More

    ಅಧಿಕಾರಿಗಳ ನೀರಿಳಿಸಿದ ಶಾಸಕಿ

    ಅಂಕೋಲಾ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಯಾದ ಜಲಜೀವನ ಮಿಷನ್ ಯೋಜನೆಯಿಂದ ಪ್ರತಿಯೊಂದು ಮನೆ ಬಾಗಿಲಿಗೆ ನಲ್ಲಿ ಮೂಲಕ ನೀರು ಪೂರೈಸಲು 16 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, 21 ಗ್ರಾಪಂ ಮತ್ತು ಜನರ ಸಹಭಾಗಿತ್ವದಲ್ಲಿ 45 ಲಕ್ಷ ರೂಪಾಯಿ ಭರಣ ಮಾಡಿದ್ದಾರೆ. ಇದನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಳ್ಳ ಹಿಡಿಸಲು ಮುಂದಾಗಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕುಡಿಯುವ ನೀರಿನ ಕುರಿತು ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಾದ ಗುರುದತ್ ಶೇಟ್, ವಿ.ಎಸ್. ಬಾಲಚಂದ್ರ ಅವರನ್ನು ಶಾಸಕಿ ರೂಪಾಲಿ ನಾಯ್ಕ ತರಾಟೆಗೆ ತೆಗೆದುಕೊಂಡರು.

    ಆಯಾ ಗ್ರಾಮ ಪಂಚಾಯಿತಿಯಲ್ಲಿ ನೀರಿನ ಮೂಲವಿದ್ದರೆ ಅದನ್ನು ಸದ್ಬಳಕೆ ಮಾಡಿಕೊಳ್ಳುವುದು. ತೀರಾ ಕುಡಿಯುವ ನೀರು ಅಗತ್ಯವಿರುವ ಪ್ರದೇಶಗಳಲ್ಲಿ ಮುಂಚಿತವಾಗಿ ಅವರಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ, ಇಲಾಖೆಯವರು ಈ ಹಿಂದಿನಂತೆ ವಿವಿಧ ಯೋಜನೆಗಳಂತೆ ಇದನ್ನು ನುಂಗಲು ಹೊರಟಿದ್ದಾರೆ. ಆಯಾ ಪಂಚಾಯಿತಿಯ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಭೇಟಿ ನೀಡಿ ನೀರು ಪೂರೈಸಲು ತುರ್ತು ಕ್ರಮ ಕೈಗೊಳ್ಳಬೇಕು ಮತ್ತು ಸಿದ್ಧಪಡಿಸಿಕೊಂಡಿರುವ ಕಾಮಗಾರಿಯ ರೂಪುರೇಷೆಗಳನ್ನು ಮಂಗಳವಾರ ತಾಲೂಕು ಪಂಚಾಯಿತಿ ಇಒಗಳಿಗೆ ನೀಡಬೇಕು ಎಂದು ತಾಕೀತು ಮಾಡಿದರು.

    ವಾಸರೆಕುದ್ರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ ನಾಯಕ ಮಾತನಾಡಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಈವರೆಗೂ ಒಂದು ಹನಿ ನೀರಿನ ಸೌಲಭ್ಯವನ್ನು ಜನರಿಗೆ ನೀಡಿಲ್ಲ. ಅವರನ್ನು ಇಲ್ಲಿಂದ ವರ್ಗಾಯಿಸಿದರೆ ಮಾತ್ರ ಕುಡಿಯುವ ನೀರಿನ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

    ಹೊನ್ನೆಬೈಲ್ ಗ್ರಾಪಂ ಅಧ್ಯಕ್ಷ ಮಾದೇವ ಗುನಗಾ, ಹಿಲ್ಲೂರು ಗ್ರಾಪಂ ಅಧ್ಯಕ್ಷ ಬಾಬು ಸುಂಕೇರಿ, ಸುಂಕ ಸಾಳ ಗ್ರಾಪಂ ಅಧ್ಯಕ್ಷ ಸದಾನಂದ ನಾಯಕ, ಸಗಡಗೇರಿ ಗ್ರಾಪಂ ಅಧ್ಯಕ್ಷೆ ಸೀತಾ ಗೌಡ, ಬೆಳಂಬಾರ ಗ್ರಾಪಂ ಅಧ್ಯಕ್ಷ ನಾರಾಯಣ ಮಡಿವಾಳ, ಸದಸ್ಯರಾದ ವೆಂಕಟೇಶ ಗೌಡ, ಮಾದೇವ ಗೌಡ, ಬೇಲೆಕೇರಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಜಾಂಬಾವಳಿಕರ ಹಾಗೂ ಎಲ್ಲಾ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ತಾಪಂ ಇಒ ಪಿ.ವೈ. ಸಾವಂತ, ತಹಸೀಲ್ದಾರ್ ಉದಯ ಕುಂಬಾರ ಸಲಹೆ ನೀಡಿದರು.

    ತುರ್ತು ಕ್ರಮ: ಅಂಕೋಲಾ ತಾಲೂಕು ಬರ ಪೀಡಿತ ತಾಲೂಕು ಘೊಷಣೆಯಾಗದ ಹಿನ್ನೆಲೆಯಲ್ಲಿ ಟ್ಯಾಂಕರ್​ನಿಂದ ನೀರು ಪೂರೈಸಲು ಹಣಕಾಸಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ರ್ಚಚಿಸುತ್ತೇನೆ. ಅಲ್ಲಿಯವರೆಗೆ ತಾಪಂ ಇಒ ಗ್ರಾಪಂ ಮೂಲಕ ನೀರು ಪೂರೈಸಲು ಸೂಚಿಸಿದ್ದೇನೆ ಎಂದು ಶಾಸಕಿ ರೂಪಾಲಿ ನಾಯ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತಿಳಿಸಿದರು.

    14 ಕುಟುಂಬಕ್ಕೆ ನಿವೇಶನ: ನೆರೆ ಸಂದರ್ಭದಲ್ಲಿ ಮುಳುಗಡೆ ಹಂತ ತಲುಪುವ ಸಗಡಗೇರಿ ಗ್ರಾಪಂ ವ್ಯಾಪ್ತಿಯ ಮಟನ ಕೂರ್ವೆ 14 ಕುಟುಂಬಗಳಿಗೆ ಅಗ್ರಗೋಣದಲ್ಲಿ ತಲಾ 1 ಗುಂಟೆಯಂತೆ ನಿವೇಶನ ಸದ್ಯದಲ್ಲಿಯೇ ನೀಡಲಾಗುವುದು. ಇವರು ಮನೆ ನಿರ್ವಿುಸಿಕೊಳ್ಳಲು ಒಟ್ಟು 6.5 ಲಕ್ಷ ರೂಪಾಯಿ ಬರಲಿದೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಪ್ರತಿ ಮನೆಗೂ ನೀರು ಕೊಡುವ ಜಲ ಜೀವನ ಮಿಷನ್ ಯೋಜನೆ ತಾಲೂಕಿನಲ್ಲಿ ವಿಫಲವಾದರೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಾದ ಗುರುದತ್ ಶೇಟ್, ವಿ.ಎಸ್. ಬಾಲಚಂದ್ರ ಜೈಲಿಗೆ ಹೋಗಬೇಕಾಗುತ್ತದೆ. ಒಂದು ವೇಳೆ ನಿಮ್ಮಿಂದ ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಅಥವಾ ವರ್ಗಾವಣೆ ಮಾಡಿಸಿಕೊಳ್ಳಬೇಕು.

    | ರೂಪಾಲಿ ನಾಯ್ಕ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts