More

    ರಷ್ಯಾ-ಯೂಕ್ರೇನ್ ಸಮರಕ್ಕೆ ವರ್ಷ; ಯಾರಿಗೂ ಇಲ್ಲ ಹರ್ಷ

    ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಶುರುವಾಗಿ ಒಂದು ವರ್ಷವಾಗುತ್ತಿದ್ದರೂ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಯುದ್ಧದಿಂದಾಗಿ ಯೂಕ್ರೇನ್​ನಲ್ಲಿ 7,000ಕ್ಕೂ ಹೆಚ್ಚು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. 80 ಲಕ್ಷ ಜನರು ಮನೆ ತೊರೆದು ವಿದೇಶಗಳಿಗೆ ವಲಸೆ ಹೋಗಿದ್ದಾರೆ. ದೀರ್ಘಕಾಲದಿಂದ ಜಗತ್ತು ಬೆಲೆಯೇರಿಕೆಯ ಬಿಸಿ ಅನುಭವಿಸುತ್ತಿದೆ.

    ಒಂದು ವರ್ಷದ ಹಿಂದೆ ಅಂದರೆ, 2022ರ ಫೆಬ್ರವರಿ 24ರಂದು ಮುಂಜಾನೆ ಯೂಕ್ರೇನ್ ಮೇಲೆ ಆಕ್ರಮಣ ಮಾಡುವ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಇದು ಯೂಕ್ರೇನ್​ನ ಸೇನಾಬಲ ಕುಗ್ಗಿಸುವ ಕಾರ್ಯಾಚರಣೆ; ಯೂಕ್ರೇನ್​ನಲ್ಲಿ ಅಮೆರಿಕ ನೇತೃತ್ವದ ನ್ಯಾಟೊ ಹಿಡಿತ ಸಾಧಿಸುವುದನ್ನು ತಡೆಯುವುದು ಗುರಿಯಾಗಿದೆ ಎಂದಿದ್ದರು. ಬಲಾಢ್ಯ ರಷ್ಯಾದ ಎದುರು ಚಿಕ್ಕ ರಾಷ್ಟ್ರವಾದ ಯೂಕ್ರೇನ್ ಬಹಳ ದಿನ ಹೋರಾಡಲಾಗದೆ ಕೆಲವೇ ದಿನಗಳಲ್ಲಿ ಯುದ್ಧ ಕೊನೆಗೊಳ್ಳುತ್ತದೆ ಎಂದೇ ಭಾವಿಸಲಾಗಿತ್ತು. ಈಗ ಒಂದು ವರ್ಷ ಗತಿಸಿದರೂ ಯುದ್ಧದಲ್ಲಿ ಸೋಲು-ಗೆಲುವು ಯಾರದ್ದೆಂಬುದೇ ತಿಳಿಯುತ್ತಿಲ್ಲ. ಯಾರ ಕೈಮೇಲಾಗಿದೆ ಎಂಬುದೂ ಗೋಚರಿಸುತ್ತಿಲ್ಲ. ಯುದ್ಧದ ನಿರ್ಣಾಯಕ ದಿನಗಳು ಇನ್ನೂ ದೂರ ಎಂಬ ಭಾವನೆ ಜಗತ್ತಿನಾದ್ಯಂತ ಬಲಗೊಳ್ಳುತ್ತಿದೆ. ಅಂದರೆ, ಮತ್ತಷ್ಟು ಸಾವು-ನೋವು, ವಲಸೆ, ಬೆಲೆಯೇರಿಕೆ…

    ಇಬ್ಬರಿಗೂ ಹಾನಿ: ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಅಮೆರಿಕ ಹಾಗೂ ಮಿತ್ರರಾಷ್ಟ್ರಗಳ ಸಂಪೂರ್ಣ ಬೆಂಬಲದೊಂದಿಗೆ ಯೂಕ್ರೇನ್ ಹೋರಾಟ ಮುಂದುವರಿಸಿದೆ. 80 ಲಕ್ಷದಷ್ಟು ಜನರು ಯೂಕ್ರೇನ್ ತೊರೆದು ನೆರೆಯ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ರಷ್ಯಾದ ದಾಳಿಯಿಂದಾಗಿ ದೇಶದ ಅನೇಕ ಭಾಗಗಳು ತತ್ತರಿಸಿವೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಪ್ರಕಾರ, ಇದುವರೆಗೆ ಯೂಕ್ರೇನ್​ನಲ್ಲಿ 7,199 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡವರ ಸಂಖ್ಯೆ ಅಂದಾಜು 11,800.

    ರಷ್ಯಾದ ಎಷ್ಟು ಸೈನಿಕರು ಸಾವನ್ನಪ್ಪಿದ್ದಾರೆ ಹಾಗೂ ಗಾಯಗೊಂಡಿದ್ದಾರೆಂಬ ನಿಖರ ಮಾಹಿತಿ ಇಲ್ಲದಿದ್ದರೂ 11 ಸಾವಿರಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದು, ಹತ್ತಾರು ಸಾವಿರ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇದಲ್ಲದೆ, ರಷ್ಯಾವು ಸೈನಿಕರ ಹಾಗೂ ಯುದ್ಧ ಸಾಮಗ್ರಿಗಳ ಕೊರತೆ ಎದುರಿಸುತ್ತಿದೆ; ಯೂಕ್ರೇನ್ ಸಾಮರ್ಥ್ಯವನ್ನು ಕಡಿಮೆ ಅಂದಾಜಿಸಿದ್ದು ಯುದ್ಧ ದೀರ್ಘಕಾಲ ಮುಂದುವರಿಯಲು ಕಾರಣ ಎಂಬ ಅಭಿಪ್ರಾಯವಿದೆ.

    ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕಣಕ್ಕೆ ಧುಮುಕಿದ್ರು ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ

    ಮೈತ್ರಿಕೂಟಗಳಲ್ಲಿ ಬದಲಾವಣೆ

    ಯುದ್ಧ ಪ್ರಾರಂಭವಾದ ನಂತರ ಅಮೆರಿಕ, ಬ್ರಿಟನ್, ಜಪಾನ್, ಕೆನಡಾ, ನಾರ್ವೆ, ಸ್ವಿಜರ್ಲೆಂಡ್, ಪೋಲೆಂಡ್, ಆಸ್ಟ್ರೇಲಿಯಾ, ಫಿನ್ಲಾ್ಯಂಡ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ಐಲ್ಯಾಂಡ್, ಜರ್ಮನಿ, ಫ್ರಾನ್ಸ್ ಮತ್ತು ಇಟಲಿ ಸೇರಿದಂತೆ ಹಲವು ದೇಶಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿದವು. ಪ್ರಸ್ತುತ ರಷ್ಯಾ ಪರ, ರಷ್ಯಾ ವಿರುದ್ಧ ಮತ್ತು ತಟಸ್ಥ- ಈ ಮೂರು ಧೋರಣೆಗಳು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿವೆ. ಸ್ವೀಡನ್ ಮತ್ತು ಫಿನ್​ಲ್ಯಾಂಡ್​ನಂತಹ ದೇಶಗಳು ನ್ಯಾಟೊ ಒಕ್ಕೂಟಕ್ಕೆ ಸೇರುವುದನ್ನು ದೀರ್ಘಕಾಲ ವಿರೋಧಿಸಿಕೊಂಡು ಬಂದಿದ್ದರೂ, ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ನ್ಯಾಟೊ ಸೇರುವತ್ತ ಒಲವು ತೋರಿಸಿವೆ. ಭಾರತ ಸೇರಿದಂತೆ ಏಷ್ಯಾದ ಬಹುತೇಕ ದೇಶಗಳು ತಟಸ್ಥ ಧೋರಣೆ ಪ್ರದರ್ಶಿಸಿವೆ.

    ಭಾರತಕ್ಕೂ ಬಿಸಿ

    ಈ ಯುದ್ಧ ಭಾರತದ ಆರ್ಥಿಕತೆ ಮೇಲೆಯೂ ಒಂದಿಷ್ಟು ಪರಿಣಾಮ ಬೀರಿದೆ. ರಷ್ಯಾದಿಂದ ತೈಲ ಖರೀದಿಸಬಾರದು ಹಾಗೂ ದಿಗ್ಬಂಧನ ವಿಧಿಸಬೇಕೆಂಬ ಅಮೆರಿಕದ ಒತ್ತಡಕ್ಕೆ ಭಾರತ ಮಣಿಯಲಿಲ್ಲ. ಕಚ್ಚಾ ತೈಲವನ್ನು ರಷ್ಯಾದಿಂದ ರಿತಿಯಾತಿ ದರದಲ್ಲಿ ಖರೀದಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಇದು ಯುದ್ಧದ ಯುಗವಲ್ಲ’ ಎಂದು ಹೇಳುವ ಮೂಲಕ ಭಾರತದ ನಿಲುವಿನ ಕುರಿತ ಸಂದೇಶವನ್ನು ರವಾನಿಸಿದರು. ಯುದ್ಧದ ಪರಿಣಾಮವಾಗಿ ಭಾರತಕ್ಕೂ ತಕ್ಕಮಟ್ಟಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಅಲ್ಲದೆ, ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಒಂದಿಷ್ಟು ಕಡಿಮೆಯಾಗಬಹುದಾಗಿದೆ. ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಸಿದರೂ ಪ್ರಸ್ತುತ ಹಣಕಾಸು ವರ್ಷದ ಮೊದಲ ಆರು ತಿಂಗಳಿಗೆ ಭಾರತದ ತೈಲ ಆಮದು ಪಾವತಿ ಶೇ. 76ರಷ್ಟು ಹೆಚ್ಚಿ, 90.3 ಬಿಲಿಯನ್ ಡಾಲರ್​ಗೆ (7,48,610 ಕೋಟಿ ರೂಪಾಯಿ) ತಲುಪಿದೆ.

    ಇದನ್ನೂ ಓದಿ: ಐಪಿಎಸ್​ ರೂಪಾ-ಐಎಎಸ್​ ರೋಹಿಣಿ ಜಟಾಪಟಿ ಮತ್ತೊಂದು ಹಂತಕ್ಕೆ: ಇಲ್ಲಿದೆ ಇಂದಿನ ಲೇಟೆಸ್ಟ್ ಬೆಳವಣಿಗೆ

    ಮುಂದೇನಾಗಬಹುದು?

    ರಷ್ಯಾ ಇನ್ನಷ್ಟು ತೀವ್ರವಾದ ಆಕ್ರಮಣ ನಡೆಸಬಹುದೆಂಬ ಭೀತಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿದೆ. ಮಿತ್ರರಾಷ್ಟ್ರಗಳ ಉದಾರ ಮಿಲಿಟರಿ ನೆರವಿನ ಹಿನ್ನೆಲೆಯಲ್ಲಿ ದಾಳಿ ಎದುರಿಸಲು ಸಜ್ಜಾಗಿರುವುದಾಗಿ ಯೂಕ್ರೇನ್ ಹೇಳಿದೆ. ಕ್ರಿಮಿಯಾ ಸೇರಿದಂತೆ ರಷ್ಯನ್ನರಿಗೆ ಬಿಟ್ಟುಕೊಟ್ಟ ಎಲ್ಲಾ ಪ್ರದೇಶಗಳನ್ನು ಮತ್ತೆ ವಶಪಡಿಸಿಕೊಳ್ಳುವುದಾಗಿ ಅದು ಪ್ರತಿಜ್ಞೆ ಮಾಡಿದೆ. ಹೀಗಾಗಿ, ಇನ್ನು ಕೆಲ ಕಾಲ ಸಮರ ಮತ್ತು ಜಾಗತಿಕ ಸಾಮಗ್ರಿ ಪೂರೈಕೆ ಸರಪಳಿಗೆ ಅಡಚಣೆ ಮುಂದುವರಿಯುವ ಸಾಧ್ಯತೆ ಇದೆ. ಜಾಗತಿಕವಾಗಿ ಹಲವಾರು ಕ್ರಮಗಳ ಮೂಲಕ ಆರ್ಥಿಕ ಹಿಂಜರಿತ ತಪ್ಪಿಸಬಹುದಾದರೂ ನಿಧಾನಗತಿಯ ಆರ್ಥಿಕ ಬೆಳವಣಿಗೆ ನಿಶ್ಚಿತ ಎಂಬಂಥ ಪರಿಸ್ಥಿತಿಯಿದೆ.

    4 ಲಕ್ಷ ಕೋಟಿ ರೂ. ನೆರವು: ರಷ್ಯಾ ವಿರುದ್ಧ ಯೂಕ್ರೇನ್ ಹೋರಾಟ ಮುಂದುವರಿಸಲು ಕಾರಣವೆಂದರೆ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಉದಾರವಾದ ಸಹಾಯ. ವರದಿಗಳ ಪ್ರಕಾರ, ಅಮೆರಿಕವು ಮಾನವೀಯ, ಮಿಲಿಟರಿ ಮತ್ತು ಆರ್ಥಿಕ ನೆರವು ಸೇರಿದಂತೆ ಇದುವರೆಗೆ 50 ಶತಕೋಟಿ ಡಾಲರ್​ನಷ್ಟು (4,14,495 ಲಕ್ಷ ಕೋಟಿ ರೂಪಾಯಿ) ಸಹಾಯವನ್ನು ಯೂಕ್ರೇನ್​ಗೆ ನೀಡಿದೆ. ಬ್ರಿಟನ್, ಜರ್ಮನಿ ಮತ್ತು ಕೆನಡಾ ಕೂಡ ಕೈಜೋಡಿಸಿವೆ.

    ಪ್ರಪಂಚದಾದ್ಯಂತ ಬೆಲೆಯೇರಿಕೆ: ಯುದ್ಧದಿಂದಾಗಿ ಆಹಾರ ಮತ್ತು ಇಂಧನ ಬೆಲೆಗಳು ತ್ವರಿತವಾಗಿ ಏರಿಕೆ ಕಂಡವು. ತೈಲ, ನೈಸರ್ಗಿಕ ಅನಿಲ, ಗೋಧಿ, ಸಸ್ಯಜನ್ಯ ಎಣ್ಣೆ ಮತ್ತು ರಸಗೊಬ್ಬರಗಳ ಪ್ರಮುಖ ಉತ್ಪಾದಕ ರಾಷ್ಟ್ರವಾಗಿದೆ ರಷ್ಯಾ. ಜಾಗತಿಕ ಆಹಾರ ಪೂರೈಕೆ ಸರಪಳಿಯಲ್ಲಿ ಯೂಕ್ರೇನ್ ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ. ಆಹಾರ ಪೂರೈಕೆ ಕೊರತೆಯಿಂದಾಗಿ ಪ್ರಪಂಚದಾದ್ಯಂತ ಹಣದುಬ್ಬರ ಏರಿತು. ರಷ್ಯಾವು ಯುರೋಪ್​ಗೆ ಪೈಪ್​ಲೈನ್ ಮೂಲಕ ನೈಸರ್ಗಿಕ ಅನಿಲ ರಫ್ತು ಮಾಡುವುದನ್ನು ಅರ್ಧದಷ್ಟು ಕಡಿತಗೊಳಿಸಿತು. ಅಲ್ಲದೆ, ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿ, ಪ್ರಮುಖವಾಗಿ ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸಿದವು. ಇದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣವಾಯಿತು.

    ಅಣ್ವಸ್ತ್ರ ಭೀತಿ ಹೆಚ್ಚಳ: ರಷ್ಯಾ-ಯೂಕ್ರೇನ್ ಯುದ್ಧವು ಮತ್ತೊಮ್ಮೆ ಪರಮಾಣು ಬೆದರಿಕೆಗಳನ್ನು ಮುಂಚೂಣಿಗೆ ತಂದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಮೊನ್ನೆ ಯೂಕ್ರೇನ್​ಗೆ ಭೇಟಿ ನೀಡುತ್ತಿದ್ದಂತೆಯೇ ರಷ್ಯಾವು ಅಣ್ವಸ್ತ್ರ ಬಲವನ್ನು ಯುದ್ಧ ಸನ್ನದ್ಧತೆಗೆ ಸಜ್ಜುಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪರಮಾಣು ದಾಳಿಯ ಅಪಾಯವು ಅತ್ಯಧಿಕ ಮಟ್ಟದಲ್ಲಿದೆ ಎಂದು ಬೈಡೆನ್ ಕೂಡ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ದೇಶಗಳು ತಮ್ಮ ಪರಮಾಣು ಸಾಮರ್ಥ್ಯ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts