More

    ಅಂಗನವಾಡಿಗಳಲ್ಲಿ ಸಮರ್ಪಕ ಸೌಲಭ್ಯ ಕಲ್ಪಿಸಿ

    ಜಮಖಂಡಿ: ಸರ್ಕಾರಿ ಶಾಲೆ ಸೇರಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಕುಡಿಯುವ ನೀರು, ಶೌಚಗೃಹಗಳು ಸುಸಜ್ಜಿತವಾಗಿ ಇರುವಂತೆ ನಿಗಾ ವಹಿಸಬೇಕು. ಇಲ್ಲದಿದ್ದರೆ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಅನುಷ್ಠಾನ ಮಾಡಬೇಕು ಎಂದು ಇಂಡಿ ಎಸಿ, ರಬಕವಿ-ಬನಹಟ್ಟಿ ತಾಲೂಕು ಉಸ್ತುವಾರಿ ಅಧಿಕಾರಿ ಆಬಿದ ಗದ್ಯಾಳ ಹೇಳಿದರು.

    ನಗರದ ತಾಲೂಕು ಆಡಳಿತ ಸೌದದ ಸಭಾಭವನದಲ್ಲಿ ಶನಿವಾರ ನಡೆದ ರಬಕವಿ, ಬನಹಟ್ಟಿ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಯಾವ ಅಂಗನವಾಡಿಗಳಿಗೆ ಸ್ವಂತ ಕಟ್ಟಡ, ಜಾಗ ಇಲ್ಲವೋ ಅಂತ ಅಂಗನವಾಡಿಗಳ ಮಾಹಿತಿ ತೆಗೆದುಕೊಂಡು ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

    ಕಂದಾಯ ಇಲಾಖೆ ಹಾಗೂ ಎಡಿಎಲ್‌ಆರ್ ಅಧಿಕಾರಿಗಳು ಜಾಗದ ಲಭ್ಯತೆ ಅನುಗುಣವಾಗಿ ವಿಳಂಬವಿಲ್ಲದೆ ಕಡತಗಳನ್ನು ಪರಿಶೀಲಿಸಿ ಶೀಘ್ರ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

    ಅಂಗನವಾಡಿಯಲ್ಲಿ ಪೌಷ್ಟಿಕಾಂಶ ಕೊರೆತೆ ಇದ್ದ ಮಕ್ಕಳ ಕಾಳಜಿ ವಹಿಸಬೇಕಲ್ಲದೆ, ಕನಿಷ್ಠ ಹತ್ತು ದಿನಗಳವರೆಗೆ ಉಪಚರಿಸಿದರೆ ಮಕ್ಕಳ ಅರೋಗ್ಯ ಸುಧಾರಿಸುತ್ತದೆ. ಪಿಆರ್‌ಡಿ ಇಲಾಖೆ ಪ್ರಗತಿಯಲ್ಲಿರುವ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳುವಂತೆ ನೋಡಿಕೊಳ್ಳಬೇಕು. ಗುಣಮಟ್ಟ ಪರಿಶೀಲಿಸಬೇಕು. ನೀತಿ ಸಂಹಿತೆ ಬರುವ ಮುನ್ನ ಹೊಸ ಕಾಮಗಾರಿ ಪ್ರಾರಂಭಿಸುವ ಹಂತದಲ್ಲಿದ್ದರೆ ಕಾಮಗಾರಿಗೆ ಆದೇಶ ನೀಡಬೇಕು. ಸಮಸ್ಯೆಗಳಿದ್ದರೆ ಗಮನಕ್ಕೆ ತಂದರೆ ಮೇಲಧಿಕಾರಿ ಹಾಗೂ ರಾಜ್ಯ ಉಸ್ತವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು. ಯಾವುದೇ ಕಾರಣಕ್ಕೂ ಸರ್ಕಾರದ ಅನುದಾನ ಮರಳಿ ಹೋಗುವಂತಾಗಬಾರದು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಭಣಗೊಳ್ಳುವ ಭೀತಿ ಇದ್ದು, ಮುಂಜಾಗ್ರತವಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.

    ರೈತರಿಗೆ ಬೆಳೆಹಾನಿ ಪರಿಹಾರ ತಲುಪುತ್ತಿಲ್ಲ, ರೈತರು ಕಚೇರಿಗಳಿಗೆ ಅಲೆದಾಡುತ್ತಿರುವುದು ಏಕೆ? ಎಂದು ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ಪ್ರಶ್ನಿಸಿದಾಗ, ನಾವು ಸ್ಥಳಕ್ಕೆ ಭೇಟಿ ನೀಡಿದಾಗ ರೈತರು ನೀಡಿದ ಮಾಹಿತಿ, ನಮ್ಮ ಬಳಿ ಲಭ್ಯವಿದ್ದ ಮಾಹಿತಿಗೂ ತಾಳೆ ಆಗದ್ದರಿಂದಾಗಿ ವಿಳಂಬವಾಗುತ್ತಿದೆ. ಅದನ್ನು ಸರಿಪಡಿಸುವ ಕೆಲಸ ನಡೆದಿದೆ ಎಂದು ತೋಟಗಾರಿಕೆ ಅಧಿಕಾರಿ ಉತ್ತರಿಸಿದರು.

    ಸಭೆಯಲ್ಲಿ ವ್ಯಕ್ತಿಯೊಬ್ಬರು ಸರ್ಕಾರದಿಂದ ಬರುವ ಪಿಂಚಣಿ ದೊರೆಯದ ಕುರಿತು ಉಸ್ತುವಾರಿ ಅಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೇ ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗೆ ಅರ್ಜಿ ಸ್ಥಿತಿಗತಿ ಪರಿಶೀಲಿಸಿ ಸರಿಪಡಿಸಲು ತಾಕೀತು ಮಾಡಿದರು.

    ಅಲ್ಲದೆ, ವಿವಿಧ ಕಾರಣದಿಂದ 327 ಪಿಂಚಣಿ ಅರ್ಜಿಗಳು ಬಾಕಿ ಇರುವ ಕುರಿತು ಮಾಹಿತಿ ಪಡೆದುಕೊಂಡ ಗದ್ಯಾಳ, ಬಡವರ ಉಪಜೀವನಕ್ಕೆ ಪಿಂಚಣಿ ಆಸರೆ ಆಗಿದ್ದು, ಶೀಘ್ರ ಅವರಿಗೆ ದೊರಕಿಸಿಕೊಡಬೇಕು. ಪ್ರತಿ ತಿಂಗಳೂ ಪಿಂಚಣಿ ಅದಾಲತ್ ನಿಗದಿ ಪಡಿಸುವ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಹಸೀಲ್ದಾರ್ ಗಿರೀಶ್ ಸಾದ್ವಿ ಅವರಿಗೆ ತಿಳಿಸಿದರು.

    ಜಿಎಲ್ಬಿಸಿ ಇಲಾಖೆಯ ಚೇತನ ಅಬ್ಬಿಗೇರಿ, ಪಿ. ಎಸ್. ಕುಲಕರ್ಣಿ, ಎಸ್. ಆರ್. ಬಾಡಗಿ, ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ, ಸಮಾಜ ಕಲ್ಯಾಣ ಇಲಾಖೆ ಗಡದೇವರಮಠ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿ ಸುರೇಶ ಪಾಂಚಾಳ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಾಚಕನೂರ, ಸಿಡಿಪಿಒ ದಾಸರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts