More

    ಪುರಪಿತೃರ ಆಡಳಿತಕ್ಕೆ ಬ್ರೇಕ್ ಇದೇ ಮೊದಲಲ್ಲ

    ಸಂತೋಷ ವೈದ್ಯ ಹುಬ್ಬಳ್ಳಿ

    ಹು-ಧಾ ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದೆ ಇದೀಗ 21 ತಿಂಗಳುಗಳು ಕಳೆದು ಹೋಗಿವೆ. ರಾಜ್ಯದ 2ನೇ ದೊಡ್ಡ ಮಹಾನಗರ ಪಾಲಿಕೆಯಲ್ಲಿ ಪುರಪಿತೃರ ಆಡಳಿತಕ್ಕೆ ಹೀಗೆ ಬ್ರೇಕ್ ಬಿದ್ದಿರುವುದು ಇದೇ ಮೊದಲಲ್ಲ. ಪಾಲಿಕೆಯ 58 ವರ್ಷಗಳ ಇತಿಹಾಸದಲ್ಲಿ ಅವಧಿ ಮುಗಿದ ಕೂಡಲೆ 7 ಬಾರಿ ಹೀಗೆ ಆಗಿದೆ.

    ತಕ್ಷಣ ಚುನಾವಣೆ ನಡೆಸಲು ಸರ್ಕಾರ ಹಿಂದೇಟು ಹಾಕಿರುವುದು, ಸರ್ಕಾರ ಪ್ರಕಟಿಸಿದ ಮೀಸಲಾತಿಗೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ತಕರಾರು ಸಲ್ಲಿಕೆ, ಚುನಾವಣೆ ನಡೆದ ಮೇಲೂ ಮೇಯರ್-ಉಪ ಮೇಯರ್ ಮೀಸಲಾತಿ ಸಂಬಂಧ ಗೊಂದಲ, ಇತ್ಯಾದಿ ಕಾರಣಗಳಿಂದ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ತಡೆರಹಿತವಾಗಿ ನಡೆದಿಲ್ಲ. ಆಗಾಗ ಅಧಿಕಾರಿಗಳು ದರ್ಬಾರ್ ನಡೆಸಿದ್ದಾರೆ.

    ಇತ್ತೀಚಿನ ವಿದ್ಯಮಾನ ಗಮನಾರ್ಹ. 2019 ಮಾರ್ಚ್ 6ರಂದು ಅವಧಿ ಮುಗಿದ ಕೂಡಲೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಆಸಕ್ತಿ ತೋರಲಿಲ್ಲ. ಬಳಿಕ ಲೋಕಸಭೆ ಚುನಾವಣೆಯಲ್ಲಿ 2 ತಿಂಗಳು ಕಳೆದು ಹೋಯಿತು. ಕೆಲ ತಿಂಗಳುಗಳ ಬಳಿಕ ವಾರ್ಡ್​ವಾರು ಮೀಸಲಾತಿ ಪ್ರಕಟಿಸಿತು. ತಕ್ಷಣ ಇದನ್ನು ಬದಲಾಯಿಸಿ 2ನೇ ಬಾರಿ ಮೀಸಲಾತಿ ಪ್ರಕಟಿಸಿ ಗೊಂದಲವನ್ನು ಸೃಷ್ಟಿಸಿಕೊಂಡಿದೆ. ಮೀಸಲಾತಿ ಹಾಗೂ ವಾರ್ಡ್​ಗಳ ಪುನರ್ ರಚನೆ (ವಾರ್ಡ್ ಸಂಖ್ಯೆ 67ರಿಂದ 82ಕ್ಕೆ ಏರಿಕೆ) ಸಂಬಂಧ ಕೆಲವರು ನ್ಯಾಯಾಲಯಕ್ಕೆ ತಕರಾರು ಸಲ್ಲಿಸಿ ವರ್ಷ ಕಳೆದರೂ ರಾಜ್ಯ ಸರ್ಕಾರ ಕಾಲಹರಣ ಮಾಡಿದ್ದು ಸ್ಪಷ್ಟ. ಕಳೆದೊಂದು ತಿಂಗಳಿಂದ ಸರ್ಕಾರ ಎಚ್ಚೆತ್ತುಕೊಂಡಂತಿದ್ದು ತ್ವರಿತ ಬೆಳವಣಿಗೆಗಳು ನಡೆದಿವೆ.

    8 ವರ್ಷಗಳ ಅಂತರ: ಪಾಲಿಕೆಯಲ್ಲಿ ಒಮ್ಮೆ 8 ವರ್ಷಗಳ ಕಾಲ (1975ರಿಂದ 83) ಚುನಾಯಿತ ಪ್ರತಿನಿಧಿಗಳ ಆಡಳಿತವಿರಲಿಲ್ಲ. ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರು ಆಗ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆ (ಯುಎಲ್​ಬಿ)ಗಳ ಆಡಳಿತವನ್ನು ಸೂಪರ್​ಸೀಡ್ ಮಾಡಿದ್ದರು. 1980ರಿಂದ 83ರ ವರೆಗೆ ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರೂ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿಲ್ಲ. 1983ರಲ್ಲಿ ಮುಖ್ಯಮಂತ್ರಿಯಾದ ರಾಮಕೃಷ್ಣ ಹೆಗಡೆಯವರು ಚುನಾವಣೆ ನಡೆಸಿದರು. ‘ಆಗ ಅಕ್ಟ್ರಾಯ್ (ತೆರಿಗೆ) ಜಾರಿಯಲ್ಲಿತ್ತು. ಹಾಗಾಗಿ ಸರ್ಕಾರದ ಅನುದಾನಕ್ಕೆ ಪಾಲಿಕೆ ದುಂಬಾಲು ಬೀಳುವ ಅಗತ್ಯವಿರಲಿಲ್ಲ. ಮುಖ್ಯಮಂತ್ರಿಯವರು ಅವಳಿ ನಗರಕ್ಕೆ ಭೇಟಿ ನೀಡಿದರೂ ಪಾಲಿಕೆ ಸದಸ್ಯರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದನ್ನೆಲ್ಲ ಗಮನಿಸಿದ ದೇವರಾಜ ಅರಸು ಸಿಟ್ಟಿನಿಂದ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳನ್ನು ಸೂಪರ್​ಸೀಡ್ ಮಾಡಿದ್ದರು’ ಎಂದು ಪಾಲಿಕೆಯ ಮಾಜಿ ಸದಸ್ಯರೊಬ್ಬರು ನೆನಪಿಸಿಕೊಳ್ಳುತ್ತಾರೆ.

    ನಲವಡಿ ಮೊದಲ ಮೇಯರ್: 20 ಕಿ.ಮೀ. ಅಂತರದಲ್ಲಿರುವ ಹುಬ್ಬಳ್ಳಿ ಮತ್ತು ಧಾರವಾಡ ಎರಡು ನಗರವನ್ನು ಸೇರಿಸಿ 1962ರಲ್ಲಿ ಹು-ಧಾ ಮಹಾನಗರ ಪಾಲಿಕೆಯನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಆಗ ಮೊದಲ ಮೇಯರ್ ಆಗಿದ್ದವರು ಆರ್.ಜಿ. ನಲವಡಿ. ಅವರು ಸರ್ಕಾರದಿಂದ ನಾಮಕರಣಗೊಂಡಿದ್ದರು. ಮೇಯರ್ ಆಯ್ಕೆಗೆ ಚುನಾವಣೆ ನಡೆದಿರಲಿಲ್ಲ. ನಲವಡಿ ಅವರು 1962ರ ಮಾರ್ಚ್ 1ರಿಂದ 1968ರ ಜೂನ್ 2ರವರೆಗೆ ಮೇಯರ್ ಆಗಿದ್ದರು. ತದನಂತರ ಒಂದು ವರ್ಷದ ಅವಧಿಗೆ ಮೇಯರ್-ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಸಿಕೊಂಡು ಬರಲಾಗಿದೆ. ಮೀಸಲಾತಿ ಗೊಂದಲ, ನ್ಯಾಯಾಲಯದಲ್ಲಿ ತಕರಾರು, ಚುನಾವಣೆ ನಡೆಸಲು ಸರ್ಕಾರದ ಅನಾಸಕ್ತಿ… ಇಂಥ ಅಡೆತಡೆಗಳು ಇಲ್ಲದಿದ್ದರೆ ಹು-ಧಾ ಮಹಾನಗರ ಪಾಲಿಕೆ ಇಲ್ಲಿಯವರೆಗೆ 55ನೇ ಮೇಯರ್-ಉಪ ಮೇಯರ್ ಆಡಳಿತದಲ್ಲಿ ಇರುತ್ತಿತ್ತು. ಬಿಜೆಪಿಯ ಸುಧೀರ ಸರಾಫ್ 39ನೇ ಮೇಯರ್ ಆಗಿ 2019ರ ಮಾರ್ಚ್ 6ರಂದು ಅಧಿಕಾರ ಪೂರ್ಣಗೊಳಿಸಿದ್ದಾರೆ.

    ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದ ಅವಧಿ

    1. 22-08-1975ರಿಂದ 03-09-1983

    2. 31-12-1988ರಿಂದ 28-05-1990

    3. 02-05-1995ರಿಂದ 14-02-1996

    4. 13-02-2001ರಿಂದ 19-06-2001

    5. 18-06-2006ರಿಂದ 01-03-2008

    6. 03-03-2013ರಿಂದ 07-03-2014

    7. 06-03-2019ರಿಂದ ——?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts