More

    ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಭರದ ಸಿದ್ಧತೆ

    ನ್ಯಾಮತಿ: ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರದ ಸುವರ್ಣ ಮಹೋತ್ಸವವನ್ನು ಎಲ್ಲ ಭಕ್ತರ ಸಹಕಾರದಿಂದ ಐತಿಹಾಸಿಕವಾಗಿಸಲು ಭರದ ಸಿದ್ಧತೆ ಸಾಗಿವೆ ಎಂದು ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಅಮಾವಾಸ್ಯೆ ಪ್ರಯುಕ್ತ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಮತ್ತು ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

    ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಜು 1. 1972ರಂದು ಪಟ್ಟಾಧಿಕಾರ ಸ್ವೀಕರಿಸಿದ ನಂತರ ಮಠದಲ್ಲಿ ಎಲ್‌ಕೆಜಿಯಿಂದ ಪಿಯುಸಿ, ಡಿಗ್ರಿ, ಐಟಿಐ, ಬಿಇಡಿ, ಸಂಸ್ಕೃತ ಶಾಲಾ ಕಾಲೇಜು ಪ್ರಾರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಿ ಈ ಭಾಗದ ನಡೆದಾಡುವ ದೇವರೆಂದೇ ಖ್ಯಾತಿ ಗಳಿಸಿದ್ದರು. ಜತೆಗೆ ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಅದೆಷ್ಟೋ ಪ್ರಕರಣಗಳನ್ನು ರಾಜಿ ಪಂಚಾಯಿತಿ ಮೂಲಕ ಬಗೆಹರಿಸಿ ಮಾದರಿ ಎನಿಸಿದ್ದರು ಎಂದು ಬಣ್ಣಿಸಿದರು.

    ಅವರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ಪ್ರಯುಕ್ತ ಅವರ ಹೆಸರನ್ನು ಯೋಜನೆಗಳ ಮೂಲಕ ಶಾಶ್ವತವಾಗಿರಿಸುವ ನಿಟ್ಟಿನಲ್ಲಿ 2023ರ ನ.14 ರಿಂದ ಡಿಸೆಂಬರ್ 11 ರವರೆಗೆ ಕೋಟಿ ದೀಪೋತ್ಸವ, ಕೋಟಿ ಬಿಲ್ವಾರ್ಚನೆ, ಕೋಟಿ ಕ್ಷೀರಾಭಿಷೇಕ, 100 ಹಾಸಿಗೆಗಳ ಆಸ್ಪತ್ರೆ, ನರ್ಸಿಂಗ್, ಫಾರ್ಮಸಿ, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲಾ-ಕಾಲೇಜು ಪ್ರಾರಂಭಿಸಲಾಗುವುದು. ಅಲ್ಲದೆ, 5 ಗೋವುಗಳನ್ನು ತಂದು ವಿದೇಶಿ ತಳಿಗಳ ಪರಿಚಯ ಮಾಡುವ ಜೊತೆಗೆ ಗೋ-ಸಂವರ್ಧನಾ ಕೇಂದ್ರ ತೆರೆಯಲಾಗುವುದು. ಈ ಎಲ್ಲ ಯೋಜನೆಗಳ ನೀಲಿನಕಾಶೆ ಸಿದ್ಧಗೊಂಡಿದ್ದು ಪುರಸಭಾ ಸದಸ್ಯ ಹೊಸಕೇರಿ ಸುರೇಶ್ ನೇತೃತ್ವದ ತಂಡ ಅವಳಿ ತಾಲೂಕಿನ ಹಳ್ಳಿಗಳಿಗೆ ತೆರಳಿ ಭಕ್ತರಿಗೆ ಮಾಹಿತಿ ನೀಡುವರು ಎಂದರು.

    ಪುರಸಭಾ ಸದಸ್ಯ ಹೊಸಕೇರಿ ಸುರೇಶ್ ಮಾತನಾಡಿ, ಪ್ರತಿ ಅಮಾವಾಸ್ಯೆಯಂದು ಹಿರೇಕಲ್ಮಠದಲ್ಲಿ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಉಳಿಸಿ-ಬೆಳೆಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಕರೆತರಬೇಕು ಎಂದು ವಿನಂತಿಸಿದರು.

    ಚಿಕ್ಕಕಬ್ಬಾರ್ ದಯಾನಂದಸ್ವಾಮಿ ಉಪನ್ಯಾಸ ನೀಡಿದರು. ಮಠದ ವ್ಯವಸ್ಥಾಪಕ ಎಂ.ಪಿ.ಎಂ. ಚನ್ನಬಸಯ್ಯ, ಪ್ರಧಾನ ಅರ್ಚಕ ಅನ್ನದಾನಯ್ಯ ಶಾಸ್ತ್ರಿ, ಶಿವಲಿಂಗಾರಾಧ್ಯ ಶಾಸ್ತ್ರಿ, ಕೋರಿ ಗುರುಲಿಂಗಣ್ಣ, ಕುಮಾರಸ್ವಾಮಿ, ರೆಡ್ಡಿ ಇದ್ದರು.

    ಅಭಿನೇತ್ರಿ ಡ್ಯಾನ್ಸ್ ಮತ್ತು ಮ್ಯೂಸಿಕಲ್ ಅಕಾಡೆಮಿ ಮತ್ತು ಚನ್ನೇಶ್ವರ ಗಾನ ಕಲಾ ಬಳಗದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts