More

    ರೈತ ಸಂಘದ ಪದಾಧಿಕಾರಿಗಳಿಂದ ರಸ್ತೆ ಸಂಚಾರ ತಡೆ

    ಹನೂರು: ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ಗುರುವಾರ ತಾಲೂಕಿನ ಎಲ್ಲೇಮಾಳ ಗ್ರಾಮದಲ್ಲಿ ರೈತ ಸಂಘದ ಪದಾಧಿಕಾರಿಗಳು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ಈ ವೇಳೆ ಪ್ರತಿಭಟನಾಕಾರರು, ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ರೈತ ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, 15 ದಿನಗಳ ಹಿಂದೆ ಡಿ.ಎಂ.ಸಮುದ್ರ ಗ್ರಾಮದಲ್ಲಿ 3 ದಿನಗಳ ಕಾಲ ಪ್ರತಿಭಟನೆ ನಡೆಸಲಾಗಿತ್ತು. ಈ ಭಾಗದ ಕೆಲವು ಗ್ರಾಮಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಹಾಗೂ ಜಾನುವಾರುಗಳಿಗೆ ಮೇವನ್ನು ಒದಗಿಸುವಂತೆ ಜತೆಗೆ ಭೈರನತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸೇತುವೆ ನಿರ್ಮಿಸುವಂತೆ ಒತ್ತಾಯಿಸಲಾಗಿತ್ತು. ಈ ವೇಳೆ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಅಗತ್ಯ ಭರವಸೆ ನೀಡಿತ್ತು. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

    ಡಿ.ಎಂ. ಸಮುದ್ರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಡಿ.ಎಂ ಸಮುದ್ರ, ಕೆವಿಎನ್ ದೊಡ್ಡಿ ಹಾಗೂ ಎಂ.ಟಿ.ಗ್ರಾಮದ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಒದಗಿಸದ ಪರಿಣಾಮ ರೈತರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

    ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು, ರೈತರ ಸಮಸ್ಯೆ ಆಲಿಸಿ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ 14 ಕಡೆಗಳಲ್ಲಿ ಗೋ ಶಾಲೆಯನ್ನು ತೆರೆಯಲಾಗಿದೆ. ಆದರೆ ಈ ಭಾಗದಲ್ಲಿ ಜಾಗದ ಕೊರತೆಯಿಂದ ಗೋ ಶಾಲೆ ತೆರೆಯಲು ಸಮಸ್ಯೆಯಾಗಿತ್ತು. ಹಾಗಾಗಿ ಗ್ರಾಮಸ್ಥರ ತೀರ್ಮಾನದಂತೆ ಡಿ.ಎಂ. ಸಮುದ್ರ ಹಾಗೂ ಎಂ.ಟಿ. ದೊಡ್ಡಿ ಗ್ರಾಮಕ್ಕೆ ಶುಕ್ರವಾರದಿಂದಲೇ ಮೇವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

    ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಜತೆಗೆ ಜಾನುವಾರುಗಳ ತೊಟ್ಟಿಗೆ ನೀರು ಒದಗಿಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು ಎಂದು ಪಿಡಿಒ ಅಶ್ವಿನಿ ಅವರಿಗೆ ಸೂಚಿಸಿದರು. ಇದೇ ವೇಳೆ ಸೇತುವೆ ನಿರ್ಮಾಣ ಸಂಬಂಧ ಸಂಬಂಧಪಟ್ಟ ಅಧಿಕಾರಿಗೆ ಫೋನಾಯಿಸಿ ಮಾಹಿತಿ ಪಡೆದು ರೈತರಿಗೆ ತಿಳಿಸಿದರು. ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.

    ಸಂಘದ ಗ್ರಾಮ ಘಟಕ ಅಧ್ಯಕ್ಷ ಮೈಕಲ್, ಕಾರ್ಯದರ್ಶಿ ಭೈರನತ್ತ ರಾಜು, ರೈತ ಮುಖಂಡರಾದ ಶಾಂತಕುಮಾರ್, ಪ್ರಸನ್ನಕುಮಾರ್, ಗಿರಿಮಲ್ಲಯ್ಯ, ಮುನಿಸ್ವಾಮಿ, ಶ್ರೀನಿವಾಸ್, ಪರಮೇಶ್, ರವಿಕುಮಾರ್, ರಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts