More

    ಸಾವಯವ ಕೃಷಿಗೆ ಬ್ರಾಂಡ್ ನೇಮ್

    ಪುರುಷೋತ್ತಮ ಪೆರ್ಲ ಕಾಸರಗೋಡು
    ವೈಜ್ಞಾನಿಕ ರೀತಿಯಲ್ಲಿ ತರಕಾರಿ ಕೃಷಿ ನಡೆಸುತ್ತಿರುವ ನಾರಾಯಣನ್ ಕಣ್ಣಾಲಯಂ ಪ್ರಸಕ್ತ ಕಾಸರಗೋಡು ಜಿಲ್ಲೆಯಲ್ಲಿ ಸಾವಯವ ಕೃಷಿಗೆ ಬ್ರಾಂಡ್ ನೇಮ್ ಆಗಿದ್ದಾರೆ. ಪರಿಸರ ಸ್ನೇಹಿ ಕೃಷಿ ಚಟುವಟಿಕೆಯಿಂದ ನಾರಾಯಣನ್ ಹೆಸರು ನಾಡಿನ ಉದ್ದಗಲಕ್ಕೂ ವ್ಯಾಪಿಸಿದೆ. 80ಕ್ಕೂ ಹೆಚ್ಚು ವರ್ಗದ ಅಲಸಂಡೆ, ಬೀನ್ಸ್ ತಳಿ ಇವರ ತೋಟದಲ್ಲಿದೆ.

    ಕಾಸರಗೋಡು-ಚೆರ್ಕಳ-ಕಣ್ಣೂರು ರಾಷ್ಟ್ರೀಯ ಹೆದ್ದಾರಿಯ ಪೆರಿಯದಿಂದ ಐದು ಕಿ.ಮೀ ದೂರದ ಅಯಂಬಾರದಲ್ಲಿ ಕಣ್ಣಾಲಯಂ ತೋಟವಿದೆ. ಪಡುವಲ, ಬೆಂಡೆ, ಬದನೆ, ಕ್ಯಾರೆಟ್, ಸೌತೆ, ಕಾಲಿಫ್ಲವರ್, ಶುಂಠಿ, ಬಾಳೆ, ಅರಸಿನ, ಸಿಹಿ ಗೆಣಸು, ಮರಗೆಣಸು, ಸುವರ್ಣಗೆಡ್ಡೆ, ಕಬ್ಬು, ಅಡಕೆ, ತೆಂಗು, ರಬ್ಬರ್ ಹೀಗೇ ಮುಂದುವರಿಯುತ್ತದೆ ಕಣ್ಣಾಲಯಂ ತೋಟದ ಬೆಳೆಗಳ ಪಟ್ಟಿ. ಏಳು ಪ್ರಭೇದಗಳ ಬಾಳೆ ಗಿಡ, ಲಿಂಬೆಗಿಡಗಳು ಇವರ ತೋಟದಲ್ಲಿವೆ. ಸುಮಾರು ಏಳು ಎಕರೆ ವಿಸ್ತೀರ್ಣದಲ್ಲಿ ಕೃಷಿ ನಡೆಸುತ್ತಿದ್ದಾರೆ. ಅಗತ್ಯಕ್ಕಷ್ಟೆ ಕಾರ್ಮಿಕರನ್ನು ಬಳಸಿಕೊಳ್ಳುವ ಇವರು, ಉಳಿದ ದಿನ ತನ್ನ ತಾಯಿ ಶ್ರೀಜಾ, ಪತ್ನಿ ಶಾಂತಾ ಅವರ ನೆರವು ಪಡೆದುಕೊಳ್ಳುತ್ತಾರೆ. 77ರ ಹರೆಯದಲ್ಲೂ ತಾಯಿ ಶ್ರೀಜಾ ತೋಟದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ನಡೆಸುತ್ತಿದ್ದು, ಉತ್ತಮ ಆರೋಗ್ಯ ಕಾಯ್ದುಕೊಂಡಿದ್ದಾರೆ. ಇನ್ನು ನಾರಾಯಣನ್ ಜಲಸಂರಕ್ಷಣೆಗೂ ಆದ್ಯತೆ ನೀಡಿದ್ದಾರೆ. ಕೊಳವೆಬಾವಿಯ ಜತೆಗೆ ಕೆರೆ, ಸುರಂಗ ಜಮೀನಿನಲ್ಲಿದೆ. ನೀರಿಂಗಿಸುವ ಮೂಲಕ ಜಲಸಂರಕ್ಷಣೆಗೂ ಆದ್ಯತೆ ನೀಡಿದ್ದಾರೆ.

    ಕಾಸರಗೋಡಿನ ಮಲಯಾಳ ಸಂಜೆ ಪತ್ರಿಕೆಯೊಂದರಲ್ಲಿ 25 ವರ್ಷಗಳಿಂದ ಹಿರಿಯ ಉಪ ಸಂಪಾದಕರಾಗಿ ದುಡಿಯುತ್ತಿರುವ ಕಣ್ಣಾಲಯಂ ಬೆಳಗ್ಗೆ 5ಕ್ಕೆ ತೋಟಕ್ಕೆ ಹೊರಟು ನೀರುಣಿಸುವುದು, ಇತರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. 7.30ಕ್ಕೆ ಕಚೇರಿಗೆ ಹೊರಡುತ್ತಾರೆ. ಸಂಜೆ 4ಕ್ಕೆ ಮನೆಗೆ ವಾಪಸಾಗುವ ಇವರು ತಲೆಗೊಂದು ಹೆಡ್ ಲ್ಯಾಂಪ್ ಏರಿಸಿ ನೇರ ತೋಟಕ್ಕೆ ಧಾವಿಸುತ್ತಾರೆ. ರಾತ್ರಿ 10ರವರೆಗೂ ತೋಟದ ಕೆಲಸದಲ್ಲಿ ತಲ್ಲೀನ.

    ಯಾರೂ ಕಣ್ಣಾಲಯಂ ತೋಟದ ತರಕಾರಿ ಬೆಲೆಯ ಬಗ್ಗೆ ಚೌಕಾಶಿ ಮಾಡುವುದೇ ಇಲ್ಲ. ಅಪ್ಪಟ ಸಾವಯವ ಕೃಷಿ ವಿಧಾನದೊಂದಿಗೆ ಇವರು ತರಕಾರಿ ಬೆಳೆಸುವ ಮೂಲಕ ನಾಡಿನೆಲ್ಲೆಡೆ ಪರಿಚಿತವಾಗಿರುವುದೇ ಇದಕ್ಕೆ ಕಾರಣ. ನಾವು ಒಬ್ಬ ಉತ್ತಮ ಪಾಲಕರಾದಾಗ ಮಾತ್ರ ಒಳ್ಳೆಯ ಕೃಷಿಕರಾಗಿ ಹೊರ ಹೊಮ್ಮಲು ಸಾಧ್ಯ ಎಂಬುದು ನಾರಾಯಣನ್ ಕಿವಿಮಾತು. ಕೃಷಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವವರು ಇವರ ತೋಟದ ನಿತ್ಯ ಸಂದರ್ಶಕರಾಗಿರುತ್ತಾರೆ. ನಾನಾ ಕೃಷಿ ಕಾಲೇಜು ವಿದ್ಯಾರ್ಥಿಗಳು, ಅಧ್ಯಯನಾಸಕ್ತರೂ ಭೇಟಿ ನೀಡುತ್ತಾರೆ. ಕೃಷಿ ಚಟುವಟಿಕೆಗಳಿಗಾಗಿ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.

    ರಾಸಾಯನಿಕ ಬಳಕೆಯಿಂದ ದೂರ ಉಳಿದಿರುವುದರಿಂದ ಭೂಮಿಯ ಫಲವತ್ತತೆ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಇದರಿಂದಾಗಿ ರಾಜ್ಯದ ನಾನಾ ಕಡೆಯಿಂದ ನಮ್ಮ ತೋಟಕ್ಕೆ ತರಕಾರಿ ಅರಸಿಕೊಂಡು ಬರುತ್ತಾರೆ. ಮಾರುಕಟ್ಟೆ ಕಂಡುಕೊಳ್ಳುವುದು ನನಗೇ ಸಮಸ್ಯೆಯೇ ಆಗಿಲ್ಲ. ಮಧ್ಯವರ್ತಿಗಳಿಲ್ಲದೆ ನೇರ ಮಾರುಕಟ್ಟೆ ಕಂಡುಕೊಂಡಿದ್ದೇನೆ. ಕೆಲವೊಂದು ಫಾರ್ಮರ್ಸ್ ಸೊಸೈಟಿಗಳು ಸಹಕರಿಸುತ್ತಿದೆ. ಲಾಭವೊಂದೇ ದೃಷ್ಟಿಯಲ್ಲಿರಿಸಿ ಕೃಷಿಗೆ ಮುಂದಾಗಿಲ್ಲ. ಕೃಷಿಯಲ್ಲಿ ಆವಿಷ್ಕಾರಗಳನ್ನು ನಡೆಸಿಕೊಂಡು ಬಂದಿರುವುದರಿಂದ ಹೆಚ್ಚಿನ ಯಶಸ್ಸು ಪಡೆಯಲು ಸಾಧ್ಯವಾಗಿದೆ.
    ನಾರಾಯಣನ್ ಕಣ್ಣಾಲಯಂ, ಪ್ರಗತಿಪರ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts