More

  ಈ ವಾರ ಪರಭಾಷಾ ಸಿನಿಮಾಗಳದ್ದೇ ದರ್ಬಾರ್

  ಹಿಂದಿಯ ‘ಛಪಾಕ್’ ಮತ್ತು ‘ತಾನಾಜಿ’ ಶುಕ್ರವಾರ(ಜ.10) ಹಾಗೂ ತಮಿಳಿನ ‘ದರ್ಬಾರ್’ ಜ.9, ತೆಲುಗಿನ ‘ಸರಿಲೇರು ನೀಕೆವ್ವರು’ ಜ. 11ರಂದು ಬಿಡುಗಡೆ ಆಗುವ ಮೂಲಕ ಕರ್ನಾಟಕದಲ್ಲಿ ಈ ವಾರ ನಾಲ್ಕು ಪರಭಾಷಾ ಸಿನಿಮಾಗಳ ದರ್ಬಾರ್ ಸೃಷ್ಟಿಯಾಗಿದೆ. ಈ ನಾಲ್ಕೂ ಸಿನಿಮಾಗಳ ವೈಶಿಷ್ಟ್ಯ, ಇವುಗಳ ನಡುವಿನ ಪೈಪೋಟಿ ಜತೆಗೆ ಇವುಗಳಿಂದ ಕನ್ನಡ ಸಿನಿಮಾಗಳಿಗೆ ಉಂಟಾಗಬಹುದಾದ ಹಿನ್ನಡೆ ಕುರಿತು ರವಿಕಾಂತ ಕುಂದಾಪುರ ಅವರ ವಿಶ್ಲೇಷಣಾತ್ಮಕ ಬರಹ ಇಲ್ಲಿದೆ.

  ಒಂದೆಡೆ ತಮಿಳು, ಇನ್ನೊಂದೆಡೆ ತೆಲುಗು, ಮತ್ತೊಂದೆಡೆ ಹಿಂದಿ.. ಹೀಗೆ ಈ ವಾರ ಕರ್ನಾಟಕದ ಮಟ್ಟಿಗೆ ಪರಭಾಷಾ ಸಿನಿಮಾಗಳದ್ದೇ ದರ್ಬಾರ್! ಈ ಶುಕ್ರವಾರ (ಜ.10) ಕನ್ನಡದ ಯಾವುದೇ ಸಿನಿಮಾ ಬಿಡುಗಡೆ ಆಗದಿದ್ದರೂ ಈಗಾಗಲೇ ಬಿಡುಗಡೆ ಆಗಿರುವ ಕನ್ನಡ ಚಿತ್ರಗಳವರಿಗೆ ಮುಂದೇನು ಎಂಬ ಆತಂಕ ಕಾಡುತ್ತಿದೆ. ಏಕೆಂದರೆ ರಾಜ್ಯದ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ಪರಭಾಷಾ ಸಿನಿಮಾಗಳೇ ಅಬ್ಬರಿಸುತ್ತಿವೆ. ಅದರಲ್ಲೂ ತೆರೆ ಕಂಡಿರುವ ಪರಭಾಷಾ ಸಿನಿಮಾಗಳಲ್ಲಿ ಕೂಡ ಒಂದಕ್ಕಿಂತ ಒಂದು ಮಿಗಿಲು ಎಂಬಂತಿರುವುದರಿಂದ ಆ ಚಿತ್ರಗಳ ಮಧ್ಯೆಯೂ ತೀವ್ರ ಪೈಪೋಟಿ ಏರ್ಪಟ್ಟಿದೆ. ಸೂಪರ್​ಸ್ಟಾರ್ ರಜನಿಕಾಂತ್ ಅಭಿನಯದ ‘ದರ್ಬಾರ್’, ದೀಪಿಕಾ ಪಡುಕೋಣೆ ಅಭಿನಯಿಸಿರುವ ‘ಚಪಾಕ್’, ಅಜಯ್ ದೇವಗನ್ ನಟಿಸಿರುವ ‘ತಾನಾಜಿ’, ರಶ್ಮಿಕಾ ಮಂದಣ್ಣ ನಾಯಕಿ ಆಗಿರುವ ‘ಸರಿಲೇರು ನೀಕೆವ್ವರು’ ಸಿನಿಮಾಗಳು ಒಟ್ಟೊಟ್ಟಿಗೇ ಬರುತ್ತಿವೆ. ಈ ಪೈಕಿ ‘ದರ್ಬಾರ್’ ಒಂದು ದಿನ ಮುಂಚಿತವಾಗಿಯೇ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದರೆ, ‘ಸರಿಲೇರು ನೀಕೆವ್ವರು’ ಒಂದು ದಿನ ತಡವಾಗಿ ತೆರೆ ಕಾಣುತ್ತಿದೆ. ಅದಾಗ್ಯೂ ಅದ್ದೂರಿ ನಿರ್ವಣದ ಬಹುನಿರೀಕ್ಷಿತ ಈ ನಾಲ್ಕೂ ಸಿನಿಮಾಗಳು ದೊಡ್ಡ ಮಟ್ಟದಲ್ಲೇ ಬಿಡುಗಡೆ ಆಗುವ ಜತೆಗೆ ಇಲ್ಲಿನ ಪ್ರೇಕ್ಷಕರನ್ನು ಸೆಳೆಯುವಂಥ ಅಂಶಗಳು ಇರುವುದರಿಂದ ಇವು ಪರಸ್ಪರ ಸ್ಪರ್ಧಿಗಳಾಗುವ ಸಾಧ್ಯತೆ ಗಳಿವೆ. ಇನ್ನು ಸಿನಿಮಾದ ಕಂಟೆಂಟ್​ನಲ್ಲೂ ವೈಶಿಷ್ಟ್ಯ ಇರುವುದರಿಂದ ಪ್ರೇಕ್ಷಕರು ಯಾವ ಚಿತ್ರದತ್ತ ಒಲಿಯುತ್ತಾರೆ ಎಂಬುದು ಕೂಡ ಸ್ಪಷ್ಟವಾಗಿ ಹೇಳುವುದು ಸುಲಭವಲ್ಲ.

  ಮತ್ತೊಂದೆಡೆ ಪರಭಾಷೆಯ ಈ ಚಿತ್ರಗಳಿಂದ ಸ್ಯಾಂಡಲ್​ವುಡ್​ನ ಸಿನಿಮಾಗಳ ವಿಚಾರದಲ್ಲಿ ಒಂದಷ್ಟು ಏರು-ಪೇರುಗಳಿಗೂ ಕಾರಣವಾಗುವ ಸಾಧ್ಯತೆಗಳೂ ಇವೆ.

  ರಜನಿಕಾಂತ್ ಕ್ರೇಜ್: ಸೂಪರ್​ಸ್ಟಾರ್ ರಜನಿಕಾಂತ್ ಸಿನಿಮಾ ಎಂದರೆ ಅಲ್ಲೊಂದು ಬೇರೆಯದೇ ರೀತಿಯ ದೊಡ್ಡ ಕ್ರೇಜ್ ಇರುತ್ತದೆ. ರಜನಿ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ನೋಡುತ್ತಾರೆ. ಹಾಗಾಗಿ ಈ ಬಾರಿ ಬಿಡುಗಡೆ ಆಗಿರುವ ರಜನಿ ಸಿನಿಮಾ ಹೆಸರಿಗೆ ತಕ್ಕಂತೆ ‘ದರ್ಬಾರ್’ ನಡೆಸಿದರೂ ಅಚ್ಚರಿ ಏನಲ್ಲ. ಏಕೆಂದರೆ ಎ.ಆರ್. ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ರಜನಿಕಾಂತ್ ಜತೆಗೆ ನಯನತಾರಾ, ನಿವೇದಾ ಥಾಮಸ್, ಸುನಿಲ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ರಜನಿಕಾಂತ್ ಈ ಸಿನಿಮಾದಲ್ಲಿ ಮುಂಬೈ ಪೊಲೀಸ್ ಕಮಿಷನರ್ ಆದಿತ್ಯ ಅರುಣಾಚಲಂ ಆಗಿ ಖಾಕಿ ಖದರ್​ನಲ್ಲಿ ಮಿಂಚಿರುವುದರಿಂದ ರಜನಿ ಅಭಿಮಾನಿಗಳ ಜತೆಗೆ ಇದು ಸಾಹಸಪ್ರಿಯರನ್ನೂ ಸೆಳೆಯಲಿದೆ. ಗ್ಲಾಮರ್​ಗೆ ನಯನತಾರಾ, ನಿವೇದಾ ಥಾಮಸ್ ಎಂದು ಇಬ್ಬಿಬ್ಬರು ಇದ್ದಾರೆ. ಇನ್ನು ಈ ಚಿತ್ರ ತಮಿಳು ಜತೆಗೆ ಹಿಂದಿ, ಮಲಯಾಳಂ ಹಾಗೂ ತೆಲುಗಿನಲ್ಲೂ ತೆರೆ ಕಂಡಿರುವುದರಿಂದ ಹಿಂದಿಯೇತರ ಭಾಷೆಗಳ ಸಿನಿಮಾಗಳಿಗೂ ಪ್ರತಿಸ್ಪರ್ಧಿ ಆಗುವ ಲಕ್ಷಣಗಳಿವೆ.

  ತಾನಾಜಿ ಹವಾ ಜೀ..: ಖಡಕ್ ಪಾತ್ರಗಳಲ್ಲೇ ಸಾಕಷ್ಟು ಮಿಂಚಿರುವ ಅಜಯ್ ದೇವಗನ್ ಅಭಿನಯದ ‘ತಾನಾಜಿ’ ಹವಾ ಕೂಡ ಜೋರಾಗಿಯೇ ಇದೆ. ಇದು ಶಿವಾಜಿಯ ಮರಾಠಾ ಸಾಮ್ರಾಜ್ಯದಲ್ಲಿ ಸೇನಾ ನಾಯಕನಾಗಿದ್ದ ತಾನಾಜಿ ಮಲುಸಾರೆ ಜೀವನಾಧಾರಿತ ಚಿತ್ರವಾಗಿದ್ದು, ತಾನಾಜಿ ಆಗಿ ಅಜಯ್ ದೇವಗನ್ ಅಭಿನಯ ಹಾಗೂ ಮತ್ತಿತರ ಕಾರಣಕ್ಕೆ ಆಸಕ್ತಿ ಮೂಡಿಸಿದೆ. ಇನ್ನೊಂದೆಡೆ ಕರ್ನಾಟಕದಲ್ಲಿ ಇತ್ತೀಚೆಗೆ ಉಂಟಾಗಿದ್ದ ಕನ್ನಡ-ಮರಾಠಿ ಸಂಘರ್ಷದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಚಿತ್ರ ತೆರೆ ಕಾಣುತ್ತಿರುವುದು ಕುತೂಹಲ ಕೆರಳಿಸಿದೆ. ಶಿವಾಜಿ ಸಾಮ್ರಾಜ್ಯದ ಕಥೆಯಾದ್ದರಿಂದ ರಾಜ್ಯದ ಗಡಿ ಭಾಗ ಸೇರಿ ಹಲವೆಡೆ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಪ್ರಭಾವ ಬೀರುವುದನ್ನು ಅಲ್ಲಗಳೆಯುವಂತಿಲ್ಲ.  

   

  ಛಪಾಕ್​ ಚಮಕ್ : ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್​ವಾಲ್ ಅವರ ಜೀವನಾಧಾರಿತ ಸಿನಿಮಾ, ‘ಛಪಾಕ್’. ಸ್ತ್ರೀಶೋಷಣೆ, ಮಹಿಳೆ ಮೇಲಿನ ದೌರ್ಜನ್ಯದ ಕುರಿತಾದ ಚಿತ್ರವಾದ್ದರಿಂದ ಇದು ಮಹಿಳಾ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವ ಸಾಧ್ಯತೆ ಅಧಿಕ. ಅದರಲ್ಲೂ ನಾಯಕಿ ಆಗಿರುವ ದೀಪಿಕಾ ಪಡುಕೋಣೆ ಆಸಿಡ್ ಸಂತ್ರಸ್ತೆಯ ರೂಪದಲ್ಲಿ ವಿಶಿಷ್ಟವಾದ ಮೇಕಪ್​ನಲ್ಲಿ ಕಾಣಿಸಿರುವುದರಿಂದಲೂ ಜನರಿಗೆ ಮತ್ತೊಂದು ರೀತಿಯ ಕುತೂಹಲ ಹುಟ್ಟಿದೆ. ಮತ್ತೊಂದೆಡೆ ಆಸಿಡ್ ದಾಳಿ ಸಂತ್ರಸ್ತರು ದೇಶದಲ್ಲಿ ಸಾಕಷ್ಟಿರುವುದರಿಂದ ಇದು ಹಲವರ ಬದುಕಿಗೆ ಹತ್ತಿರದ ಕಥೆ ಆಗಿರುವ ಜತೆಗೆ ಬಹಳಷ್ಟು ಮಂದಿಗೆ ಮುನ್ನೆಚ್ಚರಿಕೆ ಎಂಬಂಥ ಅಂಶಗಳೂ ಇರಬಹುದಾದ್ದರಿಂದ, ರಜನಿ ‘ದರ್ಬಾರ್’ ಮಧ್ಯೆಯೂ ‘ಛಪಾಕ್’ ತನ್ನ ಚಮಕ್ ತೋರುವ ಲಕ್ಷಣಗಳಿವೆ.

  ಕನ್ನಡ ಚಿತ್ರಗಳ ಕಥೆ-ವ್ಯಥೆ!? : ಹೊಸದಾಗಿ ಬಿಡುಗಡೆ ಆಗಬೇಕಿರುವ ಅಥವಾ ಈಗಾಗಲೇ ಬಿಡುಗಡೆ ಆಗಿ ಪ್ರದರ್ಶನವಾಗುತ್ತಿರುವ ಕನ್ನಡದ ಯಾವುದೇ ಚಿತ್ರಕ್ಕೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಚಿತ್ರಮಂದಿರಗಳ ಕೊರತೆ. ಇದಕ್ಕೆ ಬಹುದೊಡ್ಡ ಕಾರಣವೆಂದರೆ ಪರಭಾಷಾ ಸಿನಿಮಾಗಳ ಹಾವಳಿ. ದೊಡ್ಡ ಬಜೆಟ್ ಅಥವಾ ದೊಡ್ಡ ತಾರಾಗಣದ ಪರಭಾಷಾ ಸಿನಿಮಾವೊಂದು ಬಿಡುಗಡೆಯಾದರೆ ಸಾಕು, ದೊಡ್ಡ ಮಟ್ಟದಲ್ಲಿ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿಗಳ ಸಮಸ್ಯೆ ಉಂಟಾಗುವುದು ಖಚಿತ. ಹೀಗಿರುವಾಗ ಒಂದೇ ವಾರದಲ್ಲಿ ಪರಭಾಷೆಯ ನಾಲ್ಕು ದೊಡ್ಡ ಸಿನಿಮಾಗಳು ತೆರೆ ಕಂಡರೆ ಕನ್ನಡ ಸಿನಿಮಾಗಳ ಪರಿಸ್ಥಿತಿ ದೇವರಿಗೇ ಪ್ರೀತಿ. ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡ, ಕನ್ನಡದ ಮಟ್ಟಿಗೆ ಹೊಸ ಆಯಾಮದ ಹಾಗೂ ವಿಶೇಷವಾದ ಸಿನಿಮಾ ಎಂದೇ ಪರಿಗಣಿತವಾದ ‘ಅವನೇ ಶ್ರೀಮನ್ನಾರಾಯಣ’ ಭರ್ಜರಿ ಓಪನಿಂಗ್ ಪಡೆದಿದೆ. ಈ ಮಧ್ಯೆ ಕನ್ನಡ-ಮರಾಠಿ ಸಂಘರ್ಷದಿಂದಾಗಿ ಗಡಿಭಾಗದಲ್ಲಿ ‘..ನಾರಾಯಣ’ನಿಗೆ ಸಮಸ್ಯೆಯಾಗಿ ಅಲ್ಲಿನ ಕೆಲವು ಚಿತ್ರಮಂದಿರಗಳಿಂದ ಸಿನಿಮಾ ವಾಪಸ್ ಪಡೆದಿದ್ದೂ ನಡೆದಿದೆ. ಇದೀಗ ಮರಾಠಿಗರ ಕಥೆ ಇರುವ ‘ತಾನಾಜಿ’ ಸೇರಿ ನಾಲ್ಕು ದೊಡ್ಡ ಸಿನಿಮಾಗಳು ಬಂದಿರುವುದರಿಂದ ‘..ನಾರಾಯಣ’ನಿಗೆ ಹಿನ್ನಡೆ ಉಂಟಾದರೂ ಅಚ್ಚರಿ ಇಲ್ಲ. ‘..ನಾರಾಯಣ’ನ ಕಥೆಯೇ ಹೀಗಾದರೆ ಇನ್ನುಳಿದ ಕನ್ನಡ ಸಿನಿಮಾಗಳ ಕಥೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

  ಒಂದೇ ಖುಷಿ ಎಂದರೆ…: ಪರಭಾಷೆಯ ನಾಲ್ಕು ಸಿನಿಮಾಗಳು ರಾಜ್ಯದಲ್ಲಿ ಅಬ್ಬರಿಸುತ್ತಿದ್ದರೂ ಆ ಬಗ್ಗೆ ಸಂತೋಷ ಪಡುವಂಥ ಒಂದು ಅಂಶ ಕೂಡ ಇದೆ. ಅದೇನೆಂದರೆ, ನಾಲ್ಕು ಚಿತ್ರಗಳ ಪೈಕಿ ಮೂರು ಕನ್ನಡಿಗರ ಚಿತ್ರಗಳಿವೆ. ‘ದರ್ಬಾರ್’ ನ ರಜನಿಕಾಂತ್, ‘ಚಪಾಕ್’ನ ದೀಪಿಕಾ ಪಡುಕೋಣೆ, ‘ಸರಿಲೇರು ನೀಕೆವ್ವರು’ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಮೂಲತಃ ಕನ್ನಡಿಗರೇ. ಆದರೆ ಸಿನಿಮಾ ಪರಭಾಷೆಯದ್ದಾದರೂ ಅದರ ನಾಯಕ-ನಾಯಕಿ ಕನ್ನಡಿಗರೇ ಎಂದು ಖುಷಿ ಪಡಬೇಕೇ ಅಥವಾ ಪರಭಾಷೆಗಳ ಸಿನಿಮಾಗಳ ಮೂಲಕ ಕನ್ನಡಿಗರಿಂದಲೇ ಕನ್ನಡ ಚಿತ್ರಗಳಿಗೆ ಹಿನ್ನಡೆ ಆಗುತ್ತಿದೆ ಎಂದು ಬೇಸರ ಪಡಬೇಕೇ ಎಂಬುದು ಉತ್ತರಿಸಲಾಗದ ದ್ವಂದ್ವ.

  ಹಿಟ್ ನಿರೀಕ್ಷೆಯಲ್ಲಿ ರಶ್ಮಿಕಾ: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಕಿರಿಕ್ ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಸಿನಿಮಾ ‘ಸರಿಲೇರು ನೀಕೆವ್ವರು’ ಶನಿವಾರ (ಜ. 11) ಬಿಡುಗಡೆ ಆಗಲಿದೆ. ರಶ್ಮಿಕಾ ಈಗಾಗಲೇ ಅಭಿನಯಿಸಿರುವ ತೆಲುಗು ಚಿತ್ರಗಳಾದ ‘ಗೀತಾ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಹಿಟ್ ಆಗಿರುವುದರಿಂದ ‘ಸರಿಲೇರು ನೀಕೆವ್ವರು’ ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರವೂ ಗೆದ್ದರೆ ತೆಲುಗಿನಲ್ಲಿ ರಶ್ಮಿಕಾ ಮತ್ತೊಂದು ಹಿಟ್ ಕೊಟ್ಟಂತಾಗುತ್ತದೆ. ನಟಿ ವಿಜಯಶಾಂತಿ ಕೂಡ ಈ ಚಿತ್ರದಲ್ಲಿರುವುದು ಆಕರ್ಷಣೆ ಹೆಚ್ಚಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts