More

    ಕುಡಿಯುವ ನೀರಿಗಾಗಿ ಧರಣಿ

    ದೇವರಹಿಪ್ಪರಗಿ: ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕೆಂದು ಒತ್ತಾಯಿಸಿ ಮಹಿಳೆಯರು ಹಾಗೂ ಗ್ರಾಮಸ್ಥರು ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು.

    ತಾಲೂಕಿನ ಕೊಂಡಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಬಿ ಇಂಗಳಗಿ ಗ್ರಾಮಸ್ಥರು ಬುಧವಾರ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು. ಮಡಿವಾಳಮ್ಮ ಅಗಸರ, ಸಹಿರಿಭಾನು ಬಾಗಲಕೋಟ, ಗ್ರಾಪಂ ಸದಸ್ಯ ಸಲೀಂ ವಟಾರೆ ಮಾತನಾಡಿ, ಪ್ರತಿ ಬೇಸಿಗೆಯಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರು ಸಿಗದೆ ತುಂಬ ತೊಂದರೆಯಾಗುತ್ತಿದೆ. ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಒಂದು ಬಾವಿ ಇದೆ. ಆ ಬಾವಿಯಲ್ಲೂ ನೀರಿನ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ನೀರು ಸಿಗುತ್ತಿಲ್ಲ ಎಂದರು.

    ಬಾವಿ ಪಕ್ಕದಲ್ಲಿ ಒಂದು ಕೊಳವೆ ಬಾವಿ ಕೊರೆಸಿ ಗ್ರಾಮಕ್ಕೆ ಸಿಹಿ ನೀರು ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಟ್ಯಾಂಕರ್‌ನಿಂದ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಶಾಶ್ವತ ಕುಡಿಯುವ ನೀರು ಪಡೆಯಬೇಕೆಂಬ ಉದ್ದೇಶದಿಂದ ಮಕ್ಕಳು ಮರಿ ಕಟ್ಟಿಕೊಂಡು ತಾಲೂಕು ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟಿಸುತ್ತಿದ್ದೇವೆ ಎಂದರು.

    ನಮ್ಮ ಸಮಸ್ಯೆ ಕೇಳಬೇಕಾದ ತಹಸೀಲ್ದಾರ್ ಅವರು ಕೂಡ ನಮ್ಮ ಸಮಸ್ಯೆಗೆ ಕಿವಿಗೊಡದೆ, ನಿಮ್ಮೂರಿಗೆ ಬಂದು ಭೇಟಿ ನೀಡುತ್ತೇನೆ. ಕಚೇರಿ ಮುಂದಿಂದು ಎದ್ದು ಹೋಗಿ ಎಂದು ಹೇಳಿ ವಾಹನದಲ್ಲಿ ಕುಳಿತು ಕಚೇರಿಯಿಂದ ತೆರಳಿರುವುದು ನಮಗೆ ತುಂಬ ನೋವಾಗಿದೆ. ನೀರು ಕೊಡುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.

    ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ಹೋರಾಟ ಸಂಜೆಯಾದರೂ ಮುಂದುವರಿದಿತ್ತು. ಪ್ರತಿಭಟನೆಯಲ್ಲಿ ಶಾಹಜಾದಬಿ ಆವೆರಿ, ಫಾತಿಮಾ ಬಾಗಲಕೋಟ, ಲಾಲಬಿ ನದಾಫ್, ಇಂದ್ರಬಾಯಿ ಅಗಸರ, ಹುಸೇನಬಿ ಶೇಖ, ಸಹಿರಾಬೇಗಂ ನದ್ಾ, ಇಮಾಂಬಿ ನದ್ಾ, ಆಯಿಷಾ ಆವೇರಿ, ರೋಸನಬಿ ಆವೇರಿ, ಹಲಮಾ ದೊಡಮನಿ, ಶಾರದಾ ಮೀನಗಾರ, ಶರಣಮ್ಮ ಕದ್ದನಳ್ಳಿ, ಹಲಿಮಾ ವಠಾರ, ಬಿಯಮಾ ಗಂಗೂರ, ಸಕಿರಾಬಾನು ಮುಜಾವಾರ, ಪರವೀನ ಬಾಗಲಕೋಟ, ಖಾಜಾಬಿ ನದ್ಾ, ಬಿಸ್ಮಿಲ್ಲಾ ವಠಾರ, ಮಾದೇವಿ ಮಲ್ಲೇದ, ಜಯಶ್ರೀ ಮಲ್ಲೇದ, ಮಾಲಾನಬಿ ಬಾಗಲಕೋಟ, ಕೌಸರಬಿ ವಠಾರ ಇದ್ದರು.

    ಬಿಬಿ ಇಂಗಳಗಿ ಗ್ರಾಮಕ್ಕೆ ತಾಲೂಕು ಪಂಚಾಯಿತಿ ಅಧಿಕಾರಿಗಳ ಜೊತೆ ಹೋಗಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಬಳಕೆ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಸರಿಪಡಿಸಲು ತಾಲೂಕು ಪಂಚಾಯಿತಿ ಅವರಿಗೆ ಹೇಳಿದ್ದೇನೆ. ಕೂಡಲೇ ಸರಿಪಡಿಸುತ್ತಾರೆ. ಪ್ರತಿಭಟನಾಕಾರರು ಹೇಳುವ ಹಾಗೆ ದೊಡ್ಡಮಟ್ಟದ ಕುಡಿಯುವ ನೀರಿನ ಸಮಸ್ಯೆ ಈ ಊರಲ್ಲಿ ಇಲ್ಲ.
    ಪ್ರಕಾಶ ಸಿಂದಗಿ, ದೇವರಹಿಪ್ಪರಗಿ ತಹಸೀಲ್ದಾರ್


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts