More

    ಪಾರ್ಕಿಂಗ್ ನೀತಿ ಅನುಷ್ಠಾನದ ವಿಸ್ತೃತ ಯೋಜನಾ ವರದಿ ಸಲ್ಲಿಸಿ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

    ಬೆಂಗಳೂರು : ರಾಜಧಾನಿಯ ಮಹಾನಗರಗಳಲ್ಲಿ ವಾಹನ ನಿಲುಗಡೆ ನೀತಿ 2.0 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬಿಬಿಎಂಪಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ, ಯಾವ ರೀತಿ ಪಾರ್ಕಿಂಗ್ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂಬ ವಿಧಾನದ ಬಗ್ಗೆ ವಿಸ್ತೃತವಾದ ಯೋಜನಾ ವರದಿಯನ್ನು ಜೂ.20ರೊಳಗೆ ಬಿಬಿಎಂಪಿ ಆಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.

    ವಸತಿ ಪ್ರದೇಶದಲ್ಲಿ ಅಕ್ರಮವಾಗಿ ವಾಹನ ನಿಲುಗಡೆ ಪ್ಲಾಟ್ ನಡೆಸುತ್ತಿರುವುದರನ್ನು ಪ್ರಶ್ನಿಸಿ ನಗರದ ಎಚ್.ಎಸ್.ಆರ್. ಬಡಾವಣೆಯ ನಾಗಭೂಷಣರೆಡ್ಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.

    ಈ ವೇಳೆ ಅರ್ಜಿದಾರರ ಪರ ವಕೀಲರು, ಎಚ್‌ಎಸ್‌ಆರ್ ಬಡಾವಣೆಯ 19ನೇ ಎ ಮುಖ್ಯರಸ್ತೆಯಲ್ಲಿ 20 ಪ್ಲಾಟ್‌ಗಳಿದ್ದು, ಅಲ್ಲಿ ಪ್ಲಾಟ್ ಮಾಲೀಕರು ವಾಸ ಮಾಡುತ್ತಿದ್ದಾರೆ. ಅದೇ ರಸ್ತೆಯಲ್ಲಿ ನಾಲ್ಕು ನಿವೇಶನಗಳು ಖಾಲಿ ಇವೆ. ನಾಗೇಂದ್ರ ಎಂಬುವರಿಗೆ ಸೇರಿದ ಪ್ಲಾಟ್ ನಂಬರ್ 4 ಅನ್ನು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆ ಉದ್ದೇಶಕ್ಕೆ ಗುತ್ತಿಗೆ ನೀಡಲಾಗಿದೆ ಎಂದರು.

    ಜತೆಗೆ ಆ ರೀತಿ ವಸತಿ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಿರುವುದರಿಂದ ಶಬ್ದ ಹಾಗೂ ವಾಯುಮಾಲಿನ್ಯ ಹೆಚ್ಚಾಗುವ ಸಾಧ್ಯತೆಯಿದೆ, ಮಾತ್ರವಲ್ಲದೆ ರಸ್ತೆಯಲ್ಲಿ ವಾಹನಗಳ ನಿಲುಗಡೆ ಸಮಸ್ಯೆಯೂ ಎದುರಾಗಿದೆ. ಅಲ್ಲಿ ನಿಲ್ಲಿಸುವ ವಾಹನಗಳು ಕೆಲವೊಮ್ಮೆ ಹಗಲು ರಾತ್ರಿ ಅಲ್ಲೇ ಇರುತ್ತವೆ, ಇದರಿಂದ ಸುತ್ತಮುತ್ತಲ ವಾಸಿಸುವ ಜನರಿಗೆ ತೀವ್ರ ತೊಂದರೆ ಎದುರಾಗುತ್ತಿದೆ ಎಂದು ಅವರು ನ್ಯಾಯಪೀಠಕ್ಕೆ ವಿವರಿಸಿದರು.

    ಮುಂದುವರಿದು, ಆ ರೀತಿ ವಸತಿ ಪ್ರದೇಶದ ನಿವೇಶನವನ್ನು ವಾಹನ ನಿಲುಗಡೆ ಉದ್ದೇಶಕ್ಕೆ ಬಳಸಲು ನಿಯಮದಲ್ಲಿ ಅವಕಾಶವಿಲ್ಲ. ಜತೆಗೆ ಆ ರೀತಿ ಮೂರನೇ ವ್ಯಕ್ತಿಗೆ ಗುತ್ತಿಗೆ ನೀಡಲೂ ಸಹ ಅವಕಾಶವಿಲ್ಲ. ಹಾಗಾಗಿ ಅಕ್ರಮ ಪಾರ್ಕಿಂಗ್ ನಿಲುಗಡೆ ಪ್ಲಾಟ್ ಬಗ್ಗೆ ಕ್ರಮ ಕೈಗೊಳ್ಳುವಂತೆ 2023ರ ಜು.27ರಂದೇ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ಏನೂ ಪ್ರಯೋಜನವಾಗಿಲ್ಲ ಎಂದರು.

    ಆದರೆ ಪಾಲಿಕೆ ಪರ ವಕೀಲರು, ಪ್ರತಿವಾದಿಗಳಿಗೆ ವಸತಿ ಪ್ರದೇಶದ ನಿವೇಶನವನ್ನು ವಾಹನ ನಿಲುಗಡೆ ಉದ್ದೇಶಕ್ಕೆ ಬಳಕೆ ಮಾಡಲು ಬಿಬಿಎಂಪಿ ಯಾವುದೇ ಅನುಮತಿ ನೀಡಿಲ್ಲ. ನಗರ ಭೂ ಸಾರಿಗೆ ನಿರ್ದೇಶನಾಲಯ ಪಾರ್ಕಿಂಗ್ ನೀತಿ 2.0 ಅನ್ನು 2020ರ ಡಿ ಜಾರಿಗೊಳಿಸಿದ್ದು, ಅದರಂತೆ ವಾಹನ ನಿಲುಗಡೆ ಪ್ರದೇಶ ಗುರುತಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

    ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಪಾರ್ಕಿಂಗ್ ನೀತಿ 2.0, 2020ರ ಡಿ ನಿಂದಲೂ ಚಾಲ್ತಿಯಲ್ಲಿದೆ, ಅದರಂತೆ ಬಿಬಿಎಂಪಿ ವಾಹನ ನಿಲುಗಡೆ ಪ್ರದೇಶ, ವಾಹನ ನಿಲುಗಡೆ ಶುಲ್ಕ, ಬೀದಿ ಬದಿ ಪಾರ್ಕಿಂಗ್ ವ್ಯವಸ್ಥೆ ಉತ್ತಮಗೊಳಿಸುವುದು, ಪೈಲಟ್ ಪರ್ಮಿಟ್ ವ್ಯವಸ್ಥೆ ಆರಂಭಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಬಿಬಿಎಂಪಿ ಇದುವರೆಗೂ ಈ ಬಗ್ಗೆ ಯಾವುದೇ ಕೆಲಸವನ್ನು ಮಾಡಿಲ್ಲ .ಬಿಬಿಎಂಪಿ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದ ನಿಷ್ಕ್ರೀಯತೆಯಿಂದಾಗಿ ಸಾರ್ವಜನಿಕರು ಅನಗತ್ಯ ತೊಂದರೆ ಎದುರಿಸುವಂತಾಗಿದೆ ಮತ್ತು ಪ್ರಸಕ್ತ ಪ್ರಕರಣದಲ್ಲಿ ಅರ್ಜಿದಾರರೂ ಸಹ ಅಂತಹ ಸಮಸ್ಯೆ ಎದುರಿಸುತ್ತಿದ್ದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದೆ

    ಮುಂದುವರಿದು, ಯಾವ ರೀತಿ ಪಾರ್ಕಿಂಗ್ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂಬ ವಿಧಾನದ ಬಗ್ಗೆ ವಿಸ್ತೃತವಾದ ಯೋಜನಾ ವರದಿಯನ್ನು ಜೂ.20ರೊಳಗೆ ಬಿಬಿಎಂಪಿ ಆಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts