More

    ಆನ್​ಲೈನ್ ಕ್ಲಾಸ್ ಸಮಸ್ಯೆ, ಆದರ್ಶನ ಮನೆಗೇ ಸಚಿವ ಸುರೇಶ್ ಕುಮಾರ್

    ಶ್ರೀಕಾಂತ ಶೇಷಾದ್ರಿ
    ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಅತಿ ಕುಗ್ರಾಮ, ಒಂದು ಕಾಲದ ನಕ್ಸಲ್ ಬಾಧಿತ ಎನಿಸಿದ ಹೊರ್ಲೆಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಭೇಟಿ ಮಾಡಲು ಶಿಕ್ಷಣ ಸಚಿವರೇ ಹೊರಟು ನಿಂತಿದ್ದಾರೆ. ಕರೊನಾ ಕಾಲದಲ್ಲಿ ಎಸ್​ಎಸ್​ಎಲ್​ಸಿ ಆನ್​ಲೈನ್ ಪಾಠದ ಅವಕಾಶವಿಲ್ಲದ ಸ್ಥಿತಿಯಲ್ಲಿರುವ ವಿದ್ಯಾರ್ಥಿಯನ್ನು ಭೇಟಿ ಮಾಡಿ, ಅವನಲ್ಲಿ ಆತ್ಮಸ್ಥೈರ್ಯ ತುಂಬುವ ಜತೆಗೆ ಅವನೂರಿನ ಸಮಸ್ಯೆ ಕಂಡುಕೊಳ್ಳಲು, ಆ ವಿದ್ಯಾರ್ಥಿಯಂತೆಯೇ ಇತರ ಮಕ್ಕಳು ಎದುರಿಸುತ್ತಿರುವ ನೈಜ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನಕ್ಕೆ ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಮುಂದಾಗಿದ್ದಾರೆ.

    ಆನ್​ಲೈನ್ ಕ್ಲಾಸ್ ಸಮಸ್ಯೆ, ಆದರ್ಶನ ಮನೆಗೇ ಸಚಿವ ಸುರೇಶ್ ಕುಮಾರ್ಆಗಿದ್ದಿಷ್ಟು, ಶೃಂಗೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿ ಆದರ್ಶ ತಾನು ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಸರ್ಕಾರಕ್ಕೆ ತಲುಪಿಸಬೇಕೆಂದು ಬಯಸಿ ವಿಜಯವಾಣಿ ಸಹಾಯ ಬಯಸಿದ್ದ. ಆ ವಿದ್ಯಾರ್ಥಿಯ ಮನದ ಮಾತಿನ ಆಡಿಯೋ ತುಣಕನ್ನು ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿತ್ತು. ಆ ಕ್ಷಣವೇ ಸ್ಪಂದಿಸಿದ ಸಚಿವರು, ವಿದ್ಯಾರ್ಥಿಯೊಂದಿಗೆ ಮಾತನಾಡಲು ಇಚ್ಛಿಸಿದರು. ಆದರೆ, ವಿದ್ಯಾರ್ಥಿ ಮನೆ ಮೊಬೈಲ್ ನೆಟ್​ವರ್ಕ್ ಇಲ್ಲದ ಕುಗ್ರಾಮದಲ್ಲಿತ್ತು.

    ಇದನ್ನೂ ಓದಿ: ಶಿಶುಗಳಿಗೇಕೆ ಸ್ತನ್ಯಪಾನಮಾಡಿಸಬೇಕು- ಅದರ ಮಹತ್ವ ಏನು?

    ತಕ್ಷಣಕ್ಕಿರುವ ದಾರಿಗಳು

    1 ಸಮಸ್ಯೆ ಎದುರಿಸುತ್ತಿರುವ ಮಕ್ಕಳನ್ನು ಪತ್ತೆ ಮಾಡಿ ತಾಲೂಕು ಕೇಂದ್ರದ ಹಾಸ್ಟೆಲ್ ಆರಂಭಿಸುವುದು.

    2 ಹಾಸ್ಟೆಲ್ ಆರಂಭ ಅಸಾಧ್ಯವಾದರೆ ಹಳ್ಳಿ ಮಕ್ಕಳ ಕ್ಲಸ್ಟರ್ ಮಾಡಿ, ಅಲ್ಲಿಗೇ ನಿಯಮಿತವಾಗಿ ಶಿಕ್ಷಕರನ್ನು ಕಳಿಸಿಕೊಡುವುದು.

    3 ಮೊಬೈಲ್ ಶಾಲೆ ಆರಂಭಿಸಿ ಅವರಿರುವ ಕಡೆಗಾದರೂ ಶಿಕ್ಷಕರನ್ನೇ ತಲುಪಿಸುವುದು.

    ಅಷ್ಟಕ್ಕೆ ಸುಮ್ಮನಾಗದ ಸಚಿವರು ಕೊಪ್ಪ, ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಕೇಳಿದ್ದಾರೆ. ಅವರ ಉತ್ತರ ಸಮಾಧಾನ ತಂದಿಲ್ಲದ ಕಾರಣ, ನೇರವಾಗಿ ಆದರ್ಶನ ಶಾಲೆಯ ಶಿಕ್ಷಕರಿಗೆ ಕರೆ ಮಾಡಿದ್ದಾರೆ. ಆದರ್ಶ ಮಾತ್ರವಲ್ಲ, ಅದೇ ಶಾಲೆಯ ಹತ್ತಾರು ಮಕ್ಕಳ ಸ್ಥಿತಿ ಸಚಿವರ ಗಮನಕ್ಕೆ ಬಂದಿದೆ. ವಿದ್ಯುತ್, ರೇಡಿಯೋ, ಟಿ.ವಿ. ಸಂಪರ್ಕವೂ ಅಲ್ಲಿಲ್ಲ ಎಂಬುದು ತಿಳಿದುಬಂದಿದೆ. ಆ ಗ್ರಾಮಗಳ ಸ್ಥಿತಿ, ಅಲ್ಲಿನ ಮಕ್ಕಳಿಗೆ ಯಾವ ರೀತಿ ಪರಿಹಾರ ನೀಡಬೇಕೆಂದು ಬಯಸಿ ಆದರ್ಶನ ಮನೆ ಇರುವ ಗ್ರಾಮಕ್ಕೆ ಈ ವಾರದಲ್ಲೇ ಸಚಿವರು ಖುದ್ದು ಭೇಟಿ ನೀಡಲಿದ್ದಾರೆ.

    ಹೊರ್ಲೆ ಹೇಗಿದೆ?

    50 ಮನೆಗಳಿರುವ ಈ ಕುಗ್ರಾಮ ಅರಣ್ಯ ರಾಶಿಯನ್ನು ಹೊದ್ದುಮಲಗಿದೆ. ಬಸ್ ಹತ್ತಬೇಕೆಂದರೆ 5 ಕಿ.ಮೀ. ನಡೆದು ಬರಬೇಕು. ಮೇಗೂರೆಂಬ ಪುಟ್ಟ ಊರಿನಿಂದ ಆಟೋದಲ್ಲಿ ಅಲ್ಲಿಗೆ ತೆರಳಲು 300 ರೂ., ಮಳೆಗಾಲದಲ್ಲಿ ಹೋಗುವುದೂ ಅಸಾಧ್ಯ. ಗಿರಿಜನ(ಗೌಡ್ಲು) ಹೆಚ್ಚಿರುವ ಈ ಭಾಗದ ಮನೆಗಳಿಗೆ ಸೋಲಾರ್ ಬ್ಯಾಟರಿ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಮಳೆಗಾಲದಲ್ಲಿ ಅವು ನಿಷ್ಪ್ರೊಜಕ. ಮೊಬೈಲ್ ಚಾರ್ಜ್ ಆದರೂ ನೆಟ್​ವರ್ಕ್ ಇಲ್ಲ. ಕೆಲವರು ಮನೆ ಮುಂದೆ ಮೊಬೈಲ್ ಕಟ್ಟಿ ನೇತುಹಾಕಿರುತ್ತಾರೆ. ಹಾಗೀಗೆ ಮಿಸ್್ಡಕಾಲ್ಡ್ ಸಂದೇಶ ಬಂದರೆ ನೆಟ್​ವರ್ಕ್ ಸಿಗುವ ಕಡೆ ನಡೆದು ಹೋಗಿ ಕರೆ ಮಾಡಿ ಬರುತ್ತಾರೆ.

    ನೈಜ ಚಿತ್ರಣ: ಆದರ್ಶನ ಸಂಕಟದ ಬೆನ್ನು ಮಾಹಿತಿ ಕಲೆಹಾಕಿದಾಗ, ಶಿರ್ಲು, ಕೋಟೆಮಕ್ಕಿ, ಮೆಣಸುಕೊಡಿಗೆ, ಕರಚಾರು, ಎಲ್ಸಾರು, ತುಂಬಿನಹೊಳೆ, ಕಟ್ಲಿಡ್ಲು, ಮುಂಡ್ಸಾರು, ಮೇಲ್ ಶೀರ್ಲು, ಗುರಿಗೆ, ತನಿಕೊಡು ಆವಂಟು ಸೇರಿ ಹಲವು ಗ್ರಾಮಗಳಲ್ಲಿ ನೆಟ್​ವರ್ಕ್ ಇಲ್ಲ, ಹಲವೆಡೆ ವಿದ್ಯುತ್ ಇಲ್ಲ. ಅನೇಕರ ಮನೆಗಳಲ್ಲಿ ಕೀ ಪ್ಯಾಡ್ ಮೊಬೈಲ್​ಗಳಿವೆ.

    ಆ ವಿದ್ಯಾರ್ಥಿಯನ್ನು ಭೇಟಿಯಾಗಲು ಆತನ ಗ್ರಾಮಕ್ಕೆ ಹೋಗಬೇಕೆಂದಿದ್ದೇನೆ. ಈಗಾಗಲೇ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ. 

    | ಎಸ್.ಸುರೇಶ್​ಕುಮಾರ್
    ಶಿಕ್ಷಣ ಸಚಿವ

    ಸಚಿವರಿಗೆ ಆದರ್ಶನ ಅರಿಕೆ ಹೀಗಿತ್ತು: ನಮಸ್ಕಾರ, ನನ್ನ ಹೆಸರು ಆದರ್ಶ. ನಾನು ಓದುತ್ತಿರುವ ಶಾಲೆ, ನಮ್ಮ ಮನೆಯಿಂದ 40 ಕಿ.ಮೀ. ದೂರದಲ್ಲಿದೆ. ಕರೊನಾ ಕಾರಣಕ್ಕೆ ಶಾಲೆ ಆರಂಭವಾಗಿಲ್ಲ. ಆನ್​ಲೈನ್ ತರಗತಿಗಳು ಆರಂಭವಾಗಿವೆ. ನಮ್ಮ ಶಿಕ್ಷಕರು ಕಾಳಜಿಯಿಂದ ಪಾಠ ಕಲಿಸಲು ಶ್ರಮಪಡುತ್ತಿದ್ದಾರೆ. ಆದರೆ ನನ್ನನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮ ಊರಿನಲ್ಲಿ ಕರೆಂಟ್ ಇಲ್ಲ. ಮೊಬೈಲ್ ನೆಟ್​ವರ್ಕ್ ಸಹ ಇಲ್ಲ. ಸರ್ಕಾರ ಇದಕ್ಕೊಂದು ಪರಿಹಾರ ನೀಡಬೇಕೆಂದು ಬಯಸುತ್ತೇನೆ.

    VIDEO: ಶ್ರೀ ರಾಮಮಂದಿರ ನಿರ್ಮಾಣದ ಶಿಲಾನ್ಯಾಸಕ್ಕೆ ದಿನಗಣನೆ: ಅಯೋಧ್ಯೆಯ ಸಂಭ್ರಮ ಸಡಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts