More

    Web Exclusive |ತೊಗರಿಗಿಲ್ಲ ರಾಜ್ಯ ಸರ್ಕಾರದ ಪ್ರೋತ್ಸಾಹ; ಕರೊನಾ ನೆಪ, ರೈತರಿಗೆ ಅನ್ಯಾಯ..

    | ಹೀರಾನಾಯ್ಕ ಟಿ. ವಿಜಯಪುರ

    ಪ್ರತಿ ವರ್ಷವೂ ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ನೀಡುತ್ತಿದ್ದ ತನ್ನ ಪಾಲಿನ ಪ್ರೋತ್ಸಾಹ ಧನವನ್ನು ಈ ಬಾರಿ ಇನ್ನೂ ಘೊಷಣೆ ಮಾಡಿಲ್ಲ. ಇದರಿಂದ ರೈತರು ಆತಂಕಕ್ಕಿಡಾಗಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಪ್ರತಿ ಕ್ವಿಂಟಾಲ್​ಗೆ 6 ಸಾವಿರ ರೂ. ಬೆಂಬಲ ಬೆಲೆ ಘೊಷಣೆ ಮಾಡಿದ್ದು, ರಾಜ್ಯ ಸರ್ಕಾರ ಮಾತ್ರ ಇನ್ನೂ ಘೊಷಣೆ ಮಾಡದೆ ಇರುವುದರಿಂದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ತೊಗರಿ ಕಣಜ ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ತೊಗರಿ ಕಟಾವು ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯ ಸರ್ಕಾರ ಕೂಡ ನೋಂದಣಿ ಪ್ರಕ್ರಿಯೆ ಆರಂಭಿಸಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಅದರಂತೆ ಈಗಾಗಲೇ ನೋಂದಣಿ ಕಾರ್ಯ ಆರಂಭಗೊಂಡಿದ್ದು, ಹೊಸವರ್ಷದಿಂದ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ರಾಜ್ಯ ಸರ್ಕಾರ ಇನ್ನೂ ಬೆಂಬಲ ಬೆಲೆ ಘೊಷಣೆ ಮಾಡದಿರುವುದರಿಂದ ನೋಂದಣಿಗೆ ರೈತರು ಹಿಂದೇಟು ಹಾಕುವಂತಾಗಿದೆ.

     ಪ್ರತಿವರ್ಷ ರಾಜ್ಯದಿಂದ ಅನ್ಯಾಯ

    ರೈತರ ಹಿತ ಕಾಪಾಡಬೇಕಿರುವ ಸರ್ಕಾರವೇ ರೈತರಿಗೆ ಅನ್ಯಾಯ ಮಾಡುತ್ತ ಬಂದಿದೆ. ಅದರಲ್ಲೂ ತೊಗರಿ ಬೆಳೆಗಾರರಿಗೆ ರಾಜ್ಯ ಸರ್ಕಾರ ನೀಡಬೇಕಿದ್ದ ಬೆಂಬಲ ಬೆಲೆಯನ್ನು ಪ್ರತಿ ವರ್ಷವೂ ಕಡಿತ ಮಾಡುತ್ತ ಬಂದಿದೆ. 20116-17ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್​ಗೆ 5050 ರೂ. ಬೆಂಬಲ ಬೆಲೆ ನೀಡಿದ್ದರೆ, ರಾಜ್ಯ ಸರ್ಕಾರ 450 ರೂ. ಬೆಂಬಲ ಬೆಲೆ ಘೊಷಣೆ ಮಾಡಿತ್ತು. 2017-18ರಲ್ಲಿ ಕೇಂದ್ರ ಸರ್ಕಾರ 5450 ರೂ. ರಾಜ್ಯ ಸರ್ಕಾರ 550 ರೂ. ನೀಡಿದೆ. ಅದರಂತೆ 2018-19ರಲ್ಲಿ ಕೇಂದ್ರ 5675 ರೂ, ರಾಜ್ಯ ಸರ್ಕಾರ 425 ರೂ, ನೀಡಿದೆ. 2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರ 5800 ರೂ. ನೀಡಿದರೆ ರಾಜ್ಯ ಸರ್ಕಾರ 300 ರೂ. ನೀಡಿತ್ತು. ಪ್ರಸ್ತುತ ಸಾಲಿನಲ್ಲಿ ಕೇಂದ್ರ ಸರ್ಕಾರ 6 ಸಾವಿರ ರೂ. ಬೆಂಬಲ ಬೆಲೆ ಘೊಷಣೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಇನ್ನೂ ಬೆಂಬಲ ಬೆಲೆ ಘೊಷಣೆ ಮಾಡಿಲ್ಲ. ಕಳೆದ ಮೂರು ವರ್ಷದಲ್ಲಿ ಕೇಂದ್ರ ಸರ್ಕಾರ ನೀಡುವ ಬೆಂಬಲ ಬೆಲೆಯಲ್ಲಿ 550 ರೂ. ಹೆಚ್ಚಳಗೊಳಿಸಿದರೆ, ರಾಜ್ಯ ಸರ್ಕಾರ 250 ರೂ.ಕಡಿತ ಮಾಡಿದೆ.

    Web Exclusive |ತೊಗರಿಗಿಲ್ಲ ರಾಜ್ಯ ಸರ್ಕಾರದ ಪ್ರೋತ್ಸಾಹ; ಕರೊನಾ ನೆಪ, ರೈತರಿಗೆ ಅನ್ಯಾಯ..
    ದೇವರಹಿಪ್ಪರಗಿ ಪಟ್ಟಣದ ಹೊರವಲಯದಲ್ಲಿ ಹೊಲದಲ್ಲಿ ತೊಗರಿ ರಾಶಿ ಮಾಡಿರುವುದು.

    ತೊಗರಿ ನೋಂದಣಿ ಪ್ರಕ್ರಿಯೆ ಆರಂಭ

    ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಮುಂದಾಗಿದ್ದು, ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯದ 2ನೇ ತೊಗರಿ ಕಣಜ ವಿಜಯಪುರ ಜಿಲೆಯಲ್ಲಿ 15,087, ಬಾಗಲಕೋಟೆ 1799, ಕಲಬುರಗಿ 554, ಬೆಳಗಾವಿ 1726, ಬೀದರ್ 390, ಕೊಪ್ಪಳ 1177, ರಾಯಚೂರು 609, ಯಾದಗಿರಿ 30, ಬಳ್ಳಾರಿ 19 ರೈತರು ಸೇರಿದಂತೆ ಡಿ.24ರ ಸಂಜೆ ವರೆಗೆ 21,391 ಜನರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಡಿ.30ರ ವರೆಗೂ ನೋಂದಾಯಿಸಲು ಅವಕಾಶವಿದೆ. ಪ್ರತಿ ರೈತರಿಂದ ಎಕರೆಗೆ 7.50 ಕ್ವಿಂಟಾಲ್​ನಿಂದ 20 ಕ್ವಿಂಟಾಲ್ ವರೆಗೆ ಖರೀದಿಗೆ ಅನುಮತಿ ನೀಡಿದೆ.

    ಕೇಂದ್ರ ಸರ್ಕಾರ ತೊಗರಿ ಕ್ವಿಂಟಾಲ್​ಗೆ 6 ಸಾವಿರ ರೂ. ಬೆಂಬಲ ಬೆಲೆ ಘೊಷಣೆ ಮಾಡಿದೆ. ಕಳೆದ ವರ್ಷ ರಾಜ್ಯ ಸರ್ಕಾರ 300 ರೂ. ಘೊಷಣೆ ಮಾಡಿತ್ತು. ಆದರೆ ಈ ಬಾರಿ ವಿಳಂಬವಾಗಿದೆ. ಶೀಘ್ರವೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು.

    | ಅರವಿಂದ ಕುಲಕರ್ಣಿ ರೈತ ಮುಖಂಡ

    ರಾಜ್ಯ ಸರ್ಕಾರದಿಂದ ತೊಗರಿಗೆ ಬೆಂಬಲ ಬೆಲೆ ಘೊಷಣೆ ಮಾಡಬೇಕು ಎಂದು ಅನೇಕ ರೈತ ಸಂಘಟನೆಗಳಿಂದ ಮನವಿ ಬಂದಿವೆ. ಆ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗಿದೆ. ಸರ್ಕಾರ ಕೈಗೊಳ್ಳುವ ಕ್ರಮವನ್ನು ಅನುಷ್ಟಾನಗೊಳಿಸಲಾಗುವುದು.

    | ಡಾ. ಔದ್ರಾಮ್ ಅಧ್ಯಕ್ಷರು, ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts