More

    ಜಿಲ್ಲೆಗೆ ಮತ್ತೊಂದು ಮಹತ್ವದ ರಾಜಕೀಯ ಸ್ಥಾನ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಜಿಲ್ಲೆಗೆ ರಾಜಕೀಯವಾಗಿ ಹಲವು ಸ್ಥಾನಮಾನಗಳು ಲಭಿಸಿದವು. ಇದೀಗ ಸರ್ಕಾರ ಒಂದು ವರ್ಷದ ಅವಧಿ ಪೂರೈಸುತ್ತಿದ್ದಂತೆಯೇ ಮತ್ತೊಂದು ನಿಗಮ- ಮಂಡಳಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ರಾಣೆಬೆನ್ನೂರ ಶಾಸಕರಾಗಿದ್ದ ಆರ್. ಶಂಕರ ಕೆಲ ತಿಂಗಳುಗಳ ಕಾಲ ಮಾತ್ರ ಸಚಿವರಾಗಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದು ಕೂಡಲೆ ಶಿಗ್ಗಾಂವಿ ಶಾಸಕ ಬಸವರಾಜ ಬೊಮ್ಮಾಯಿ ಗೃಹ ಸಚಿವರಾದರು. ನಂತರ ಹಿರೇಕೆರೂರ ಮಾಜಿ ಶಾಸಕ ಯು.ಬಿ. ಬಣಕಾರಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ಇದಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದ ಹಿರೇಕೆರೂರಿನ ಬಿ.ಸಿ. ಪಾಟೀಲರು ಕೃಷಿ ಸಚಿವರಾದರು. ಇದೀಗ ಹಾವೇರಿ ಶಾಸಕ ನೆಹರು ಓಲೇಕಾರ ಅವರಿಗೆ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಲಭಿಸಿದೆ. ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ ಮೂವರು ಶಾಸಕರಿಗೆ, ಓರ್ವ ಮಾಜಿ ಶಾಸಕರಿಗೆ ರಾಜಕೀಯವಾಗಿ ಸ್ಥಾನಮಾನ ಸಿಕ್ಕಂತಾಗಿದೆ.

    ಈ ಹಿಂದೆ 2008ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ಸಮಯದಲ್ಲಿ ಸಿ.ಎಂ. ಉದಾಸಿ ಹಾಗೂ ಬಸವರಾಜ ಬೊಮ್ಮಾಯಿ ಸಚಿವರಾಗಿದ್ದರು. ಸೋಮಣ್ಣ ಬೇವಿನಮರದ ವಿಧಾನ ಪರಿಷತ್ ಸದಸ್ಯರಾಗಿದ್ದರು ಹಾಗೂ ಕಾಡಾ ಅಧ್ಯಕ್ಷರಾಗಿದ್ದರು. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷದ ಅವಧಿಯವರೆಗೂ ಜಿಲ್ಲೆಯ ಒಬ್ಬ ಶಾಸಕರಿಗೂ ಸಚಿವ ಸ್ಥಾನ ಲಭಿಸಿರಲಿಲ್ಲ. ನಂತರ ಮನೋಹರ ತಹಸೀಲ್ದಾರ್, ರುದ್ರಪ್ಪ ಲಮಾಣಿ ಸಚಿವರಾಗಿದ್ದರು. ಕೆ.ಬಿ. ಕೋಳಿವಾಡರು ವಿಧಾನಸಭಾಧ್ಯಕ್ಷರಾಗಿದ್ದರು.

    ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ: ಶಾಸಕ ನೆಹರು ಓಲೇಕಾರ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಸರ್ಕಾರ ರಚನೆಯಾದಾಗಿನಿಂದಲೂ ಹಿರಿತನ ಹಾಗೂ ಜಾತಿ ಆಧಾರದಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ ಹೊಂದಿದ್ದರು. ಸರ್ಕಾರಕ್ಕೆ ಒಂದು ವರ್ಷದ ಪೂರೈಸಿದ್ದು, ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆಯ ವೇಳೆ ಸಿಎಂ ಅವಕಾಶ ನೀಡುತ್ತಾರೆ ಎಂದು ಮಾಧ್ಯಮಗಳಿಗೆ ಆಗಾಗ ಹೇಳುತ್ತಲೇ ಬಂದಿದ್ದರು. ಅಲ್ಲದೆ, ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಜಿಪಂ ಸಭಾಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜನಸ್ನೇಹಿ ಆಡಳಿತದ ಒಂದು ವರ್ಷದ ಸಂಭ್ರಮಾಚರಣೆಯ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದಿದ್ದರು. ಅದಾದ ನಂತರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ನೇಮಕಾತಿ ಪಟ್ಟಿ ಹೊರಬಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಓಲೇಕಾರ ಸಿಎಂ ಜೊತೆಗೆ ರ್ಚಚಿಸಿ ಅಂತಿಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದು, ಮಹತ್ವ ಪಡೆದುಕೊಂಡಿದೆ.

    ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಮುಖ್ಯಮಂತ್ರಿಗಳು ನನ್ನನ್ನು ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಳಿಸಿದ್ದಾರೆ. ಇದು ಸಂತಸ ತಂದಿದೆ. ನಾಳೆ ಸಿಎಂ ಭೇಟಿಯಾಗಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ವಿಚಾರವಾಗಿ ರ್ಚಚಿಸಿ ನನ್ನ ನಿರ್ಧಾರ ತಿಳಿಸುವೆ.

    | ನೆಹರು ಓಲೇಕಾರ ಶಾಸಕರು ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts