More

    ಸಿಸಿಐನಿಂದ ಹತ್ತಿ ಖರೀದಿ ಕೇಂದ್ರ ಆರಂಭ

    ಹಾವೇರಿ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಲದೆ, ಮಾರುಕಟ್ಟೆಯಲ್ಲಿ ಹತ್ತಿಗೆ ಕಡಿಮೆ ದರವಿದ್ದರಿಂದ ಈಗಾಗಲೇ ಹತ್ತಿ ಮಾರಾಟ ಮಾಡಿರುವ ರೈತರು ನಷ್ಟ ಅನುಭವಿಸಿದ್ದಾರೆ. ಈ ಸಮಯದಲ್ಲಿ ರೈತರಿಗೆ ವರದಾನವಾಗಿರುವ ಹತ್ತಿ ಖರೀದಿ ಕೇಂದ್ರದಲ್ಲಿ ರೈತರಿಗೆ ವಿನಾಕಾರಣ ತೊಂದರೆ ಮಾಡದೇ ಖರೀದಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ತಿಳಿಸಿದರು.

    ತಾಲೂಕಿನ ಗೌರಾಪುರದಲ್ಲಿರುವ ಫಾರ್ಚುನ್ ಕಾಟನ್ ಆಂಡ್ ಅಗ್ರೋ ಇಂಡಸ್ಟ್ರೀಸ್​ನಲ್ಲಿ ಸಿಸಿಐನಿಂದ ಆರಂಭಿಸಿದ ಹತ್ತಿ ಖರೀದಿ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ರೈತರು ಖರೀದಿ ಕೇಂದ್ರಕ್ಕೆ ಗುಣಮಟ್ಟದ ಹತ್ತಿಯನ್ನು ಮಾರಾಟಕ್ಕೆ ತರಬೇಕು. ಸರ್ಕಾರ ಹತ್ತಿ ಖರೀದಿಗೆ ಕೆಲವೊಂದು ಮಾನದಂಡಗಳನ್ನು ರೂಪಿಸಿದೆ. ಅದರಂತೆ ರೈತರ ಹತ್ತಿ ಇದ್ದರೇ ಮಾತ್ರ ಇಲ್ಲಿ ಖರೀದಿಸಲಾಗುತ್ತದೆ ಎಂದರು.

    ಸರ್ಕಾರವು 30 ಎಂಎಂ ನೂಲಿನ ಉದ್ದದ ಹತ್ತಿಗೆ 5,875 ರೂ. ದರ, 29 ಎಂಎಂಗೆ 5,775 ರೂ., 28 ಎಂಎಂಗೆ 5,725 ರೂ.ಗಳ ದರವನ್ನು ಪ್ರತಿ ಕ್ವಿಂಟಾಲ್​ಗೆ ನಿಗದಿಗೊಳಿಸಿದೆ. ಮಾರುಕಟ್ಟೆಯಲ್ಲಿ ಸದ್ಯ 4,800 ರೂ.ಗಳಿಂದ 5,500 ರೂ. ಗಳವರೆಗೆ ಹತ್ತಿ ಮಾರಾಟವಾಗುತ್ತಿದೆ. ಈ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದರೆ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ. ಇಲ್ಲಿ ಮಾರಾಟಕ್ಕೆ ರೈತರು ಹತ್ತಿಯನ್ನು ಅಂಡಿಗೆ ಹಾಗೂ ಚೀಲದಲ್ಲಿ ತುಂಬಿಕೊಂಡು ಬರಬಾರದು. ಟ್ರ್ಯಾಕ್ಟರ್ ಟೇಲರ್ ಸೇರಿದಂತೆ ಯಾವುದೇ ವಾಹನದಲ್ಲಿ ತಂದರೂ ಅದನ್ನು ಖುಲ್ಲಾ ಹಾಕಿಕೊಂಡು ಬರಬೇಕು. ಇಲ್ಲಿ ಇಲೆಕ್ಟ್ರಾನಿಕ್ ತೂಕದ ಯಂತ್ರದ ಮೂಲಕ ತೂಕ ಮಾಡಿ, ನೂಲಿನ ಪ್ರಮಾಣವನ್ನು ಆಧುನಿಕ ಯಂತ್ರದಿಂದ ಅಳತೆ ಮಾಡಿ ಖರೀದಿ ಮಾಡುತ್ತಾರೆ. ಖರೀದಿಯಾದ ಒಂದು ವಾರದೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ. ರೈತರು ತಮ್ಮ ಜಮೀನಿನ ಪಹಣಿ, ಹತ್ತಿ ಬೆಳೆದಿರುವ ಕುರಿತು ಬೆಳೆ ದೃಢೀಕರಣ ಪತ್ರ, ಬ್ಯಾಂಕ್ ಪಾಸ್​ಬುಕ್, ಆಧಾರ ಕಾರ್ಡ್ ತರಬೇಕು. ಒಂದು ಎಕರೆಯ ಪಹಣಿಗೆ 10ರಿಂದ 12 ಕ್ವಿಂಟಾಲ್ ಹತ್ತಿಯನ್ನು ಮಾತ್ರ ಇಲ್ಲಿ ಖರೀದಿಸಲಾಗುತ್ತದೆ ಎಂದರು.

    ಎಪಿಎಂಸಿ ಕಾರ್ಯದರ್ಶಿಗಳಾದ ಪರಮೇಶ್ವರ ನಾಯ್ಕ, ಮನೋಹರ ರ್ಬಾ, ಸಹಾಯಕ ಕಾರ್ಯದರ್ಶಿ ನಾಗರಾಜ ಕೋಳೇರ, ಫಕೀರೇಶ ದೊಡ್ಡಮನಿ, ವೇಮನ ಗಡಾದ, ಭರಮಣ್ಣ ಅಮರಗೋಳ, ಸಿಸಿಐ ಅಧಿಕಾರಿ ಗಣೇಶ ಚವ್ಹಾಣ, ರೈತರಾದ ಪ್ರಭು ವರ್ದಿ, ಚಂದ್ರಣ್ಣ ವರ್ದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts