More

    ಜೆಜೆಎಂ ಯೋಜನೆಯ ನೀರೆತ್ತುವ ಸ್ಥಳ ಬದಲಿಸಲು ಆಗ್ರಹ

    ಕಾರವಾರ: ಜಲಜೀವನ ಮಿಷನ್ ಯೋಜನೆಯಡಿ ನೀರು ಪೂರೈಕೆಗೆ ಅಘನಾಶಿನಿ ನದಿಯಿಂದ ನೀರೆತ್ತುವ ಸ್ಥಳಗಳನ್ನು ಬದಲು ಮಾಡಬೇಕು ಎಂದು ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ. ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ಅವರಿಗೆ ಈ ಸಂಬಂಧ ತಮ್ಮ ಬೇಡಿಕೆಗಳನ್ನು ಮಂಡಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಸದಸ್ಯರು ಮಾತನಾಡಿದರು.
    ಜಲಜೀವನ ಮಿಷನ್ ಯೋಜನೆಯಡಿ 169 ಕೋಟಿ ವೆಚ್ಚದಲ್ಲಿ ಕುಮಟಾ ತಾಲೂಕಿನ 14 ಗ್ರಾಪಂ ವ್ಯಾಪ್ತಿಯ 53 ಹಳ್ಳಿಗಳಿಗೆ ಕುಡಿಯುವ ನೀರುಒದಗಿಸುವ ಸಂಬಂಧ ಅಘನಾಶಿನಿ ನದಿಯ ದಿವಳ್ಳಿಯಿಂದ ಪೈಪ್‌ಲೈನ್ ಅಳವಡಿಕೆಗೆ ಯೋಜನೆ ಸಿದ್ಧವಾಗಿದೆ.
    ಆದರೆ, ಇದೇ ಸ್ಥಳದಲ್ಲಿ (ಮರಾಕಲ್)ಈ ಹಿಂದೆ ಕುಮಟಾ, ಹೊನ್ನಾವರ ಪಟ್ಟಣಗಳಿಗೆ ನೀರನ್ನು ಕೊಂಡೊಯ್ಯಲಾಗುತ್ತಿದೆ. ಬೇಸಿಗೆ ಬಂದ ತಕ್ಷಣ ನದಿಯಲ್ಲಿ ನೀರು ಬರಿದಾಗುತ್ತದೆ. ಕುಮಟಾ ಹೊನ್ನಾವರ ಪಟ್ಟಣಗಳಿಗೆ ನೀರಿರುವುದಿಲ್ಲ. ಈಗ ಅದೇ ಸ್ಥಳದಲ್ಲಿ ಮತ್ತೊಂದು ಯೋಜನೆ ಜಾರಿಯಾದಲ್ಲಿ ಮುಂದಿನ ದಿನ ಪಟ್ಟಣಕ್ಕೆ, ಸ್ಥಳೀಯರಿಗೂ ನೀರು ಸಿಗದಂತಾಗುತ್ತದೆ. ಸುತ್ತಲಿನ ಕೃಷಿ ಜಮೀನುಗಳಿಗೆ ನೀರಿಲ್ಲವಾಗುತ್ತದೆ. ಉಪ್ಪು ನೀರು ನುಗ್ಗುವ ಪ್ರಮಾಣ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಇದನ್ನೂ ಓದಿ:ಶಿಕ್ಷಣ ಸಹಾಯಧನ ಬಿಡುಗಡೆ ಮಾಡಿ
    ಕುಡಿಯುವ ನೀರಿನ ಯೋಜನೆಗೆ ರೈತರ ವಿರೋಧವಲ್ಲ. ನಾವು ಸ್ಥಳ ಬದಲಾವಣೆಗೆ ಒತ್ತಾಯ ಮಾಡುತ್ತಿದ್ದೇವೆ. ಸರ್ಕಾರದ ಹಣ ಪೋಲಾಗುವುದು. ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಮೊದಲೇ ಎಚ್ಚರಿಸುತ್ತಿದ್ದೇವೆ ಎಂದರು.
    ಅಘನಾಶಿನಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಗಣಪತಿಗೌಡ, ದೀವಳ್ಳಿಯಲ್ಲಿ ಈಗಾಗಲೇ ಏತ ನೀರಾವರಿ ಯೋಜನೆ ಕೂಡ ಇದೆ. ದಿವಳ್ಳಿಯಿಂದ ಕತಗಾಲ್‌ವರೆಗೆ ಸಾವಿರಾರು ಎಕರೆ ಜಾಗದಲ್ಲಿ ಅಡಕೆ, ತೆಂಗು, ಕಬ್ಬು, ಬಾಳೆಯನ್ನ ಹೆಚ್ಚಾಗಿ ಹಿಂದುಳಿದ ಹಾಲಕ್ಕಿ ಒಕ್ಕಲಿಗರು, ಮರಾಠಿಗರು, ಹವ್ಯಕರು ಬೆಳೆಯುತ್ತಿದ್ದಾರೆ ಅವರೆಲ್ಲರಿಗೂ ಸಂಕಷ್ಟ ಎದುರಾಗಲಿದೆ. ವಿಜ್ಞಾನಿಗಳ ತಂಡ ಕೂಡ ಸ್ಥಳ ಪರಿಶೀಲನೆ ನಡೆಸಿ, ಇದು ದೊಡ್ಡ ಯೋಜನೆಗೆ ಅರ್ಹವಲ್ಲ ಎಂದು ವರದಿ ನೀಡಿದ್ದಾರೆ ಎಂದರು.
    ಮುಖಂಡ ಟಿ.ಪಿ. ಹೆಗಡೆ, ಕಲ್ಲಬ್ಬೆ ಗ್ರಾ.ಪಂ ಸದಸ್ಯ ಹಿರಿಯ ಗೌಡ, ಗೇರು ಉದ್ಯಮಿ ರಾಜರಾಮ್ ಭಟ್, ಸಾಮಾಜಿಕ ಹೋರಾಟಗಾರ ವಿಷ್ಣು ಪಟಗಾರ, ದತ್ತು ಹರಿಕಂತ್ರ, ಮೋಹನ್ ಪಟಗಾರ, ಗಣಪತಿ ಗೌಡ, ಹಮ್ಮು ಗೌಡ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts