More

    ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಪರಿಶೀಲನೆ

    ಹಾವೇರಿ: ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ಶಿಗ್ಗಾಂವಿ ಹಾಗೂ ಸವಣೂರ ತಾಲೂಕು ಆಸ್ಪತ್ರೆಗಳಿಗೆ ಗುರುವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಭೇಟಿ ನೀಡಿ, ಅಗತ್ಯ ಬೇಡಿಕೆಗಳ ಕುರಿತು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

    ತಾಲೂಕು ಆಸ್ಪತ್ರೆಗಳಲ್ಲಿ ದಾಸ್ತಾನಿರುವ ಜಂಬೋ ಹಾಗೂ ಮಿನಿ ಆಕ್ಸಿಜನ್ ಸಿಲಿಂಡರ್​ಗಳ ದಾಸ್ತಾನುಗಳು, ರೆಮ್​ಸಿವರ್, ಔಷಧಗಳ ದಾಸ್ತಾನು, ಐಸಿಯು ಘಟಕ, ವೆಂಟಿಲೇಟರ್ ವ್ಯವಸ್ಥೆ, ಆಕ್ಸಿಜನ್ ಪೂರೈಕೆ ವ್ಯವಸ್ಥೆ ಹಾಗೂ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಹಾಗೂ ಕೋವಿಡ್ ಹಾಗೂ ಇತರ ರೋಗಿಗಳ ಚಿಕಿತ್ಸೆಗೆ ಕೈಗೊಂಡಿರುವ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

    ಈ ಸಂದರ್ಭದಲ್ಲಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆಗಾಗಿ ಅನುಸರಿಸುತ್ತಿರುವ ಕ್ರಮ, ಕೋವಿಡ್ ಪ್ರಮಾಣಿಕೃತ ಮಾರ್ಗಸೂಚಿಯಂತೆ ಅನುಸರಿಸುತ್ತಿರುವ ಕ್ರಮಗಳು, ಆಕ್ಸಿಜನ್ ಹಾಗೂ ಲಸಿಕೆಗಳ ಬೇಡಿಕೆ, ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ ಕರ್ತವ್ಯದ ಪಾಳೆಯ ಹಂಚಿಕೆ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು.

    ರೆಮ್​ಸಿವರ್ ಲಸಿಕೆ ಹಾಗೂ ಆಕ್ಸಿಜನ್ ಸಿಲೆಂಡರ್​ಗಳ ಅವಶ್ಯಕತೆ ಇದ್ದರೆ ಮುಂಜಾಗ್ರತೆಯಾಗಿ ಬೇಡಿಕೆ ಸಲ್ಲಿಸಿದರೆ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಯಾವುದೇ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ. ತಕ್ಷಣ ಪರಿಹಾರ ಒದಗಿಸಲಾಗುವುದು. ವೈದ್ಯಾಧಿಕಾರಿಗಳ ಅವಶ್ಯವಿದ್ದರೆ ಆಯುಷ್ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು. ಗಂಟಲ ದ್ರವ ತಪಾಸಣೆ ಹಾಗೂ ಲಸಿಕೆ ನೀಡುವ ಕಾರ್ಯಯದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣ ನಿವಾರಿಸಲಾಗುವುದು. ಮನೆ ಮನೆ ಭೇಟಿ ನೀಡಿ ತಪಾಸಣೆ ಹಾಗೂ ಲಸಿಕೆ ನೀಡುವ ಕಾರ್ಯವನ್ನು ಚುರುಕುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕುವಾರು ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲೆಯ ಎಲ್ಲ ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿ, ಕೋವಿಡ್ ಪ್ರಮಾಣೀಕೃತ ಮಾರ್ಗಸೂಚಿಯ ಅನುಷ್ಠಾನ, ಮೂಲ ಸೌಕರ್ಯಗಳು, ಪಾಸಿಟಿವ್ ವ್ಯಕ್ತಿಗಳಿಗೆ ಒದಗಿಸಿರುವ ಸೌಲಭ್ಯಗಳು, ಲಸಿಕೆ ಹಾಗೂ ಆಕ್ಸಿಜನ್ ದಾಸ್ತಾನು, ಬೆಡ್​ಗಳ ವ್ಯವಸ್ಥೆ ಸೇರಿ ಸಮಗ್ರವಾಗಿ ಪರಿಶೀಲಿಸಲು ಸೂಚಿಸಲಾಗಿದೆ. ಇವರ ಮಾಹಿತಿ ಆಧರಿಸಿ ಬೇಕಾದ ವ್ಯವಸ್ಥೆಯನ್ನು ಒದಗಿಸಿ ಕೊರತೆಗಳನ್ನು ನೀಗಿಸಲಾಗುವುದು. ಪಾಸಿಟಿವ್ ವ್ಯಕ್ತಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ನಾನೇ ಖುದ್ದಾಗಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

    ಶಿಗ್ಗಾಂವಿ ಕೋವಿಡ್ ನೋಡಲ್ ಅಧಿಕಾರಿ ಡಾ. ವಿವೇಕ, ಫಿಜಿಶಿಯನ್ ಡಾ. ಉದಯ, ಸವಣೂರ ತಾಲೂಕು ಆಸ್ಪತ್ರೆಯ ಕೋವಿಡ್ ನೋಡಲ್ ಅಧಿಕಾರಿ ಡಾ. ರಾಜಶೇಖರ ಮೂಲಿಮನಿ, ಎಂ.ಒ. ಡಾ. ಶಂಕರಗೌಡ ಇತರರು ಉಪಸ್ಥಿತರಿದ್ದರು.

    ಜನತಾ ಕರ್ಫ್ಯ ಇದ್ದ ಹಾಗೆ…

    ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದು ಜನತಾ ಕರ್ಫ್ಯೂ ಇದ್ದಹಾಗೆ, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಹಾಗೂ ಮನೆಯಲ್ಲೇ ಇದ್ದರೆ ಜಿಲ್ಲೆಯಲ್ಲಿ ಕೋವಿಡ್ ಹರಡುವುದನ್ನು ನಿಯಂತ್ರಿಸಬಹುದು. ಸ್ವಯಂ ಪ್ರೇರಣೆಯಿಂದ ನಿಯಮ ಪಾಲನೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಸಂಜಯ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts