More

    ಪುರಸಭೆಯಲ್ಲಿ ಬಾಲೆಯರ ದರ್ಬಾರ್

    ಚಿಕ್ಕೋಡಿ: ವಿಶ್ವ ಮಹಿಳಾ ದಿನದ ಅಂಗವಾಗಿ ಇಲ್ಲಿನ ಪುರಸಭೆಯಲ್ಲಿ ಬಾಲಕಿಯರೇ ಸೋಮವಾರ ಆಡಳಿತ ನಡೆಸುವ ಮೂಲಕ ಗಮನ ಸೆಳೆದರು. ವಾರ್ಡ್‌ಗಳ ಸದಸ್ಯೆಯರಾಗಿ, ಸಭೆ ನಡೆಸಿದರು. ಸಮಸ್ಯೆಗಳನ್ನು ತಿಳಿಸಿ, ಅಧಿಕಾರ ನಿರ್ವಹಿಸಿ ಸೈ ಎನಿಸಿಕೊಂಡರು.

    ಪುರಸಭೆ ಆವರಣದಲ್ಲಿ ಬೆಳಗ್ಗೆ ನೂತನವಾಗಿ ಒಂದು ದಿನದ ಮಟ್ಟಿಗೆ ಆಯ್ಕೆಯಾದ ಚಿಕ್ಕೋಡಿ ಪಟ್ಟಣದ ವಿವಿಧ ಕಾಲೇಜಿನ ಬಾಲಕಿಯರು ಮಹಿಳೆಯರಿಂದ ಒಂದು ದಿನದ ಅಧಿಕಾರ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿತ್ತು. ಚಿಕ್ಕೋಡಿ ಪಟ್ಟಣದ 23 ವಾರ್ಡ್‌ಗಳ ಸದಸ್ಯೆಯರನ್ನಾಗಿ ನೇಮಿಸಲಾಯಿತು. ಬಳಿಕ ಸದಸ್ಯರು ಮತದಾನದ ಮೂಲಕ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆಯನ್ನು ಆಯ್ಕೆ ಮಾಡಿದರು. ಒಂದು ದಿನದ ಮಟ್ಟಿಗೆ ಅಧ್ಯಕ್ಷೆಯಾಗಿ ಶ್ರೀಪ್ರಿಯಾ ಕುಲಕರ್ಣಿ, ಉಪಾಧ್ಯಕ್ಷೆಯಾಗಿ ತೇಜಸ್ವಿನಿ ಮಲಾಡೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜ್ಯೋತಿ ಹಿರೇಮಠ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಮುಖ್ಯಾಧಿಕಾರಿ ಡಾ.ಸುಂದರ ರೋಗಿ ಘೋಷಿಸಿದರು. ಬಳಿಕ ಹಾಲಿ ಪುರಸಭೆ ಅಧ್ಯಕ್ಷ ಪ್ರವಿಣ ಕಾಂಬಳೆ, ಉಪಾಧ್ಯಕ್ಷ ಜಗದೀಶ ಕವಟಗಿಮಠ ಹೂಗುಚ್ಛ ನೀಡಿ, ಗೌರವಿಸಿದರು.

    ವಾರ್ಡ್ ಸಮಸ್ಯೆ ಮನವರಿಕೆ: ಸದಸ್ಯರ ಆಯ್ಕೆ ನಂತರ ಜರುಗಿದ ಸಭೆಯಲ್ಲಿ ಸದಸ್ಯರು ತಮ್ಮ ವಾರ್ಡ್ ಸಮಸ್ಯೆಗಳನ್ನು ತಿಳಿಸಿದರು. ಮುಖ್ಯವಾಗಿ ಎಲ್ಲ ಸದಸ್ಯರೂ ಕುಡಿಯುವ ನೀರಿನ ಸಮಸ್ಯೆ ಕುರಿತು ಗಮನ ಸಳೆದರು. ತಕ್ಷಣ ಉಪನಗರಗಳಲ್ಲಿ 24್ಡ7 ನೀರು ಪೂರೈಕೆ ಯೋಜನೆ ರೂಪಿಸಬೇಕು. ಜಲಕುಂಭಗಳ ಸ್ವಚ್ಛತೆ, ನಳಕ್ಕೆ ಲಾಕ್ ಅಳವಡಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದಲ್ಲಿ ಹಂದಿಗಳ ಕಾಟ, ಒಳಚರಂಡಿ ಸಮಸ್ಯೆ, ಕಸದ ವಾಹನ ಎಲ್ಲ ಕಡೆ ನಿಲ್ಲಬೇಕು ಎಂದು ಸದಸ್ಯರು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಪೌರ ಕಾರ್ಮಿಕರ ಸಮಸ್ಯೆ ಇದೆ ಎಂದರು. ಮಹಾಲಕ್ಷ್ಮೀ ನಗರ, ಕೋರೆ ನಗರದಲ್ಲಿ ತೆರದ ಬಾವಿಯಲ್ಲಿ ಕಸ ಡಂಪ್ ಮಾಡಲಾಗುತ್ತಿದೆ. ಕೂಡಲೇ ಬಾವಿ ಮುಚ್ಚಿಸಬೇಕು. ಚಿಕ್ಕೋಡಿ ಪಟ್ಟಣದಲ್ಲಿ ಪಾಳು ಮನೆಗಳಿದ್ದು, ಅಸ್ವಚ್ಛತೆಯಿಂದ ಕೂಡಿವೆ. ಸಾರ್ವಜನಿಕ ಶೌಚಗೃಹಗಳ ಅಸ್ವಚ್ಛತೆ, ಬೇಪಾರ್ ಗಲ್ಲಿ, ಮುಲ್ಲಾ ಪ್ಲಾಟ್, ಜಾಹಿರ್ ಗಲ್ಲಿಗಳಲ್ಲಿ ಇರುವ ಮೂಲ ಸೌಕರ್ಯ ಸಮಸ್ಯೆಗಳನ್ನು ತಿಳಿಸಿದರು. ಎಲ್ಲ ಸಮಸ್ಯೆಗಳನ್ನು ಸಕಾರಾತ್ಮಕ ಪರಿಗಣಿಸಿ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

    ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಎಲ್ಲ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ವೀಣಾ ಕವಟಗಿಮಠ, ಶಾಂಭವಿ ಅಶ್ವತ್ಥಪುರ ಹಾಗೂ ರಾಜಶ್ರೀ ಗವನಾಳೆ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಪ್ರಾಜಕ್ತಾ ಕಾಂಬಳೆ ಸ್ವಾಗತಿಸಿದರು. ಸಾಗರ ಬಿಸ್ಕೋಪ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

    ಮಹಿಳೆಯರು ಹಾಗೂ ಬಾಲಕಿಯರಲ್ಲಿ ನಾಗರಿಕ ಪ್ರಜ್ಞೆ ಹಾಗೂ ಮುಂದಿನ ದಿನಗಳಲ್ಲಿ ಪುರಸಭೆ ಸದಸ್ಯೆಯರಾಗಿ ಕಾರ್ಯ ನಿರ್ವಹಿಸುವುದನ್ನು ತಿಳಿದುಕೊಳ್ಳಲು ಈ ನೂತನ ಪ್ರಯೋಗ ಸಹಕಾರಿಯಾಗಬಹುದು. ಮಹಿಳಾ ಸಬಲೀಕರಣದ ಭಾಗವಾಗಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವಶ್ಯ.
    | ಜಗದೀಶ ಕವಟಗಿಮಠ ಪುರಸಭೆ ಮಾಜಿ ಅಧ್ಯಕ್ಷ, ಚಿಕ್ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts