More

    ತುಂಬಿ ಹರಿದ ಭೀಮಾ ನದಿ : ತೀರದ ಗ್ರಾಮಗಳಲ್ಲಿ ಆತಂಕ

    ರೇವತಗಾಂವ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಅಪಾರ ನೀರು ಹೊರ ಬಿಡಲಾಗುತ್ತಿದ್ದು, ಭೀಮಾ ನದಿ ದಡದಲ್ಲಿರುವ ವಿಜಯಪುರ ಜಿಲ್ಲೆಯ ಗಡಿ ಗ್ರಾಮಗಳ ಜನರಲ್ಲಿ ಆತಂಕ ಎದುರಾಗಿದೆ.

    ಮಹಾರಾಷ್ಟ್ರದಲ್ಲಿ ಕೆಲವು ದಿನಗಳಿಂದ ಅಪಾರ ಮಳೆಯಾಗುತ್ತಿದ್ದು, ಉಜನ ಜಲಾಶಯ ಪಾತ್ರದಲ್ಲೂ ನಿರಂತರ ಮಳೆ ಸುರಿಯುತ್ತಿದೆ. ಬಹುತೇಕ ಭರ್ತಿಯಾದ ಜಲಾಶಯದಿಂದ ಮಂಗಳವಾರ ಮಧ್ಯಾಹ್ನ 35 ಸಾವಿರ ಕ್ಯೂಸೆಕ್, ಸಂಜೆ 40 ಸಾವಿರ ಕ್ಯೂಸೆಕ್ ಸೇರಿ ಒಟ್ಟು 75 ಸಾವಿರ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಹರಿ ಬಿಡಲಾಗಿದೆ.

    ಈ ನೀರು ಗುರುವಾರ ಬೆಳಗ್ಗೆ ರಾಜ್ಯದ ಗಡಿ ಗ್ರಾಮವಾದ ಚಡಚಣ ತಾಲೂಕಿನ ದಸೂರನಿಂದ ಜಿಲ್ಲೆಯನ್ನು ಪ್ರವೇಶಿಸಿದೆ. ನದಿ ಪಾತ್ರದ ಉಮರಜ, ನೀವರಗಿ, ಗೋವಿಂದಪುರ ಮತ್ತಿತರ ಗ್ರಾಮಗಳಲ್ಲಿ ಅಪಾರ ನೀರು ಹರಿಯುತ್ತಿದೆ.

    ಉಮರಜ, ಉಮರಾಣಿ, ಶಿರನಾಳ, ಹಿಂಗಣಿ, ಧೂಳಖೇಡ ಮುಂತಾದ ಗ್ರಾಮಗಳ ಬಳಿ ಇರುವ ಬ್ರಿಜ್ ಕಂ ಬ್ಯಾರೇಜ್‌ಗಳು ತುಂಬಿ ಹರಿಯುತ್ತಿವೆ. ಕರ್ನಾಟಕ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಉಮರಾಣಿ, ಹಿಂಗಣಿ, ಶಿರನಾಳ ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

    ಇನ್ನೂ ಕೆಲವು ದಿನ ಮಳೆಯಾಗುವ ಮುನ್ಸೂಚನೆ ಇರುವುದರಿಂದ ನದಿಗೆ ಇನ್ನಷ್ಟು ನೀರು ಹರಿದು ಬರುವ ಸಾಧ್ಯತೆಗಳಿದ್ದು, ನದಿ ದಂಡೆಯಲ್ಲಿ ವಾಸವಾಗಿರುವ ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಡಂಗುರ ಸಾರಲಾಗಿದೆ ಎಂದು ಉಮರಜ ಗ್ರಾಮ ಲೆಕ್ಕಾಧಿಕಾರಿ ಜಿ.ಪಿ.ಪಾಟೀಲ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts