿಯಲ್ಲಿ 10,073 ಮತ್ತು ಉಡುಪಿ ಜಿಲ್ಲೆಯಲ್ಲಿ 35,726 ಹೆಕ್ಟೇರ್ ಸೇರಿ ಉಭಯ ಜಿಲ್ಲೆಯಲ್ಲಿ 45,799 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು. 1,500ಕ್ಕೂ ಹೆಚ್ಚು ಹೆಕ್ಟೇರ್ ಹಡಿಲು ಭೂಮಿಯಲ್ಲಿ ವಿವಿಧ ಸಂಘ ಸಂಸ್ಥೆಗಳಿಂದಲೂ ನಾಟಿ ನಡೆದಿತ್ತು. ಮುಂಗಾರು ಉತ್ತಮವಾಗಿ ಸುರಿದು ನಿರೀಕ್ಷೆಯಂತೆ ಫಸಲೂ ಬಂತು. ಈ ಬಾರಿ ಕೀಟ ಬಾಧೆಯೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಷ್ಟಾಗಿ ಕಾಡದ ಹಿನ್ನೆಲೆಯಲ್ಲಿ ರೈತರೂ ಖುಷಿ ಪಟ್ಟಿದ್ದರು. ಇನ್ನೇನು ಕಟಾವು ಆರಂಭಿಸಬೇಕು ಅನ್ನುವಷ್ಟರಲ್ಲಿ ಅಕಾಲಿಕ ಮಳೆ ಲೆಕ್ಕಾಚಾರವನ್ನೇ ಬದಲಾಯಿಸಿಬಿಟ್ಟಿತು. ಅಕ್ಟೋಬರ್ ಮಧ್ಯಂತರದಿಂದ ಪ್ರತಿನಿತ್ಯ ಎಂಬಂತೆ ಜೋರಾಗಿಯೇ ಮಳೆಯಾಗಿದೆ. ಗದ್ದೆಗಳಲ್ಲಿ ನೀರು ನಿಂತ ಪರಿಣಾಮ ಕಟಾವಿಗೆ ಸಿದ್ಧವಾಗಿದ್ದ ಪೈರು ಅಲ್ಲೇ ಅಡ್ಡ ಬಿದ್ದು ಕೆಲವೆಡೆ ಮೊಳಕೆಯೊಡೆದಿದೆ.

    ಯಾಂತ್ರೀಕೃತ ಕಟಾವು ಮಾಡಿಸಿದರೂ ರೈತರಿಗೆ ಏನೂ ಸಿಕ್ಕಿಲ್ಲ. ಭತ್ತ ಸಂಸ್ಕರಣೆ ಮಾಡಲು ಹಾಗೂ ಬೈಹುಲ್ಲು ಬಳಸುವುದಕ್ಕೂ ಮಳೆ ಅಡ್ಡಪಡಿಸಿದೆ. ನಿರಂತರ ಮಳೆಯಿಂದ ಬೈಹುಲ್ಲಿನಿಂದ ಭತ್ತ ಬೇರ್ಪಡಿಸಿದ ಬಳಿಕ ಬಿಸಿಲಿಗೆ ಒಣಗಿಸಲೂ ಸಾಧ್ಯವಾಗದೆ, ಗುಣಮಟ್ಟ ಹಾಳಾಗಿದೆ. ಯಾಂತ್ರೀಕೃತ ಕಟಾವಿನಲ್ಲಿ ಬೈಹುಲ್ಲು ಹಾಳಾಗುವುದು ಸಾಮಾನ್ಯ. ಅದರಲ್ಲೂ ಬಹುತೇಕ ಗದ್ದೆಯಲ್ಲೇ ಹಾಳಾಗಿರುವುದರಿಂದ ಮುಂದೆ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಸಮಸ್ಯೆಯಾಗಲಿದೆ ಎನ್ನುತ್ತಾರೆ ಕೋಣಾಜೆಯ ಕೃಷಿಕ ಶಿವಾನಂದ.

    72.9 ಹೆಕ್ಟೇರ್ ಹಾನಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳವರೆಗೆ 72.9 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿಗೆ ಹಾನಿಯಾಗಿದೆ ಎನ್ನುವುದು ಕೃಷಿ ಇಲಾಖೆಯಲ್ಲಿ ಸದ್ಯ ಲಭ್ಯವಿರುವ ಅಂಕಿ ಅಂಶ. ಈ ಪೈಕಿ ಮಂಗಳೂರು ತಾಲೂಕಿನಲ್ಲಿ 40 ಹೆಕ್ಟೇರ್, ಬಂಟ್ವಾಳ 2.9, ಮೂಡುಬಿದಿರೆ 10 ಮತ್ತು ಮೂಲ್ಕಿಯಲ್ಲಿ 20 ಹೆಕ್ಟೇರ್ ಭತ್ತ ಬೆಳೆಗೆ ಹಾನಿಯಾಗಿದೆ. ಉಳಿದ ತಾಲೂಕುಗಳಲ್ಲಿ ಎಷ್ಟು ಎಂಬ ಮಾಹಿತಿ ಇಲಾಖೆಯಲ್ಲಿಲ್ಲ. ನವೆಂಬರ್ ತಿಂಗಳ ಹಾನಿ ವಿವರ ಇದರಲ್ಲಿ ಇಲ್ಲ. ಇಲಾಖೆಯಲ್ಲಿ ತೋರಿಕೆಯ ಮಾಹಿತಿಯನ್ನಷ್ಟೇ ನೀಡುತ್ತದೆ. ಜಿಲ್ಲೆಯಲ್ಲಿ ಅಂದಾಜು 2 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಭತ್ತಕ್ಕೆ ಹಾನಿಯಾಗಿದೆ ಎನ್ನುತ್ತಾರೆ ಕೃಷಿಕರು.

    ಉಡುಪಿಯಲ್ಲಿ 86 ಹೆಕ್ಟೇರ್ ಪ್ರದೇಶದಲ್ಲಿ ಹಾನಿ: ಉಡುಪಿ ಜಿಲ್ಲೆಯಲ್ಲಿ 86 ಹೆಕ್ಟೇರ್(215 ಎಕರೆ) ಪ್ರದೇಶದಲ್ಲಿ ಭತ್ತ ಕೃಷಿ ಅಕಾಲಿಕ ಮಳೆಯಿಂದ ಹಾನಿಗೊಳಗಾಗಿದೆ. ಸುಮಾರು 227 ಮಂದಿ ರೈತರು ನಷ್ಟ ಅನುಭವಿಸಿದ್ದಾರೆ. ಕಾರ್ಕಳದಲ್ಲಿ 52, ಕುಂದಾಪುರದಲ್ಲಿ 34, ಕಾಪುವಿನಲ್ಲಿ 46, ಉಡುಪಿಯಲ್ಲಿ 28, ಬ್ರಹ್ಮಾವರದಲ್ಲಿ 21, ಹೆಬ್ರಿಯಲ್ಲಿ 29, ಬೈಂದೂರಿನಲ್ಲಿ 17 ಮಂದಿ ರೈತರು ಬೆಳೆ ಹಾನಿ ವಿಮೆಗಾಗಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.

    ಭತ್ತ ಬೆಳೆ ಹಾನಿ ಕುರಿತಂತೆ ಜಂಟಿ ನಿರ್ದೇಶಕರ ಕಚೇರಿ ಮಟ್ಟದ ಅಧಿಕಾರಿ ಮತ್ತು ಆಯಾ ಗ್ರಾಮ ಲೆಕ್ಕಾಧಿಕಾರಿ ಜಂಟಿ ಸಮೀಕ್ಷೆ ನಡೆಸುತ್ತಾರೆ. ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ಪರಿಹಾರ ದೊರೆಯುತ್ತದೆ. ಅಂತಹ ರೈತರ ಮಾಹಿತಿಯನ್ನು ಇಲಾಖೆಯಿಂದ ಸಂಗ್ರಹಿಸಲಾಗುತ್ತದೆ. ಜತೆಗೆ ಪರಿಹಾರ ಸಾಫ್ಟ್‌ವೇರ್‌ನಲ್ಲಿ ಲೆಕ್ಕಾಧಿಕಾರಿ ಮಾಹಿತಿ ಅಪ್‌ಲೋಡ್ ಮಾಡುತ್ತಾರೆ. ನಮ್ಮ ಇಲಾಖಾ ಮಾಹಿತಿಯನ್ನು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ. ಎರಡೂ ವರದಿಯನ್ನು ಕೃಷಿ ಇಲಾಖೆ ಕೇಂದ್ರ ಕಚೇರಿಯಲ್ಲಿ ಪರಿಶೀಲಿಸಿ ಪರಿಹಾರ ಬಿಡುಗಡೆ ಮಾಡುತ್ತಾರೆ.
    ಡಾ.ಸೀತಾ
    ಜಂಟಿ ನಿರ್ದೇಶಕಿ, ಕೃಷಿ ಇಲಾಖೆ ದ.ಕ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts