More

    ಗ್ರಾಪಂ ಸದಸ್ಯರ ಅಧಿಕಾರದಲ್ಲಿ ಅಧಿಕಾರಿಗಳ ಹಸ್ತಕ್ಷೇಪ: ಕರಡು ಅಧಿಸೂಚನೆಗೆ ಜನಪ್ರತಿನಿಧಿಗಳ ವಿರೋಧ

    ವಿಲಾಸ ಮೇಲಗಿರಿ ಬೆಂಗಳೂರು

    ಗ್ರಾಮ ಪಂಚಾಯಿತಿಗಳು ಹಳ್ಳಿಗಳಿಗೆ ಸರ್ಕಾರ ವಿದ್ದಂತೆ! ಅಧಿಕಾರ ವಿಕೇಂದ್ರೀಕರಣ ಮಾಡಿ ಗ್ರಾಮ ಸ್ವರಾಜ್ಯಕ್ಕೆ ನಾಂದಿ ಹಾಡಿದ ಮೊದಲ ರಾಜ್ಯ ಕರ್ನಾಟಕ. ಆದರೀಗ ಅದೇ ಸರ್ಕಾರ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ 12ಎಲ್, 43ಎ , 48(4-5)ರ ಅನ್ವಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ವಜಾಮಾಡುವ ಪ್ರಕ್ರಿಯೆ ನಿಯಮಗಳು-2022 ಕರಡು ಅಧಿಸೂಚನೆ ಹೊರಡಿಸುವ ಮೂಲಕ ಅವರ ಅಧಿಕಾರ ಮೊಟಕುಗೊಳಿಸುವ ಹುನ್ನಾರ ನಡೆಸಿದೆ ಎಂಬ ಆರೋಪ ಕೇಳಿ ಬರುತ್ತಿವೆ.

    ‘ದುರ್ನಡತೆ’ ಹೆಸರಿನಲ್ಲಿ ದೂರು ಸ್ವೀಕಾರ, ತನಿಖೆ, ವಿಚಾರಣೆ ಜವಾಬ್ದಾರಿಯನ್ನು ಕೆಳ ಹಂತದ ಅಧಿಕಾರಿಗಳಿಗೆ ನೀಡುವ ಮೂಲಕ ಸರ್ಕಾರ ಗ್ರಾಪಂ ಪ್ರತಿನಿಧಿಗಳ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಸರ್ಕಾರ ಹೊರಟಿದೆ ಎಂಬ ದೂರು ಕೇಳಿ ಬರುತ್ತಿವೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಧಿಕಾರಶಾಹಿ ವ್ಯವಸ್ಥೆಯ ಮೂಲಕ ಕಟ್ಟಿಹಾಕುವ ಹುನ್ನಾರ ಇದಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಟೀಕಿಸಿದೆ. ಪಿಡಿಒ ಹೊರತುಪಡಿಸಿ ಎಲ್ಲ ಹಂತದ ಅಧಿಕಾರಿಗಳ ಮೂಲಕ ಪಂಚಾಯಿತಿ ಸದಸ್ಯರನ್ನು ನಿಯಂತ್ರಿಸುವ ಪ್ರಯತ್ನದ ಫಲ ಈ ಅಧಿಸೂಚನೆಯಾಗಿದೆ. ಜತೆಗೆ ಚುನಾಯಿತ ಪ್ರತಿನಿಧಿಗಳ ಕರ್ತವ್ಯದಲ್ಲಿ ಅಧಿಕಾರಶಾಹಿ ಹಸ್ತಕ್ಷೇಪ ಮಾಡುವ ಅಧಿಕಾರ ಕೊಡುವ ಪ್ರಯತ್ನ ನಡೆದಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

    ಚುನಾಯಿತ ಸದಸ್ಯರ ವಿರುದ್ಧ ಕತ್ತಿ: ದುರ್ನಡತೆ, ಅಧಿಕಾರ ದುರುಪಯೋಗ, ಹಣ ದುರ್ಬಳಕೆ ಪ್ರಕರಣಗಳ ದೂರು ಸ್ವೀಕಾರ, ತನಿಖೆ, ವಿಚಾರಣೆ, ಶಿಕ್ಷೆ ವಿಧಿಸುವ ಅಧಿಕಾರ ಈವರೆಗೆ ಸರ್ಕಾರದ ಹಂತದಲ್ಲಿತ್ತು. ಅದನ್ನು ಈಗ ಕೆಳ ಹಂತದ ಅಧಿಕಾರಿಗಳ ಕೈಗೆ ಕೊಡುವ ಮೂಲಕ ಗ್ರಾಪಂ ಸದಸ್ಯರ ಮೇಲೆ ಸರ್ಕಾರ ಕತ್ತಿ ಝುಳಪಿಸಲು ಹೊರಟಿದೆ ಎನ್ನಲಾಗಿದೆ. ಸರ್ಕಾರ ಕರಡು ನಿಯಮ ಜಾರಿಗೊಳಿಸಿದರೆ ಅಧಿಕಾರ ದುರುಪಯೋಗವಾಗುವ ಹಾಗೂ ಚುನಾಯಿತ ಪ್ರತಿನಿಧಿಗಳ ಹಕ್ಕು ಮೊಟಕುಗೊಳಿಸುವ ಮತ್ತು ಕಿರುಕುಳವಾಗುವ ಸಾಧ್ಯತೆ ಹೆಚ್ಚಿವೆ ಎಂದು ಗ್ರಾಪಂ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.

    ದುರ್ನಡತೆ ಎಂದರೇನು?: ದುರ್ನಡತೆ ಎಂದರೇನು ಎಂಬುದನ್ನು ಕರಡಿನಲ್ಲಿ ಸ್ಪಷ್ಟಪಡಿಸಿಲ್ಲ. ಆ ಬಗ್ಗೆ ಸ್ಪಷ್ಟ ವ್ಯಾಖ್ಯಾನವೂ ಇಲ್ಲ. ಯಾವ್ಯಾವುದು ದುರ್ನಡತೆ? ತಲೆ ತಗ್ಗಿಸುವ ನಡತೆ ಅಡಿ ಬರುವ ನಡತೆಗಳಾವುವು? ಎಂಬುದನ್ನು ನಿಖರವಾಗಿ ಹೇಳಿಲ್ಲ. ಇದನ್ನು ಸ್ಪಷ್ಟಪಡಿಸದೇ ಹೋದರೆ ದೂರುದಾರರು ಹಾಗೂ ತನಿಖಾಧಿಕಾರಿಗಳು ದುರ್ನಡತೆ ಹಾಗೂ ತಲೆ ತಗ್ಗಿಸುವ ನಡತೆಗಳನ್ನು ತಮಗೆ ತೋಚಿದಂತೆ ವ್ಯಾಖ್ಯಾನಿಸುವ ಸಾಧ್ಯತೆಗಳಿವೆ. ಈ ಕಾರಣ ಗ್ರಾಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಬೆದರಿಸಲು ಅವಕಾಶವಾಗುತ್ತದೆ.

    ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ವಜಾ ಮಾಡುವ ಪ್ರಕ್ರಿಯೆ ನಿಯಮ 2022 ಕರಡು ಅಧಿಸೂಚನೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಈ ಕರಡಿಗೆ ಸಲ್ಲಿಕೆಯಾಗುವ ಆಕ್ಷೇಪಣೆ/ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸಿ ಲೋಪ ಸರಿಪಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ.

    | ಸತೀಶ್ ಕಾಡಶೆಟ್ಟಹಳ್ಳಿ ಅಧ್ಯಕ್ಷ, ಕರ್ನಾಟಕ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ

    ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ!: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 12 (ಎಲ್)ಗೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಅಧಿಕಾರ ರಾಜ್ಯ ಚುನಾವಣಾ ಆಯೋಗದ್ದಾಗಿದೆಯೇ ಹೊರತು ರಾಜ್ಯ ಸರ್ಕಾರದ ಅಧಿಕಾರವಿರುವುದಿಲ್ಲ ಎಂದು ರಾಜ್ಯ ಉಚ್ಚ ನ್ಯಾಯಾಲಯ ಈಗಾಗಲೆ ಸ್ಪಷ್ಪಪಡಿಸಿದೆ. ಆದರೆ, ಈ 12(ಎಲ್) ಉಲ್ಲೇಖಿಸುವ ಮೂಲಕ ಕರಡಿನಲ್ಲಿ ಗೊಂದಲ ಸೃಷ್ಟಿಸಲಾಗಿದೆ.

    ವಿಚಾರಣೆ ಯಾರ ಕೈಗೆ?: ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆ ನಿಯಮ 5(1)ರಲ್ಲಿ ಸರ್ಕಾರ ವಿಚಾರಣೆ ನಡೆಸಲು ಪಂಚಾಯತ್ ರಾಜ್ ಆಯುಕ್ತರು ಅಥವಾ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರು ಅಥವಾ ಕುಂದುಕೊರತೆ ನಿರ್ವಹಣಾ ಪ್ರಾಧಿಕಾರಕ್ಕೆ ವಹಿಸತಕ್ಕದ್ದು ಎಂದಿದೆ. ಆದರೆ, ನಿಯಮ 3(1) ರಲ್ಲಿ ಸರ್ಕಾರ ಅಥವಾ ಪ್ರಾದೇಶಿಕ ಆಯುಕ್ತರು ಅಥವಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ದೂರುಸ್ವೀಕರಿಸುವವರು ಎಂದು ವಿವರಿಸಲಾಗಿದೆ. ಆದರೆ, ನಿಯಮ 3(2)ರಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ನೇರವಾಗಿ ಸ್ವೀಕರಿಸಿದ ದೂರನ್ನಾಗಲಿ ಅಥವಾ ಉಪ ನಿಯಮ(1)ರಡಿ ಸ್ವೀಕರಿಸಿದ ದೂರನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ದುರ್ನಡತೆ ಕುರಿತು ದೂರು ಇದ್ದಲ್ಲಿ ಮತ್ತು ಹಣಕಾಸಿನ ದುರುಪಯೋಗದ ಕುರಿತು ದೂರುಗಳಿದ್ದಲ್ಲಿ ತಾಲೂಕು ಪಂಚಾಯಿತಿಯ ಸಹಾಯಕ ಲೆಕ್ಕಾಧಿಕಾರಿಯೊಂದಿಗೆ ತನಿಖೆ ಕೈಗೊಳ್ಳತಕ್ಕದ್ದು ಎಂದಿದೆ. ಇಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ನೇರವಾಗಿ ಸ್ವೀಕರಿಸಿದ ದೂರನ್ನಾಗಲಿ ಎಂದು ಹೇಳುವ ಮೂಲಕ ಅವರಿಗೂ ದೂರು ಸ್ವೀಕರಿಸುವ ಅಧಿಕಾರ ನೀಡಲಾಗಿದೆ. ಹೀಗೆ ದೂರು ಸ್ವೀಕರಿಸುವುವರು, ತನಿಖೆ ನಡೆಸುವವರು ಮತ್ತು ವಿಚಾರಣೆ ನಡೆಸುವವರಲ್ಲಿ ಗೊಂದಲ ಸೃಷ್ಟಿಸಲಾಗಿದೆ.

    ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts