More

    ಶ್ರೀರಂಗಪಟ್ಟಣದಲ್ಲಿ ಚಿಕ್ಕತೇರು ಬ್ರಹ್ಮರಥೋತ್ಸವ

    ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀರಂಗನಾಥ ಸ್ವಾಮಿಯ ಚಿಕ್ಕತೇರು ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

    ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರು ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಪಂಚಲೋಹದ ಶ್ರೀರಂಗನಾಥಸ್ವಾಮಿ ಮೂರ್ತಿಗೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಉಮಾ ಅವರ ಸಮ್ಮುಖದಲ್ಲಿ ಪ್ರಧಾನ ಅರ್ಚಕರಾದ ಪ್ರಸನ್ನ ಹಾಗೂ ವಿಜಯಸಾರಥಿ ಅವರ ನೇತೃತ್ವದ ವೈದಿಕರ ತಂಡ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿತು. ನಂತರ ವಿಷ್ಣು ಸಹಸ್ರನಾಮ ಪಠಣದೊಂದಿಗೆ ವಿಶೇಷ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಬಳಿಕ ಹೋಮ, ಬಲಿಪ್ರದಾನ, ಯಾತ್ರದಾನಗಳೊಂದಿಗೆ ದೇವಾಲಯದ ಹೊರಭಾಗದ ಸುತ್ತಲು ಶ್ರೀದೇವರ ಮೂರ್ತಿಗಳನ್ನು ಚಿಕ್ಕತೇರಿನಲ್ಲಿ ಪ್ರತಿಷ್ಠಾಪಿಸಿ ಭವ್ಯ ಬ್ರಹ್ಮೋತ್ಸವವನ್ನು ಶ್ರೀರಂಗಪಟ್ಟಣದ ಪುರಜನರು ಹಾಗೂ ಕೆಲವೇ ಭಕ್ತರೊಂದಿಗೆ ದೇವಾಲಯದ ಸುತ್ತಲು ಸಂಭ್ರಮದಿಂದ ಎಳೆದು ಸಂಪನ್ನಗೊಳಿಸಲಾಯಿತು.
    ಕನು ಹಬ್ಬದ ಸಂಕೇತ: ಶ್ರೀ ಆದಿರಂಗನಾಥಸ್ವಾಮಿಗೆ ಉತ್ತರಾಯಣ ಸಮಯದಲ್ಲಿ ವಿಶೇಷವಾಗಿ ಎರಡು ಬ್ರಹ್ಮರಥೋತ್ಸವವನ್ನು ನೆರವೇರಿಸಲಾಗುತ್ತದೆ. ರಥಸಪ್ತಮಿಯ ಬ್ರಹ್ಮರಥೋತ್ಸವಕ್ಕೂ ಮುನ್ನ ಕನು ಹಬ್ಬದ ಸಂಕೇತವಾಗಿ ಚಿಕ್ಕತೇರಿನ ರಥೋತ್ಸವ ನೆರವೇರಿಸುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಮಕರ ಸಂಕ್ರಮಣ ಕಳೆದ ಮಾರನೇಯ ದಿನವನ್ನು ಕನು(ಗೋವು)ಗಳ ಪೂಜಿಸುವ ಹಬ್ಬವಾಗಿ ನಾಡಿನ ಜನರು ಆಚರಿಸಿ ಅವುಗಳ ಪ್ರಸಾದ ಪ್ರಿಯವಾಗಿ ಕೆಂಪು ಅನ್ನ, ಹಳದಿ ಅನ್ನ ಹಾಗೂ ಬಿಳಿ ಅನ್ನವನ್ನು ಸಮರ್ಪಿಸಿ ಸವಿಯಲಾಗುವುದು. ಇಂತಹ ವಿಶೇಷತೆಯ ಸಮಯದಲ್ಲಿ ಮಹಾವಿಷ್ಣುವಿನ ಅನುಗ್ರಹ ದೊರಕಲು ಶ್ರೀರಂಗನ ಸ್ಮರಣೆ ಮಾಡಿ ಈ ಆಚರಣೆಯನ್ನು ಸಂಪ್ರದಾಯ ಪೂಜೆಗಳೊಂದಿಗೆ ಅನೂಚಾನವಾಗಿ ನಡೆಸಿಕೊಂಡು ಬರಲಾಗಿದೆ.

    ಜ.19ರವರೆಗೆ ವೈಕುಂಠ ದ್ವಾರ ಪ್ರವೇಶ: ಮಕರ ಸಂಕ್ರಾಂತಿ ಪ್ರಯುಕ್ತ ವರ್ಷಕ್ಕೊಮ್ಮೆ ತೆರೆಯುವ ವೈಕುಂಠ ದ್ವಾರದ ಪ್ರವೇಶಕ್ಕೆ ಭಕ್ತರು ಹಾಗೂ ಸಾರ್ವಜನಿಕರಿಗಾಗಿ ಜ.19ರವರೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ಆಡಳಿತ ಅವಕಾಶ ಕಲ್ಪಿಸಿದ್ದು, ಶ್ರೀರಂಗನಾಥಸ್ವಾಮಿಯ ಮೂಲ ದೇವರ ದರ್ಶನ ಪಡೆದು ಸ್ವರ್ಗದ ಬಾಗಿಲಲ್ಲಿ ನಿಂತು ನಾರಾಯಣನನ್ನು ಪ್ರಾರ್ಥಿಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts