More

    ಧಾರಾಕಾರ ಮಳೆಯಿಂದ ಈರುಳ್ಳಿ ಮಣ್ಣುಪಾಲು

    ಚಿಕ್ಕಮಗಳೂರು: ಬರದ ನಡುವೆ ಕಷ್ಟಪಟ್ಟು ರೈತರು ಈರುಳ್ಳಿ ಬೆಳೆ ಉಳಿಸಿಕೊಂಡಿದ್ದರು. ಕಿತ್ತು, ಒಣಗಲು ಹಾಕಿದ್ದ ಈರುಳ್ಳಿ ಬೆಳೆ ದಿಢೀರ್ ಸುರಿಯುತ್ತಿರುವ ಮಳೆಯಿಂದಾಗಿ ಜಮೀನನಲ್ಲಿಯೇ ಕೊಳೆಯಲಾರಂಭಿಸಿದೆ. ಇದು ಚಿಕ್ಕಮಗಳೂರು ತಾಲೂಕು ಸಾದರಹಳ್ಳಿ ಗ್ರಾಮದ ಈರುಳ್ಳಿ ಬೆಳೆಗಾರರ ಕಣ್ಣೀರಿನ ಕಥೆ.

    ಸಾದರಹಳ್ಳಿ ಗ್ರಾಮದಲ್ಲಿ ಈರುಳ್ಳಿ ಬೆಳೆದ ರೈತರು ಬೆಳೆಯನ್ನು ಕಟಾವು ಮಾಡಿದ್ದರು. ಜಮೀನಿಗೆ ರಸ್ತೆಯೇ ಇಲ್ಲದಿದ್ದರಿಂದ ಉತ್ಪನ್ನವನ್ನು ಮನೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಸಂಸ್ಕರಣೆ ಮಾಡಿ ಜಮೀನಿನಿಂದಲೇ ಮಾರುಕಟ್ಟೆಗೆ ಸಾಗಿಸುವ ಯೋಚನೆಯಲ್ಲಿದ್ದರು. ಆದರೆ ರೈತರ ದುರಾದೃಷ್ಟಕ್ಕೆ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದರಿಂದ ಒಣಗಲು ಹಾಕಿದ್ದ ಈರುಳ್ಳಿ ಜಮೀನಿನಲ್ಲಿಯೇ ಕೊಳೆಯಲಾರಂಭಿಸಿದೆ.
    ನಮ್ಮ ಜಮೀನಿಗೆ ಸಂಪರ್ಕ ಕಲ್ಪಿಸುವ ದಾರಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ದಾರಿ ಒತ್ತುವರಿ ತೆರವು ಮಾಡುವಂತೆ ಸಂಬಂಧಿಸಿದವರಿಗೆ ಅಧಿಕಾರಿಗಳು ಸೂಚಿಸಿದರೂ ಇದುವರೆಗೆ ದಾರಿಯನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ನಮ್ಮ ಜಮೀನಿಗೆ ಹೋಗಲು ದಾರಿಯೇ ಇಲ್ಲದಂತಾಗಿದೆ ಎಂದು ಸಾದರಹಳ್ಳಿ ಗ್ರಾಮದ ಸಂತ್ರಸ್ಥ ರೈತರು ಅಳಲು ತೋಡಿಕೊಂಡಿದ್ದಾರೆ.
    ಜಮೀನುಗಳಿಗೆ ಹೋಗಲು ದಾರಿ ಇಲ್ಲದ್ದರಿಂದ ರೈತರು ಈರುಳ್ಳಿ ಬೆಳೆಯನ್ನು ಭೂಮಿಯಿಂದ ಹೊರತೆಗೆದ ಬಳಿಕ ಜಮೀನಿನಲ್ಲಿಯೇ ಒಣಗಲು ಬಿಟ್ಟಿದ್ದರು. ಬಳಿಕ ಎತ್ತಿನ ಗಾಡಿಗಳ ಮೂಲಕ ಮೂರ‌್ನಾಲ್ಕು ಚೀಲಗಳನ್ನು ಸಾಗಿಸಲಾರಂಭಿಸಿದ್ದರು. ಆದರೆ ಇದೇ ವೇಳೆಗೆ ಮಳೆ ಬರಲಾರಂಭಿಸಿದೆ.
    ಜಮೀನಿಗೆ ಹೋಗಲು ರಸ್ತೆ ಇದ್ದಿದ್ದರೆ ನಾವು ಫಸಲನ್ನು ಕಿತ್ತ ಕೂಡಲೇ ಲಾರಿಗಳಲ್ಲಿ ತುಂಬಿ ಸಾಗಣೆ ಮಾಡುತ್ತಿದ್ದೆವು. ಆದರೆ ಈಗ ಅನಿವಾರ್ಯವಾಗಿ ಎತ್ತಿನ ಗಾಡಿಗಳ ಮೂಲಕ ಜಮೀನಿನ ಬದುಗಳ ಮೇಲೆ ಈರುಳ್ಳಿ ಸಾಗಣೆ ಮಾಡಬೇಕಿದೆ. ಎತ್ತಿನ ಗಾಡಿಯಲ್ಲಿ ಸ್ವಲ್ಪ ಸ್ವಲ್ಪವೇ ಈರುಳ್ಳಿ ಸಾಗಿಸಬೇಕಿದೆ ಎಂಬುದು ರೈತರ ಅಳಲು.
    ಲಕ್ಷಾಂತರ ರೂ. ನಷ್ಟ: ಸಾದರಹಳ್ಳಿ ಗ್ರಾಮದ 22 ಕುಟುಂಬಗಳ ಜಮೀನಿಗೆ ಹೋಗಲು ದಾರಿಯೇ ಇಲ್ಲ. ಬೇರೆಯವರ ಜಮೀನುಗಳ ಬದುಗಳ ಮೇಲೆಯೇ ಇವರು ತಮ್ಮ ಜಮೀನುಗಳಿಗೆ ಹೋಗಬೇಕಿದೆ. ಹೀಗಾಗಿಯೇ ಇವರಿಗೆ ತಮ್ಮ ಜಮೀನಿನಲ್ಲಿ ಬೆಳೆದ ಈರುಳ್ಳಿ ಬೆಳೆಯನ್ನು ಕೂಡಲೇ ಸಾಗಣೆ ಮಾಡಲು ಸಾಧ್ಯವಾಗಿಲ್ಲ. ಇದೇ ಅವಧಿಯಲ್ಲಿ ಭಾರಿ ಮಳೆ ಸುರಿದಿದ್ದರಿಂದ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಕೊಳೆಯಲಾರಂಭಿಸಿದೆ. ಇದರಿಂದ ಪ್ರತಿ ರೈತ ಕನಿಷ್ಠ 2 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ. ಇದು ಈ ವರ್ಷದ ಕಥೆ ಮಾತ್ರವಲ್ಲ ಪ್ರತಿ ವರ್ಷವೂ ಇದು ಪುನರಾವರ್ತನೆ ಆಗುತ್ತಲೇ ಇದೆ.
    ಜಮೀನುಗಳಿಗೆ ಹೋಗಲು ಇದ್ದ ದಾರಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿದ್ದಾರೆ. ನಕ್ಷೆಯಲ್ಲಿರುವ ದಾರಿ ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳು ಸೂಚಿಸಿದರೂ ತೆರವು ಮಾಡಿಲ್ಲ. ಹೀಗಾಗಿ ಈರುಳ್ಳಿ ಸಾಗಣೆ ಮಾಡಲು ಸಾಧ್ಯವಾಗದೆ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದೇವೆ. ಕೂಡಲೇ ನಮ್ಮ ಜಮೀನಿಗೆ ಹೋಗಲು ಇದ್ದ ದಾರಿಯನ್ನು ಬಿಡಿಸಿಕೊಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನುತ್ತಾರೆ ರೈತ ಯೋಗೀಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts