More

    ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸಿ

    ಬಾಗಲಕೋಟೆ: ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಮೇಲಿಂದ ಮೇಲೆ ಪರಿಶೀಲಿಸಿ ಮಕ್ಕಳಿಗೆ ವಿತರಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಆದೇಶದ ಪ್ರಕಾರ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾದ ಆಹಾರ ಪದಾರ್ಥಗಳನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸಲು ತಿಳಿಸಿದರು.

    ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಮಯದಲ್ಲಿ ಮಕ್ಕಳ ಹಾಜರಾತಿ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಹಾಜರಾತಿ ಬಗ್ಗೆ ಪರಿಶೀಲಿಸಿ ಅಲ್ಲಿ ನ್ಯೂನತೆ ಕಂಡುಬಂದಲ್ಲಿ ಅದರ ಬಗ್ಗೆ ವರದಿ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಕೂಸಿನ ಮನೆ ಮಾಡಲಾಗುತ್ತಿದೆ. ಅದರ ನಿರ್ವಹಣೆ ಜವಾಬ್ದಾರಿ ಕೂಡ ವಹಿಸಿಕೊಳ್ಳಬೇಕು ಎಂದು ಸೂಚಿಸಿದರು.

    ಅಂಗನವಾಡಿ ದುರಸ್ತಿ, ಶೌಚಗೃಹ ಹಾಗೂ ಸಲಕರಣೆಗಳಿಗಾಗಿ ಜಿಲ್ಲಾ ಪಂಚಾಯಿತಿಯಿಂದ ಅನುದಾನ ನೀಡಲಾಗಿದೆ. ಅಧಿಕಾರಿಗಳು ಅಂಗನವಾಡಿಗಳಿಗೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟದಿಂದ ಕೂಡಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಲು ತಿಳಿಸಿದ ಅವರು, ಸಾಂತ್ವನ ಕೇಂದ್ರಗಳಲ್ಲಿ ದಾಖಲಾದ ವರದಕ್ಷಿಣೆ, ಲೈಂಗಿಕ ಕಿರುಕುಳ, ಕೌಟುಂಬಿಕ ಕಲಹ, ಅತ್ಯಾಚಾರ, ಬಹುಪತ್ನಿತ್ವ ವಿಚ್ಛೇದನ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ ಎಚ್. ಅವರು ವಿವಿಧ ಯೋಜನೆಗಳ ಪ್ರಗತಿ ವಿವರವನ್ನು ಸಭೆಗೆ ತಿಳಿಸುತ್ತ, ಬಾಗಲಕೋಟೆಯಲ್ಲಿ ಜಿಲ್ಲಾಡಳಿತ ಭವನ, ಜಿಲ್ಲಾ ಬಾಲಭವನ, ಇಳಕಲ್ಲ ಮತ್ತು ರಬಕವಿಯಲ್ಲಿ ಶಿಶುಪಾಲನಾ ಕೇಂದ್ರಗಳು ನಡೆಯುತ್ತಿವೆ. ವೇಳಾಪಟ್ಟಿ ಪ್ರಕಾರ ಆಹಾರ ನೀಡಲಾಗುತ್ತಿದೆ. ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕುಗಳಲ್ಲಿ ಹೊಸ ಸಾಂತ್ವನ ಕೇಂದ್ರ ಪ್ರಾರಂಭಿಸಲು ಅನುಮೋದನೆಗಾಗಿ ಮುಂದಿನ ಸಭೆಯಲ್ಲಿಡಲು ತಿಳಿಸಲಾಯಿತು. ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗಾಗಿ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಲಾಗಿ ಮುಂದಿನ ಕ್ರಮಕ್ಕಾಗಿ ಪ್ರಧಾನ ಕಚೇರಿಗೆ ರವಾನಿಸಲಾಗುತ್ತದೆ ಎಂದರು.

    ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ಸ್ಯಾಂಪಲ್ ಪ್ಯಾಕೆಟ್‌ಗಳನ್ನು ಸಿಇಒ ಪರಿಶೀಲಿಸಿದರು. ಸಭೆಯಲ್ಲಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ, ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿಲ್ಪಾ ಹಿರೇಮಠ, ದಸ್ತಗಿರಿಸಾಬ ಮುಲ್ಲಾ, ಎಂ.ಟಿ.ದಾಸರ, ಕೋರೆಗೋಳ, ಬಸವರಾಜ ಕವಟೇಕರ ಸೇರಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts