More

    ನರ್ಮ್ ನಿಲ್ದಾಣ ಸ್ವಚ್ಛತೆಯಿಂದ ದೂರ

     ಉಡುಪಿ: ನಗರದಲ್ಲಿ ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಲಾದ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ನಗರ ಸಾರಿಗೆ (ನರ್ಮ್) ನಿಲ್ದಾಣ ಸ್ವಚ್ಛ ಉಡುಪಿ ಖ್ಯಾತಿಗೆ ಕಪ್ಪುಚುಕ್ಕೆಯಂತಿದೆ.

    ವಲಸೆ ಕಾರ್ಮಿಕರು, ನಿಗರ್ತಿಕರು ಗುಟ್ಖಾ ತಿಂದು ಅಲ್ಲಲ್ಲಿ ಉಗಿದು ಹೊಸ ಬಸ್ ನಿಲ್ದಾಣದ ಅಂದ ಕೆಡಿಸಿದ್ದಾರೆ. ಎಲ್ಲೆಂದರಲ್ಲಿ ಕಸ ತ್ಯಾಜ್ಯ ರಾಶಿ ಬಿದ್ದುಕೊಂಡಿದ್ದು, ಪರಿಸರ ದುರ್ನಾತ ಬೀರುತ್ತಿದೆ. ರಾತ್ರಿ ಸಂದರ್ಭ ಜನ ಈ ರಸ್ತೆಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ.

    ನರ್ಮ್ ಬಸ್ ನಿಲ್ದಾಣ ಪ್ರಯಾಣಿಕರಿಗಿಂತ ನಿರ್ಗತಿಕರಿಗೆ, ಕುಡುಕರಿಗೆ ಆಶ್ರಯ ತಾಣವೆಂಬಂತಾಗಿದೆ. ಇಲ್ಲಿ ಆಗಾಗ್ಗೆ ಮದ್ಯ ಸೇವಿಸಿ ಗಲಾಟೆ ಮಾಡುತ್ತಿರುವ ದೃಶ್ಯಗಳೂ ಸಾಮಾನ್ಯ. ನಿಲ್ದಾಣದ ವಠಾರ ಬಯಲು ಶೌಚವಾಗಿದೆ. ಪ್ರಸ್ತುತ ನಿಲ್ದಾಣದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವಿಲ್ಲದೆ ಕಾರ್ಮಿಕರು ಗುಂಪು ಸೇರಿಕೊಂಡು ಕೋವಿಡ್ ನಿಯಮಾವಳಿ ಉಲ್ಲಂಘಿಸುತ್ತಿದ್ದಾರೆ. ಅಂತರ ಕಾಪಾಡದೆ ನೂರಾರು ಸಂಖ್ಯೆಯಲ್ಲಿ ಸೇರುವ ಈ ಪ್ರದೇಶದಲ್ಲಿ ಕರೊನಾ ರೋಗ ಹರಡುವ ಸಾಧ್ಯತೆಯೂ ಹೆಚ್ಚಿದೆ. ಈ ಬಗ್ಗೆ ಸ್ಥಳೀಯಾಡಳಿತ ಗಮನ ಹರಿಸಬೇಕು ಎನ್ನುತ್ತಾರೆ ಸ್ಥಳೀಯರು.

    ಭದ್ರತಾ ಸಿಬ್ಬಂದಿ ನೇಮಿಸಲು ಆಗ್ರಹ: ಜಿಲ್ಲೆಯಲ್ಲಿ ನರ್ಮ್ ಬಸ್‌ಗಳು 2016ರಲ್ಲಿ ಆರಂಭವಾಗಿದ್ದು, 4 ಕೋಟಿ ರೂ. ವೆಚ್ಚದ ಈ ನರ್ಮ್ ಬಸ್ ನಿಲ್ದಾಣ 2019ರ ಕೊನೆಗೆ ಪೂರ್ಣಗೊಂಡಿದೆ. ಕೋವಿಡ್ ಲಾಕ್‌ಡೌನ್‌ನಿಂದ ಉದ್ಘಾಟನೆಯಾಗಿಲ್ಲ. ಶೀಘ್ರದಲ್ಲಿ ವಾಚ್‌ಮ್ಯಾನ್ ನೇಮಕ ಮಾಡದೆ ಇದ್ದರೆ ಮುಂದಿನ ದಿನಗಳಲ್ಲಿ ಇಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಶ್ರಯವಾಗುವ ಸಾಧ್ಯತೆ ಹೆಚ್ಚಿವೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನರ್ಮ್ ಬಸ್ ನಿಲ್ದಾಣದ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

    ನೂತನ ಬಸ್ ನಿಲ್ದಾಣ ಸ್ಥಿತಿ ನೋಡಲಾಗುತ್ತಿಲ್ಲ. ಶುಚಿತ್ವ ಸಂಪೂರ್ಣ ಮರೆಯಾಗಿದೆ. ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಗುಂಪು ಸೇರುತ್ತಾರೆ. ಅವರೆಲ್ಲರೂ ಮಾಸ್ಕ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ನಿಲ್ದಾಣದ ವಠಾರ ಬಯಲು ಶೌಚಗೃಹವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

    – ತಾರಾನಾಥ್, ಸಾಮಾಜಿಕ ಕಾರ್ಯಕರ್ತ

    ನಿಲ್ದಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಈಗಾಗಲೆ ಹಲವು ಭಾರಿ ಸ್ವಚ್ಛಗೊಳಿಸಲಾಗಿದೆ. ನಿರ್ಗತಿಕರು, ಕಾರ್ಮಿಕರನ್ನು ಬಸ್ ನಿಲ್ದಾಣದೊಳಗೆ ನಿಯಂತ್ರಿಸಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ನಿಲ್ದಾಣದಲ್ಲಿ ನಿಗಾ ವಹಿಸಲು ಸಿಬ್ಬಂದಿ ನೇಮಿಸಲಾಗಿದ್ದರೂ ಪರಿಸ್ಥಿತಿ ನಿಭಾಯಿಸುವುದು ಸವಾಲಾಗಿದೆ.

    – ಉದಯ ಶೆಟ್ಟಿ, ವ್ಯವಸ್ಥಾಪಕರು ಕೆಎಸ್ಸಾರ್ಟಿಸಿ ಉಡುಪಿ ಡಿಪೊ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts