More

    ಹೊರಗಿಂದ ಬಂದವರ ಭಯ ಬೇಡ

    ಬೆಳಗಾವಿ: ಹೊರ ರಾಜ್ಯದಿಂದ ಬಂದವರಿಂದ ಸ್ಥಳೀಯರು ಹೆದರುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅಭಯ ನೀಡಿದ್ದಾರೆ.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಹೊರ ರಾಜ್ಯಗಳಿಂದ 5,950 ಜನರು ಬಂದಿದ್ದಾರೆ. ಇದರಲ್ಲಿ ಮಹಾರಾಷ್ಟ್ರದಿಂದಲೇ 4,323 ಜನರು ಆಗಮಿಸಿದ್ದಾರೆ. ಮಹಾರಾಷ್ಟ್ರದಿಂದ ಬಂದ 2 ಸಾವಿರ ಜನರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ 1 ಸಾವಿರ ಜನರ ವರದಿ ಬಂದಿದ್ದು, ಕೇವಲ 4 ರಿಂದ 5 ಜನರಲ್ಲಿ ಮಾತ್ರ ಸೋಂಕು ದೃಢವಾಗಿದೆ. ಹೀಗಾಗಿ ಜನರು ಅನಗತ್ಯವಾಗಿ ಭಯ ಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು.

    ರೆಡ್‌ಜೋನ್ ರಾಜ್ಯದಿಂದ ಬರುವವರಿಗೆ ಮತ್ತೆ ನಿರ್ಬಂಧ ವಿಧಿಸಿದ್ದೇವೆ. ಆದರೆ, ಅವರಿಗೆ ಬರಲು ಅವಕಾಶ ಕೊಡಬೇಕೆಂಬ ಒತ್ತಾಯ ಕೇಳಿ ಬರುತ್ತಿವೆ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಕುಡಚಿ ಕಂಟೇನ್ಮೆಂಟ್ ಮುಕ್ತ: ಜಿಲ್ಲೆಯ ಕುಡಚಿ ತಾಲೂಕಿನಲ್ಲಿ ಪತ್ತೆಯಾಗಿದ್ದ ಎಲ್ಲ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಪಟ್ಟಣವನ್ನು ಕಂಟೇನ್ಮೆಂಟ್ ವಲಯದಿಂದ ಮುಕ್ತಗೊಳಿಸಲಾಗಿದೆ. ಕುಡಚಿ ಪಟ್ಟಣದಲ್ಲಿ ಪತ್ತೆಯಾಗಿದ್ದ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಗ್ರಾಮಾಂತರ ಭಾಗದಲ್ಲಿ ಹೊಸದಾಗಿ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಅವರೆಲ್ಲ ಹೊರಗಿನವರು. ಹಿರೇಬಾಗೇವಾಡಿಯಲ್ಲಿ ಪತ್ತೆಯಾಗಿದ್ದ 49 ಪ್ರಕರಣಗಳ ಪೈಕಿ ಬಹುತೇಕರು ಗುಣಮುಖರಾಗಿದ್ದು, ಕೆಲ ಪ್ರಕರಣಗಳು ಬಾಕಿ ಇವೆ. ಹಿರೇಬಾಗೇವಾಡಿ ಯಲ್ಲಿ ಈಗ ಯಾರೂ ಸ್ಥಳೀಯ ಸೋಂಕಿತರಿಲ್ಲ. ಹೀಗಾಗಿ ಆ ಗ್ರಾಮವನ್ನು ಸ್ವಲ್ಪ ದಿನಗಳಲ್ಲೇ ಕಂಟೇನ್ಮೆಂಟ್ ಮುಕ್ತ ಮಾಡಿ ಆದೇಶ ಹೊರಡಿಸಲಾಗುವುದು ಎಂದರು.

    ರಾಜ್ಯಸಭಾ ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ಸಮಿತಿಯೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಎಂಎಲ್‌ಸಿ ಕವಟಗಿಮಠ, ಶಾಸಕ ಆನಂದ ಮಾಮನಿ ಮತ್ತಿತರರು ಉಪಸ್ಥಿತರಿದ್ದರು.

    ಯುದ್ಧಕ್ಕೆ ಕೈ ಜೋಡಿಸದ ಖಾಸಗಿ ಆಸ್ಪತ್ರೆ

    ಕುಡಚಿ ಮತ್ತು ಹಿರೇಬಾಗೇವಾಡಿಯಲ್ಲಿ ಹೆಚ್ಚು ಕರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಈ ಎರಡೂ ಪ್ರದೇಶಗಳಿಂದ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆ ಇತ್ತು. ಆದರೆ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ, ಕರೊನಾ ಸೇನಾನಿಗಳ ಪ್ರಯತ್ನದಿಂದ ಅದು ಸಾಧ್ಯವಾಗಿಲ್ಲ. ಎಲ್ಲ ಅಧಿಕಾರಿಗಳು ಉತ್ತಮವಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಶೆಟ್ಟರ್, ಖಾಸಗಿ ಆಸ್ಪತ್ರೆಯವರು ಕರೊನಾ ವೈರಸ್‌ಅನ್ನು ಚಾಲೆಂಜ್ ಆಗಿ ತೆಗೆದುಕೊಳ್ಳಲಿಲ್ಲ. ಒಪಿಡಿಯನ್ನೂ ಆರಂಭಿಸಲಿಲ್ಲ. ಯುದ್ಧದ ಸಮಯದಲ್ಲಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ಹೊರಗೇ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts