More

    ಭತ್ತ ಬೆಳೆಗೆ ಕಂಟಕವಾದ ಚಂಡಮಾರುತ

    ಹೇಮನಾಥ ಪಡುಬಿದ್ರಿ

    ತೌಕ್ತೆ ಚಂಡಮಾರುತ ಪ್ರಭಾವದಿಂದ ಹೆಜಮಾಡಿ ಗ್ರಾಮದ ನಡಿಕುದ್ರು, ಪರಪಟ್ಟ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರು ಹಾಗೂ ಭತ್ತದ ಕೃಷಿ ಮಾಡಲು ಪರದಾಡುವಂತ ಸ್ಥಿತಿ ನಿರ್ಮಿಸಿದೆ.
    ಚಂಡಮಾರುತ ಹಾಗೂ ಮಳೆ ಪ್ರಭಾವದಿಂದ ಶಾಂಭವಿ ನದಿ ಕಡಲು ಸೇರುವ ಅಳಿವೆ ಬಾಗಿಲಿನ ಈ ಪ್ರದೇಶಗಳಿಗೆ ಉಪ್ಪು ನೀರು ನದಿ ಮೂಲಕ ಒಳ ಹರಿದು ಈ ಭಾಗದ 60 ಎಕರೆಗೂ ಅಧಿಕ ಕೃಷಿ ಭೂಮಿ ಹಾಗೂ 30ಕ್ಕೂ ಅಧಿಕ ಬಾವಿಗಳಿಗೆ ಹಾನಿಯುಂಟು ಮಾಡಿದೆ. ಇಲ್ಲಿನ ನಿವಾಸಿಗಳು ಗ್ರಾಮ ಪಂಚಾಯಿತಿ ಪೂರೈಸುವ ನೀರಿಗೆ ಹಾತೊರೆಯುವ ಪರಿಸ್ಥಿತಿ ಒಳಗಾದರೆ, ಜಾನುವಾರುಗಳಿಗೆ ನೀರು ಹಾಗೂ ಮೇವಿಗೂ ತತ್ವಾರ ಉಂಟಾಗಿದೆ.

    ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆಗಾಗಿ ಗೊಬ್ಬರ ಹಾಕಿ ಹದಗೊಳಿಸಿದ ಕೃಷಿ ಭೂಮಿ ಉಪ್ಪು ನೀರು ತುಂಬಿ ಬಿತ್ತನೆ ಮಾಡಲಾಗದೆ ಕೃಷಿಕರನ್ನು ಕಂಗಾಲಾಗಿಸಿದೆ. ಉಪ್ಪು ನೀರು ಇಂಗಿರುವ ಪರಿಣಾಮ ಈ ಬಾರಿ ಭತ್ತ ಬೆಳೆಯುವುದೇ ಅನುಮಾನವಾಗಿದೆ.

    ನೆರೆ ಹಾಗೂ ಉಪ್ಪು ನೀರು ಸಮಸ್ಯೆಗೆ ಸಿಗದ ಮುಕ್ತಿ
    ಕಡವಿನ ಬಾಗಿಲು ಸುಣ್ಣದ ಗೂಡಿನಿಂದ ನಡಿಕುದ್ರು ಸೇತುವೆವರೆಗಿನ ಸುಮಾರು 700 ಮೀಟರ್ ವ್ಯಾಪ್ತಿಯಲ್ಲಿ ನದಿತಡೆಗೋಡೆ ಸಹಿತ ದಂಡೆ ಎತ್ತರಿಸಿದಲ್ಲಿ ಮಾತ್ರ ಉಪ್ಪು ನೀರು ಸಮಸ್ಯೆಗೆ ಪರಿಹಾರ ಸಿಗಲಿದೆ. ತಡೆಗೋಡೆ ಆಗದ ಪರಿಣಾಮ ಪ್ರತಿವರ್ಷ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿ ಕೃಷಿ ಹಾನಿಯಿಂದ ಇಲ್ಲಿನ ಕೃಷಿಕರು ಸಮಸ್ಯೆಯನ್ನು ಎದುರಿಸಿದರೆ ಈ ಬಾರಿ ಚಂಡಮಾರುತ ಆರಂಭದಲ್ಲಿಯೇ ಕೃಷಿ ಚಟುವಟಿಕೆಗೆ ಕಡಿವಾಣ ಹಾಕಿದೆ.
    ಪ್ರತಿ ವರ್ಷವೂ ಬೆಳೆ ಹಾನಿ ಬಗ್ಗೆ ಅಧಿಕಾರಿಗಳು ವರದಿ ಸಂಗ್ರಹಿಸುತ್ತಾರೆ. ಅದರೆ ಅಲ್ಲಿ ಸಿಗುವ ಪರಿಹಾರ ಮಾತ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ನಡಿಕುದ್ರುವಿಗೆ ಶೇ.90 ಭಾಗ ತಡೆಗೋಡೆಯಿದ್ದರೂ ತಡೆಗೋಡೆ ಇಲ್ಲದ ಕಡೆ ಆಗುವ ಹಾವಳಿ ತಪ್ಪಿಸಲು ಸರ್ಕಾರ ಮುಂದಾಗಬೇಕು ಎನ್ನುವ ಕೂಗು ಸ್ಥಳಿಯರದಾಗಿದೆ.

    ಕುಡಿವ ನೀರಿಗೂ ಪರದಾಡುವಂತಾಯ್ತು
    ಸುಮಾರು 300 ವರ್ಷಗಳಿಂದಲೂ ಇಲ್ಲಿನ ಜನ ಕೃಷಿಯನ್ನೇ ಅವಲಂಬಿತರಾಗಿದ್ದಾರೆ. ವಾರ್ಷಿಕ 3 ಬೆಳೆ ಬೆಳೆಯುತ್ತಿದ್ದ ಇಲ್ಲಿನ ಭೂಮಿ ಪ್ರಸ್ತುತ ಉಪ್ಪು ನೀರಿನ ಹಾವಳಿಗೊಳಗಾಗಿ ಏಣಿಲು ಬೆಳೆಗೆ ಸೀಮಿತವಾಗಿದೆ. ಕುಡಿಯುವ ನೀರು ಹೊರತು ಇತರ ಚಟುವಟಿಕೆಗಳಿಗೆ ಬಾವಿಯನ್ನು ಅವಲಂಬಿಸಿದ್ದ ಜನ ಹಾಗೂ ಜಾನುವಾರುಗಳು ಈಗ ಚಂಡಮಾರುತ ಪ್ರಭಾವದಿಂದ ಉಪ್ಪಿ ನೀರು ನುಗ್ಗಿ ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ತಂದಿದೆ ಎಂದು ನಡಿಕುದ್ರುವಿನ ಕೃಷಿಕ ವಾಮನ ಕೋಟ್ಯಾನ್ ತಿಳಿಸಿದ್ದಾರೆ. ಇಲ್ಲಿನ ಸುಮಾರು 33 ಕಟುಂಬಗಳು ಕೃಷಿ ಹಾಗೂ 10ಕ್ಕೂ ಅಧಿಕ ಕುಟುಂಬಗಳು ಹೈನುಗಾರಿಕೆ ಅವಲಂಬಿಸಿವೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಭತ್ತ ಬಿತ್ತನೆಗಾಗಿ ಹದ ಮಾಡಿದ ಭೂಮಿಯಲ್ಲಿ ಕೃಷಿ ಮಾಡದಂತಾಗಿದೆ. ತಡೆಗೋಡೆ ನಿರ್ಮಿಸಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಸಾವಿರಾರು ರೂಪಾಯಿ ವೆಚ್ಚ ಮಾಡಿ ಇರುವ ಒಂದು ಎಕರೆ ಜಮೀನನ್ನು ಗೊಬ್ಬರ ಹಾಕಿ ಹದಗೊಳಿಸಿ ಬಿತ್ತನೆಗೆ ಸಿದ್ಧಪಡಿಸಲಾಗಿದೆ. ಚಂಡಮಾರುತ ಪ್ರಭಾವದಿಂದ ತಡೆಗೋಡೆಯಿಲ್ಲದೆ ಕೃಷಿಭೂಮಿ ಹಾಗೂ ಬಾವಿಗೆ ಉಪ್ಪು ನೀರು ನುಗ್ಗಿದೆ. ಮತ್ತೆ ಬೆಳೆ ಬೆಳೆಯಲಾಗದ ಪರಿಸ್ಥಿತಿ ತಂದಿದ್ದು, ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.
    ನಾಗೇಶ್, ಕಡವಿನ ಬಾಗಿಲು

    ನದಿ ತಡೆಗೋಡೆ ನಿರ್ಮಾಣಕ್ಕೆ ಈಗಾಗಲೇ ಜನಪ್ರತಿನಿಧಿಗಳ ಬಳಿ ಅಲೆದು ಸುಸ್ತಾಗಿದೆ. ನದಿ ಬಳಿಯಲ್ಲಿಯೇ ಮನೆಯಿದ್ದು ಮಳೆಗಾಲದಲ್ಲಿ ಅಪಾಯವನ್ನು ಎದುರಿಸುತ್ತಿದ್ದೇವೆ. ದುಡಿದು ತಿನ್ನುವ ನಾವು ಜೀವ ಕೈಯಲ್ಲಿಡಿದು ಬದುಕುವಂತಹ ಸ್ಥಿತಿ ಇದೆ.
    ಸುಧಾಕರ, ಕಡವಿನಬಾಗಿಲು

    ಸುಮಾರು 700 ಮೀಟರ್ ವ್ಯಾಪ್ತಿಯಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣವಾಗಬೇಕಿದೆ. ಕಂದಾಯ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಶಾಸಕರು ಸ್ಥಳ ಪರಿಶೀಲನೆ ನಡೆಸಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಡ ಹಾಕಲಾಗಿದೆ. ಸಾಕಷ್ಟು ಪರಿಶ್ರಮ ಪಟ್ಟು ನಡಿಕುದ್ರು ಹಾಗೂ ಪರಪಟ್ಟ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಗೆ ಪ್ರಯತ್ನ ಸಾಗಿದೆ.
    ಪ್ರಾಣೇಶ್ ಹೆಜಮಾಡಿ, ಗ್ರಾಪಂ ಅಧ್ಯಕ್ಷ ಹೆಜಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts