More

    ಹೊರಗುತ್ತಿಗೆ ನೌಕರರ ನೇಮಕ ಪದ್ಧತಿ ಕೈಬಿಡಿ

    ಬೆಳಗಾವಿ: ಸರ್ಕಾರಿ ಇಲಾಖೆ, ನಿಗಮಗಳು ಹಾಗೂ ಜಿಪಂಗಳಲ್ಲಿ ಜಾರಿಯಲ್ಲಿರುವ ಹೊರಗುತ್ತಿಗೆ ನೌಕರರ ನೇಮಕ ಪದ್ಧತಿಯನ್ನೇ ರದ್ದುಗೊಳಿಸಬೇಕು. ಅಲ್ಲದೆ, ಅವರ ಸೇವೆಯನ್ನು ಅದೇ ಕಚೇರಿಯಲ್ಲಿ ಕಾಯಂಗೊಳಿಸಿ ಖಾಲಿ ಹುದ್ದೆಗಳಲ್ಲಿ ವಿಲೀನಗೊಳಿಸಬೇಕು ಎಂಬ ಪ್ರಮುಖ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.

    ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ‌್ಯಾಲಿ ನಡೆಸಿದ ಪದಾಧಿಕಾರಿಗಳು, ಸರ್ಕಾರದ ಕ್ರಮ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕವನ್ನು ಗುತ್ತಿಗೆ ನೌಕರ ಪದ್ಧತಿ ಮುಕ್ತ ರಾಜ್ಯವನ್ನಾಗಿ ಮಾಡಬೇಕು. ಹೊರಗುತ್ತಿಗೆ ನೌಕರರು 10-15 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಎಲ್ಲ ನೌಕರರನ್ನು ಸರ್ಕಾರದ ಇಲಾಖೆಗಳಲ್ಲಿ ಅಥವಾ ನಿಗಮಗಳಲ್ಲಿ ಕಾಯಂ ನೌಕರರೆಂದು ವಿಲೀನ ಮಾಡಿ, ಅವರಿಗೂ ಕಾಯಂ ನೌಕರರಿಗೆ ನೀಡುವ ಎಲ್ಲ ಸೌಲಭ್ಯ ಕೊಡಬೇಕು ಎಂದರು.

    ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಾಸ್ಟೆಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರ 8-10 ತಿಂಗಳಿಂದ ವೇತನ ಬಾಕಿ ಇದೆ. ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜ್‌ಗಳಲ್ಲಿ ಅರೆಕಾಲಿಕ ಡಿ ಗ್ರುಪ್ ನೌಕರರನ್ನು ಪೂರ್ಣಕಾಲಿಕ ಡಿ ಗ್ರುಪ್ ಎಂದು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಪ್ರಾದೇಶಿಕ ಆಯುಕ್ತರ ಕಚೇರಿ ಹಾಗೂ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು. ಮಹಾಮಂಡಳ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ, ಬೆಳಗಾವಿ ಜಿಲ್ಲಾಧ್ಯಕ್ಷ ವಿ.ಜಿ. ಸೊಪ್ಪಿನಮಠ, ಬಾಗಲಕೋಟೆ ಜಿಲ್ಲಾಧ್ಯಕ್ಷ ರಾಮಚಂದ್ರ ಸಾಳಂಕೆ, ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ಕೊಂಗಿ, ಸುಬಾಷ ಕ್ಯಾಲಕೊಂಡ, ಪಾರವ್ವ ಲಮಾಣಿ, ಶೋಬಾ ಹೊಸವಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts