More

    ಆಸ್ಟ್ರೇಲಿಯನ್ ಓಪನ್ ಗೆದ್ದ ಜಪಾನ್ ತಾರೆ ನವೊಮಿ ಒಸಾಕಾ

    ಮೆಲ್ಬೋರ್ನ್: ಜಪಾನ್ ತಾರೆ ನವೊಮಿ ಒಸಾಕಾ ಸತತ 2ನೇ ಹಾಗೂ ಒಟ್ಟಾರೆ 4ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಮೆರಿಕದ ಜೆನ್ನಿಫರ್ ಬ್ರಾಡಿ ವಿರುದ್ಧ ಜಯ ದಾಖಲಿಸಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಒಲಿಸಿಕೊಳ್ಳುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಮೆಲ್ಬೋರ್ನ್ ಪಾರ್ಕ್‌ನ ರಾಡ್ ಲೆವರ್ ಅರೇನಾದ ಹಾರ್ಡ್‌ಕೋರ್ಟ್‌ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 3 ಒಸಾಕಾ 6-4, 6-3 ನೇರಸೆಟ್‌ಗಳಿಂದ 22ನೇ ಶ್ರೇಯಾಂಕಿತೆ ಜೆನ್ನಿಫರ್ ಬ್ರಾಡಿಯನ್ನು ಮಣಿಸಿದರು. ಒಂದು ಗಂಟೆ ಮತ್ತು 17 ನಿಮಿಷಗಳಲ್ಲಿ ಅಂತ್ಯಗೊಂಡ ಪ್ರಶಸ್ತಿ ಹೋರಾಟದಲ್ಲಿ ಒಸಾಕಾ, 25 ವರ್ಷದ ಅಮೆರಿಕ ಆಟಗಾರ್ತಿಯಿಂದ ಹೆಚ್ಚಿನ ಪ್ರತಿರೋಧ ಎದುರಿಸಲಿಲ್ಲ. ಮೊದಲ ಸೆಟ್ 4-4ರಿಂದ ಸಮಬಲಗೊಂಡ ಬಳಿಕ ಸತತ 6 ಗೇಮ್ ಗೆದ್ದು 2ನೇ ಸೆಟ್‌ನಲ್ಲೂ 4-0ಯಿಂದ ಮುನ್ನಡೆ ಪಡೆದ ಒಸಾಕಾ ಗೆಲುವಿನ ಹಾದಿಯನ್ನು ಸುಲಭವಾಗಿಸಿಕೊಂಡರು.

    23 ವರ್ಷದ ಒಸಾಕಾಗೆ ಇದು 2ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲುವಾಗಿದೆ. ಈ ಮುನ್ನ 2019ರಲ್ಲಿ ಅವರು ಇಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದರು. ಅವರು ಇನ್ನೆರಡು ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನು ಯುಎಸ್ ಓಪನ್‌ನಲ್ಲಿ (2018, 2020) ಜಯಿಸಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ಅಮೆರಿಕದ ದಿಗ್ಗಜ ಆಟಗಾರ್ತಿ ಸೆರೇನಾ ವಿಲಿಯಮ್ಸ್‌ಗೆ ಸೋಲುಣಿಸಿ ಬೀಗಿದ್ದರು. ಇದೀಗ ವೃತ್ತಿಪರ ಟೆನಿಸ್‌ನಲ್ಲಿ ಒಸಾಕಾರ ಸತತ ಗೆಲುವಿನ ಓಟ 21 ಪಂದ್ಯಗಳಿಗೆ ವಿಸ್ತರಿಸಿದೆ. ಇದೇ ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಫೈನಲ್‌ಗೇರಿದ್ದ ಬ್ರಾಡಿ, ಒಸಾಕಾರ ಬಲಿಷ್ಠ ಆಟದೆದುರು ಮಂಕಾದರು. ಪಂದ್ಯಕ್ಕೆ ಸುಮಾರು ಏಳೂವರೆ ಸಾವಿರ ಪ್ರೇಕ್ಷಕರು ಸಾಕ್ಷಿಯಾಗಿದ್ದರು.

    ಇದನ್ನೂ ಓದಿ: ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಬಾಬರ್ ಅಜಮ್ ಕುಸಿತ, ಕನ್ನಡಿಗ ಕೆಎಲ್ ರಾಹುಲ್‌ಗೆ ಲಾಭ!

    ಒಸಾಕಾ ಈಗ ಆಡಿದ ಎಲ್ಲ 4 ಗ್ರಾಂಡ್ ಸ್ಲಾಂ ಫೈನಲ್‌ಗಳಲ್ಲೂ ಗೆದ್ದಿದ್ದಾರೆ. 30 ವರ್ಷಗಳ ಹಿಂದೆ ಮೋನಿಕಾ ಸೆಲೆಸ್ ವೃತ್ತಿಜೀವನದಲ್ಲಿ ಇಂಥ ಅಜೇಯ ಆರಂಭ ಕಂಡಿದ್ದರು. ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಕ್ವಾರ್ಟರ್​ಫೈನಲ್ ಮತ್ತು ಅದಕ್ಕಿಂತ ಮೇಲಿನ ಹಂತದಲ್ಲಿ ಆಡಿದ ಯಾವ ಪಂದ್ಯದಲ್ಲೂ ಅವರು ಸೋಲು ಕಂಡಿಲ್ಲ. ಜಪಾನ್ ಮೂಲದವರಾದರೂ ಒಸಾಕಾ 3ನೇ ವಯಸ್ಸಿನಿಂದ ಅಮೆರಿಕದಲ್ಲೇ ಬೆಳೆದವರಾಗಿದ್ದಾರೆ.

    ನವೊಮಿ ಒಸಾಕಾ ವೃತ್ತಿಜೀವನದಲ್ಲಿ ಗೆದ್ದ ಎಲ್ಲ 4 ಗ್ರಾಂಡ್ ಸ್ಲಾಂ ಪ್ರಶಸ್ತಿಗಳು ಹಾರ್ಡ್‌ಕೋರ್ಟ್‌ಗಳಲ್ಲೇ ಒಲಿದಿವೆ. ಫ್ರೆಂಚ್ ಓಪನ್, ವಿಂಬಲ್ಡನ್‌ನಲ್ಲಿ ಅವರೆಂದೂ 3ನೇ ಸುತ್ತಿಗಿಂತ ಮೇಲೇರಿಲ್ಲ. ತಾನಾಡಿದ ಕೊನೇ 8 ಗ್ರಾಂಡ್ ಸ್ಲಾಂಗಳಲ್ಲೇ ಅವರು ಈ 4 ಪ್ರಶಸ್ತಿ ಜಯಿಸಿರುವುದು ವಿಶೇಷ. ವಿಲಿಯಮ್ಸ್ ಸಹೋದರಿಯರ ಹೊರತಾಗಿ ಬೇರೆ ಯಾವ ಹಾಲಿ ಆಟಗಾರ್ತಿಯರೂ ಒಸಾಕಾಗಿಂತ ಹೆಚ್ಚು ಗ್ರಾಂಡ್ ಸ್ಲಾಂ ಜಯಿಸಿಲ್ಲ. ಚಾಂಪಿಯನ್ ನವೊಮಿ ಒಸಾಕಾ 15.70 ಕೋಟಿ ರೂ. ಬಹುಮಾನ ಪಡೆದರೆ, ರನ್ನರ್‌ಅಪ್ ಬ್ರಾಡಿ 8.56 ಕೋಟಿ ರೂ. ಗಳಿಸಿದರು.

    ಐಪಿಎಲ್ 2021 : ಪಂಜಾಬ್ ಕಿಂಗ್ಸ್ ತಂಡ ಸೇರಿದ ಶಾರುಖ್ ಖಾನ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts