More

    ಸಾವಯವ ಕೃಷಿ ಅನುಷ್ಠಾನಕ್ಕೆ ಸಿದ್ಧತೆ

    ಬೆಳಗಾವಿ: ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ, ಸಾವಯವ ಕೃಷಿ ಪದ್ಧತಿ ಉತ್ತೇಜಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಪರಂಪರಾಗತ ಕೃಷಿ ವಿಕಾಸ ಯೋಜನೆ ಜಾರಿಗೊಳಿಸುತ್ತಿದೆ. ಈಗಾಗಲೇ 18 ಜಿಲ್ಲೆಗಳಲ್ಲಿ ಸಾವಯವ ಕೃಷಿ, ತೋಟಗಾರಿಕೆ ಬೆಳೆ ಬೆಳೆಯುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ.

    ಸಾವಯವ ಬೆಳೆ ಬೆಳೆಯುವುದಕ್ಕೆ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ತಲಾ 500 ಹೆಕ್ಟೇರ್ ಪ್ರದೇಶ ಗುರುತಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಯಾವ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕ ಗೊಬ್ಬರ ಬಳಕೆಯಾಗುತ್ತಿದೆಯೋ ಅಂತಹ ಪ್ರದೇಶವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. 18 ಜಿಲ್ಲೆಗಳ ಪೈಕಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿ ಸಾವಯವ ಕೃಷಿ, ತೋಟಗಾರಿಕೆ ಬೆಳೆ ಬೆಳೆಯುವುದಕ್ಕೆ ಅಧಿಕಾರಿಗಳು ಪ್ರದೇಶ ಗುರುತಿಸುತ್ತಿದ್ದಾರೆ.

    ಯೋಜನೆ ಅನುಷ್ಠಾನ ಹೇಗೆ?: ಯೋಜನೆಯಡಿ ಪ್ರಮುಖವಾಗಿ ತೋಟಗಾರಿಕೆ ಬೆಳೆಗೆ ಆದ್ಯತೆ ನೀಡಲಾಗಿದೆ. ಒಂದು ಜಿಲ್ಲೆಯಲ್ಲಿ ಒಟ್ಟಾರೆ 500 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ, ತೋಟಗಾರಿಕೆ ಬೆಳೆ ಬೆಳೆಯುವುದು ಅಧಿಕಾರಿಗಳ ಗುರಿಯಾಗಿದೆ. ಸಾವಯವ ಕೃಷಿ ಕೈಗೊಳ್ಳುವ ಆಸಕ್ತ ರೈತರು ಹಾಗೂ ಈಗಾಗಲೇ ಸಣ್ಣ ಪ್ರಮಾಣದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ರೈತರನ್ನು ಅಧಿಕಾರಿಗಳು ಗುರುತಿಸುತ್ತಿದ್ದಾರೆ.

    ಸಾವಯವ ಬೆಳೆ ಬೆಳೆಯುವುದಕ್ಕೆ ರೈತರನ್ನು ಆಯ್ಕೆ ಮಾಡಿದ ಬಳಿಕ ಅವರಿಗೆ ಅಗತ್ಯ ತರಬೇತಿ ಹಾಗೂ ಮಾರುಕಟ್ಟೆ ಒದಗಿಸಿ ಕೊಡಲಾಗುವುದು. 2020-21ರಿಂದ 2022-23ನೇ ಸಾಲಿನ ವರೆಗೆ ರಾಜ್ಯದಲ್ಲಿ ಮೂರು ವರ್ಷದಲ್ಲಿ 10 ಸಾವಿರ ಹೆಕ್ಟೇರ್ ತೋಟಗಾರಿಕೆ, ಕೃಷಿ ಪ್ರದೇಶವನ್ನು ಸಾವಯವಕ್ಕೆ ಪರಿವರ್ತಿಸಿ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದಕ್ಕೆ ಅಧಿಕಾರಿಗಳು ಗುರಿ ಹಾಕಿಕೊಂಡಿದ್ದಾರೆ.

    ರೈತರಿಗೆ ತರಬೇತಿ: ಯೋಜನೆ ಅನುಷ್ಠಾನ ಪ್ರಕ್ರಿಯೆಯಲ್ಲಿ ಕೇಂದ್ರ ಕೃಷಿ ಮಂತ್ರಾಲಯದ ರಾಷ್ಟ್ರೀಯ ಸಾವಯವ ಕೇಂದ್ರದ ವತಿಯಿಂದ ಪ್ರಾಂತೀಯ ಪರಿಷತ್‌ಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರೈತ ಉತ್ಪಾದಕ ಸಂಸ್ಥೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಲಿವೆ. ತಾಲೂಕು ಹಿರಿಯ ಹಾಗೂ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕರು ಕಾರ್ಯಕ್ರಮದ ಅನುಷ್ಠಾನಾಧಿಕಾರಿಯಾಗಿರುತ್ತಾರೆ. ತೋಟಗಾರಿಕೆ ಉಪ ನಿರ್ದೇಶಕರು ಉಸ್ತುವಾರಿ ಅಧಿಕಾರಿಯಾಗಿದ್ದಾರೆ.

    ಕೃಷಿಯಲ್ಲಿ ಸುಸ್ಥಿರತೆ, ಸಾವಯವ ಪ್ರದೇಶದ ಪರಿವರ್ತನೆ, ಸಹಭಾಗಿತ್ವ ಖಾತರಿ ವ್ಯವಸ್ಥೆ, ಪ್ರಮಾಣೀಕರಣ ಪದ್ಧತಿಗಳ ಕುರಿತು ಯೋಜನೆಯಡಿ ಅಧಿಕಾರಿಗಳು ರೈತರಿಗೆ ತರಬೇತಿ ನೀಡಲಿದ್ದಾರೆ.

    ಯಾವ ಜಿಲ್ಲೆಯಲ್ಲಿ ಜಾರಿ?: 18 ಜಿಲ್ಲೆಗಳ ಪೈಕಿ ಶಿವಮೊಗ್ಗ, ರಾಮನಗರ, ತುಮಕೂರು, ಕೋಲಾರ, ದಾಡವಣಗೆರೆ, ಕಲಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಹಾವೇರಿ, ವಿಜಯಪುರ, ಚಿಕ್ಕಮಂಗಳೂರು, ಕೊಡಗು, ಮಂಡ್ಯ, ಉಡುಪಿ ಜಿಲ್ಲೆಯಲ್ಲಿ ಸಾವಯವ ಕೃಷಿ ಕೈಗೊಳ್ಳುವುದಕ್ಕೆ ಪ್ರದೇಶ ಗುರುತಿಸಲಾಗುತ್ತಿದೆ.

    ಪರಂಪರಾಗತ ಕೃಷಿ ವಿಕಾಸ ಯೋಜನೆ ಅನುಷ್ಠಾನಕ್ಕೆ ಮುಂದಿನ ವಾರದಲ್ಲಿ ಆಸಕ್ತ ರೈತರನ್ನು ಆಯ್ಕೆ ಮಾಡಿ, ಅವರಿಗೆ ತರಬೇತಿ ಕೊಡಲಾಗುವುದು. ಈ ನಿಟ್ಟಿನಲ್ಲಿ ನಮ್ಮ ಇಲಾಖೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ.
    |ರವೀಂದ್ರ ಹಕಾಟೆ ತೋಟಗಾರಿಕೆ
    ಇಲಾಖೆ ಉಪನಿರ್ದೇಶಕ, ಬೆಳಗಾವಿ

    ಯೋಜನೆಯ ಉದ್ದೇಶ: ನೈಸರ್ಗಿಕ ಸಂಪನ್ಮೂಲ ಆಧಾರಿತ ಸಮಗ್ರ ಮತ್ತು ಸುಸ್ಥಿರ ಕೃಷಿ ಪದ್ಧತಿ ಉತ್ತೇಜಿಸುವುದು.
    ಹವಾಮಾನ ವೈಪರಿತ್ಯ ಪರಿಸ್ಥಿತಿಯಲ್ಲೂ ಕೃಷಿ ಉತ್ಪಾದನೆ ಸುಸ್ಥಿರತೆ ಕಾಪಾಡುವುದು.
    ಕೃಷಿ ಉತ್ಪಾದನೆಯಲ್ಲಿ ಸಾಂಪ್ರದಾಯಿಕ ವಿಧಾನಗಳು, ರೈತ ಸ್ನೇಹಿ, ಪರಿಸರ ಸ್ನೇಹಿ ತಾಂತ್ರಿಕತೆ ಅಳವಡಿಸಿಕೊಳ್ಳುವುದು.
    ರೈತರ ಜಮೀನಿನಲ್ಲಿ ಸಾವಯವ ತ್ಯಾಜ್ಯಗಳ ಮರುಬಳಕೆ ಇತ್ಯಾದಿ ಅಳವಡಿಸಿಕೊಂಡು ಬೇಸಾಯ ವೆಚ್ಚ ತಗ್ಗಿಸಿ, ಕೃಷಿಕರ ಆದಾಯ ವೃದ್ಧಿಸುವುದು.

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts