More

    ಮಕ್ಕಳಿಗೆ ಹಳೆಯ ಪುಸ್ತಕಗಳೇ ಗತಿ

    ರಾಣೆಬೆನ್ನೂರ: ಪ್ರಸಕ್ತ ವರ್ಷ ಕೋವಿಡ್ ಸಂಕಷ್ಟದಿಂದಾಗಿ ಹೊಸ ಪುಸ್ತಕಗಳ ಮುದ್ರಣ ಹಾಗೂ ವಿತರಣೆಗೆ ಇನ್ನೂ ಬಹಳಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಇದೀಗ ಹಳೆಯ ಪುಸ್ತಕಗಳೇ ಗತಿ ಎನ್ನುವಂತಾಗಿದೆ.

    ಶಾಲೆ ಪ್ರಾರಂಭವಾಗಿಲ್ಲ. ಆದರೆ, ಆನ್​ಲೈನ್ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಶಿಕ್ಷಕರು ಮಾಡುವ ಪಾಠವನ್ನು ಆಲಿಸಲು ವಿದ್ಯಾರ್ಥಿಗಳ ಬಳಿ ಪುಸ್ತಕ ಇಲ್ಲದಿದ್ದರೆ ಹೇಗೆ ಎನ್ನುವ ಸಮಸ್ಯೆ ಎದುರಾಗಿದ್ದು, ಅದಕ್ಕಾಗಿ ಸರ್ಕಾರ ಪ್ರತಿ ಶಾಲೆಯಲ್ಲೂ ಪುಸ್ತಕ (ಬುಕ್)ಬ್ಯಾಂಕ್ ತೆರೆದಿದೆ.

    ಹಳೆಯ ಪುಸ್ತಕಗಳನ್ನು ಪ್ರತಿ ಶಾಲೆಯಲ್ಲಿ ಬುಕ್ ಬ್ಯಾಂಕ್ ತೆರೆಯಲಾಗಿದೆ. ವಿದ್ಯಾರ್ಥಿಗಳಿಂದ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಐದನೇ ತರಗತಿ ಪಾಸಾದ ವಿದ್ಯಾರ್ಥಿಯಿಂದ ಹಳೇ ಪುಸ್ತಕಗಳನ್ನು ಪಡೆದು, ಆ ವಿದ್ಯಾರ್ಥಿಗೆ ಆರನೇ ತರಗತಿ ಪುಸ್ತಕಗಳನ್ನು ನೀಡಲಾಗುತ್ತಿದೆ. ಹೀಗೆ ಒಂದರಿಂದ 10ನೇ ತರಗತಿವರೆಗೂ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪುಸ್ತಕಗಳನ್ನು ಸಂಗ್ರಹಿಸಿ ವಿತರಿಸಲಾಗುತ್ತಿದೆ. ಇದರಿಂದ ಪುಸ್ತಕಗಳ ಸಮಸ್ಯೆ ಶೇ. 75ರಷ್ಟು ಪರಿಹಾರವಾಗಿದೆ.

    ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಶಾಲೆಯಲ್ಲಿ ಮಾತ್ರ ಸಮಸ್ಯೆಯಾಗುತ್ತದೆ. ಇನ್ನು ಕೆಲ ವಿದ್ಯಾರ್ಥಿಗಳು ಪುಸ್ತಕಗಳನ್ನು ಸರಿಯಾಗಿ ಇಟ್ಟುಕೊಳ್ಳದೆ ಹಾಳು ಮಾಡಿಕೊಂಡಿದ್ದರೆ, ಸಂಗ್ರಹ ಕಡಿಮೆಯಾಗುತ್ತದೆ. ಉಳಿದಂತೆ ಬಹುದೊಡ್ಡ ಸಮಸ್ಯೆಯನ್ನು ಪುಸ್ತಕ ಬ್ಯಾಂಕ್ ನೀಗಿಸುತ್ತಿದೆ.

    ವ್ಯಾಪಕ ಪ್ರಶಂಸೆ: ಪ್ರಸಕ್ತ ವರ್ಷ ಪುಸ್ತಕ ಮುದ್ರಣವಾಗಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಕಾರ್ಯಕ್ಕೆ ತಾಲೂಕಿನಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಹೀಗಾಗಿ, ಪ್ರತಿ ಶಾಲೆಯಲ್ಲಿ ಪುಸ್ತಕ ಸಂಗ್ರಹ ಕಾರ್ಯ ಭರದಿಂದ ಸಾಗಿದೆ.

    ಅಕ್ಕಪಕ್ಕದವರ ಮನೆಯಲ್ಲಿ ಹಳೆಯ ಪುಸ್ತಕಗಳು ಇದ್ದರೆ ಮಕ್ಕಳ ಮೂಲಕ ಪುಸ್ತಕ ಬ್ಯಾಂಕ್​ಗೆ ಕಳುಹಿಸಿಕೊಟ್ಟರೆ ಪುಸ್ತಕ ಸಮಸ್ಯೆ ನೀಗುತ್ತದೆ. ಮನೆಯಲ್ಲಿ 1ರಿಂದ 10ನೇ ತರಗತಿ ವರೆಗಿನ ಪಠ್ಯಪುಸ್ತಕಗಳು ಇದ್ದರೆ ಬ್ಯಾಂಕ್​ಗೆ ನೀಡುವಂತೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಸಿಬ್ಬಂದಿ ಮನವಿ ಮಾಡಿದ್ದಾರೆ.

    1.22 ಲಕ್ಷ ಹೊತ್ತಗೆ ಸಂಗ್ರಹ

    ತಾಲೂಕಿನಲ್ಲಿ 1ರಿಂದ 10ನೇ ತರಗತಿವರೆಗೆ ಸರ್ಕಾರಿ ಹಾಗೂ ಅನುದಾನಿತ ಶಾಲೆ ಸೇರಿ ಒಟ್ಟು 36,905 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಒಟ್ಟು 1,22,802 ಪುಸ್ತಕಗಳನ್ನು ಈಗಾಗಲೇ ಆಯಾ ಶಾಲೆ ಶಿಕ್ಷಕರು ಸಂಗ್ರಹಿಸಿದ್ದಾರೆ. ಶಾಲೆಗೆ ದಾಖಲಾತಿ ಪಡೆದ ಮಕ್ಕಳಿಗೆ ಪುಸ್ತಕಗಳನ್ನೂ ವಿತರಿಸಲಾಗುತ್ತಿದೆ.

    ಕರೊನಾ ಹಿನ್ನೆಲೆಯಲ್ಲಿ ತಾಲೂಕಿಗೆ ಇನ್ನೂ ಶಿಕ್ಷಣ ಇಲಾಖೆಯಿಂದ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ಬದಲಾಗಿ ಇಲಾಖೆಯಿಂದ ಬುಕ್ ಬ್ಯಾಂಕ್ ಮಾಡುವಂತೆ ಆದೇಶವಾಗಿದ್ದರಿಂದ ಈಗಾಗಲೇ ಕಲಿತ ವಿದ್ಯಾರ್ಥಿಗಳಿಂದ ಪುಸ್ತಕ ಸಂಗ್ರಹಿಸಿ ಹೊಸದಾಗಿ ಪ್ರವೇಶ ಪಡೆಯುವ ಮಕ್ಕಳಿಗೆ ನೀಡುತ್ತಿದ್ದೇವೆ.

    | ಗುರುಪ್ರಸಾದ, ಬಿಇಒ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts