More

    ಐತಿಹಾಸಿಕ ಶಾಲೆಗಿಲ್ಲ ಇಂಗ್ಲಿಷ್ ಕಲಿಕೆ ಭಾಗ್ಯ

    ಹಟ್ಟಿಚಿನ್ನದಗಣಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಇಂಗ್ಲಿಷ್ ಕಲಿಯಲಿ ಎಂಬ ಉದ್ದೇಶದಿಂದ 4-5 ವರ್ಷಗಳ ಹಿಂದೆ ಪಬ್ಲಿಕ್ ಶಾಲೆ ಪ್ರಾರಂಭಿಸಿದೆ. ಆದರೆ ಹಟ್ಟಿ ಭಾಗದಲ್ಲಿ ಇಂಗ್ಲಿಷ್ ಶಾಲೆಯಂತೂ ಮೊದಲ ಹಂತದಲ್ಲಿ ಮಂಜೂರಾಗಲಿಲ್ಲ. ಇನ್ನು ಮುಂದೆಯಾದರೂ ಮಂಜೂರು ಮಾಡುವುದೋ ಅಥವಾ ಇಲ್ಲವೊ ಎನ್ನುವುದು ಪ್ರಜ್ಞಾವಂತರಲ್ಲಿ ಪ್ರಶ್ನೆ ಮೂಡಿದೆ.


    ಹಟ್ಟಿಚಿನ್ನದಗಣಿ ಕಂಪನಿ ಪ್ರದೇಶದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಹಳೆ ಪಂಚಾಯಿತಿ ಹತ್ತಿರವಿರುವ ಆರ್ಧ ಶತಮಾನದಿಂದ ನಡೆದುಕೊಂಡು ಬಂದ ಸರ್ಕಾರಿ ಶಾಲೆ ಸೇರಿದಂತೆ ನೂತನ ಸಂಸದ ರಾಜಾ ಅಮರೇಶ್ವರ ನಾಯಕರ ಸ್ವ-ಗ್ರಾಮ ಗುರುಗುಂಟಾ ಸೇರಿ ವಿವಿಧೆಡೆ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಪಬ್ಲಿಕ್ ಶಾಲೆಗೆ ಮಾನ್ಯತೆ ನೀಡದಿರುವುದು ವಿದ್ಯಾರ್ಥಿ-ಪಾಲಕರು ಸೇರಿದಂತೆ ಶಿಕ್ಷಣ ಪ್ರೇಮಿಗಳಲ್ಲಿ ತೀವ್ರ ನಿರಾಸೆ ತಂದಿದೆ.


    ಲಿಂಗಸುಗೂರು ತಾಲೂಕಿನ ಸರ್ಜಾಪೂರ, ಕಸಬಾ ಲಿಂಗಸುಗೂರು, ಖೈರವಾಡಗಿ, ಫೂಲಭಾವಿ, ಕೋಠಾದಲ್ಲಿ ಈ ಪಬ್ಲಿಕ್ ಶಾಲೆಗಳು ಮಂಜೂರಾಗಿವೆ. ಸ್ವಾತಂತ್ರ್ಯ ಪೂರ‌್ವದಲ್ಲೆ ಪಟ್ಟಣದ ಹಳೆಯ ಪಂಚಾಯಿತಿ ಹತ್ತಿರದ ಶಾಲೆ 1941ರಲ್ಲೆ ಆರಂಭವಾಗಿದೆ. ಇನ್ನು ಗಣಿ ಕಂಪನಿಯ ಅಧಿಸೂಚಿತ ಪ್ರದೇಶದಲ್ಲಿರುವ ಕ್ಯಾಂಪಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆ 1959ರಲ್ಲಿ ಪ್ರಾರಂಭವಾಗಿದೆ. ಇನ್ನು ಒಂದು ಕಾಲದಲ್ಲಿ ಸಂಸ್ಥಾನ ರಾಜ ಮನೆತನಗಳಾಗಿದ್ದ ಗೌಡೂರು, ಗುರುಗುಂಟಾ, ಗುಂತಗೋಳ ಗ್ರಾಮಗಳಲ್ಲಿ ಆರಂಭವಾದ ಸರ್ಕಾರಿ ಶಾಲೆಗಳು ಅರ್ಧಶತಮಾನಕ್ಕಿಂತ ಹೆಚ್ಚಿನ ಇತಿಹಾಸ ಹೊಂದಿವೆ. ಈ ಹಿಂದೆ 2 ಬಾರಿ ಸಚಿವರಾಗಿ ಪ್ರಸ್ತುತ ಸಂಸದರಾಗಿರುವ ರಾಜಾ ಅಮರೇಶ್ವರ ನಾಯಕರ ಸಂಸ್ಥಾನದ ಒಂದು ಗ್ರಾಮಕ್ಕೆ ಸಹ ಇಲಾಖೆ ಮಾನ್ಯತೆ ನೀಡದಿರುವುದು ವಿಪರ‌್ಯಾಸವೆ ಸರಿ.


    ಪಟ್ಟಣವು ಜಿಲ್ಲೆಯಲ್ಲಿಯೇ ಜನಸಂಖ್ಯೆಯಲ್ಲಿ 4ನೇ ಸ್ಥಾನಹೊಂದಿದೆ. ಸುಮಾರು ಆಂಗ್ಲಮಾಧ್ಯಮ ಶಾಲೆಗಳು, ಕೆಲವು ಕನ್ನಡ ಮಾಧ್ಯಮದ ಅನುಮತಿ ಪಡೆದು ಇಂಗ್ಲಿಷ್ ಬೋಧಿಸುತ್ತಿರುವ ಹಾಗೂ ಕೆಲ ಶಾಲೆಗಳು ಸರ್ಕಾರಿ ಪಠ್ಯಪುಸ್ತಕವನ್ನು ಹೊರತುಪಡಿಸಿ ತಮ್ಮದೆ ಆದ ಪುಸ್ತಕವನ್ನು ಬೋಧಿಸುತ್ತಿರುವ ಪ್ರಭಾವಿ ಸಂಸ್ಥೆಗಳಿವೆ. ಹಿಂದೊಂದು ದಿನ ಹಟ್ಟಿಚಿನ್ನದಗಣಿ ಕಂಪನಿ ಆಡಳಿತ ವರ್ಗ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಕೇಂದ್ರಿಯ ವಿದ್ಯಾಲಯ ಶಾಲೆ ಪ್ರಾರಂಭಿಸಲು ಹೋದರೆ ಕೇಂದ್ರ ಸರ್ಕಾರದವರೆಗೆ ಸ್ಥಳೀಯ ಖಾಸಗಿ ಸಂಸ್ಥೆಯವರು ಪ್ರಭಾವ ಬೀರಿ 4 ವರ್ಷ ಕೇಂದ್ರಿಯ ವಿದ್ಯಾಲಯ ಶಾಲೆ ಪ್ರಾರಂಭವಾಗದಂತೆ ನೋಡಿಕೊಂಡಿದ್ದರು. ಈಗ ಹಟ್ಟಿ ಪಟ್ಟಣದಲ್ಲಿ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಬೋಧಿಸಲು ಖಾಸಗಿಯವರು ಏನಾದರೂ ಅಡ್ಡಿ ಪಡಿಸಿದ್ದಾರೆಯೇ ಅಥವಾ ಖಾಸಗಿಯವರಿಗೆ ಹೆದರಿ ಅಥವಾ ಅವರ ಪ್ರಭಾವಕ್ಕೆ ಮಣಿದು ಹಟ್ಟಿಗೆ ಆಂಗ್ಲ ಸರ್ಕಾರಿ ಶಾಲೆಯನ್ನು ಮಂಜೂರು ಮಾಡಿಸಲಿಲ್ಲವೆ ಎಂದು ಸಾರ್ವಜನಿಕರಾದ ಯಮುನಪ್ಪ ನಾಯಕ್, ವಿಘ್ನೇಶ ನಾಯಕ, ಸುನೀಲ್ ಕುಮಾರ ಪ್ರಶ್ನಿಸುತ್ತಾರೆ.


    ಈ ಹಿಂದೆ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಬೋಧಿಸಲಾಗುತ್ತಿತ್ತು. ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲು ಖಾಸಗಿ ಆಂಗ್ಲಮಾಧ್ಯಮವನ್ನು ಬೋಧಿಸುವ ಶಾಲೆಗಳಿರಲಿಲ್ಲ, ನಂತರದ ದಿನಗಳಲ್ಲಿ ಖಾಸಗಿ ಪ್ರೌಢಶಾಲೆ ಪ್ರಾರಂಭವಾದ ನಂತರ ಸರ್ಕಾರಿ ಶಾಲೆಗಳು ಗುಣಮಟ್ಟವನ್ನು ಕಳೆದುಕೊಂಡ ನಂತರ ಪಟ್ಟಣದಲ್ಲಿರುವ ಆಂಗ್ಲ ಸರ್ಕಾರಿ ಶಾಲೆ ವಿಭಾಗವನ್ನೆ ಮುಚ್ಚಲಾಯ್ತು. ರಜತ ಹಾಗೂ ವಜ್ರಮಹೋತ್ಸವ ಪೂರೈಸಿರುವ ಹಟ್ಟಿ ಭಾಗದಲ್ಲಿರುವ ಶಾಲೆಗಳಿಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಪ್ರಾರಂಭಿಸುವಂತೆ ಪುನಃ ಪ್ರಸ್ತಾವನೆ ಸಲ್ಲಿಸಿ ತರಗತಿಗಳನ್ನು ಪ್ರಾರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದೆಂದು ಶ್ರೀನಿವಾಸ, ಮೌನೇಶ ಕಾಕಾನಗರ, ಸೇರಿದಂತೆ ಇತರರು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts