More

    ಎರಡು ವರ್ಷವಾದ್ರೂ ಬಸ್ ಕಾಣದ ಬಸಾಪೂರ

    ಅಣ್ಣಿಗೇರಿ: ಅಣ್ಣಿಗೇರಿ ಮತ್ತು ನವಲಗುಂದ ಎರಡು ತಾಲೂಕು ಕೇಂದ್ರಗಳಿಂದ ಬರೋಬ್ಬರಿ ತಲಾ 9 ಕಿಮೀ ಅಂತರದಲ್ಲಿದೆ ಬಸಾಪೂರ ಗ್ರಾಮ. ಎರಡೂ ಬದಿಯಿಂದ ಸಂಚರಿಸುವ ಬಸ್​ಗಳು ಬಸಾಪೂರ ಕ್ರಾಸ್​ನಲ್ಲಿ ಮಾತ್ರ ನಿಲುಗಡೆಯಾಗುತ್ತವೆ. ಮುಖ್ಯ ರಸ್ತೆಯಲ್ಲಿರುವ ಕ್ರಾಸ್​ನಿಂದ 1.5 ಕಿಮೀ ದೂರದಲ್ಲಿ ಬಸಾಪೂರ ಗ್ರಾಮವಿದೆ. ಆದರೆ, ಗ್ರಾಮಕ್ಕೆ ಬಸ್ ಪ್ರವೇಶಿಸಿದೆ ಎರಡು ವರ್ಷಗಳು ಕಳೆದಿವೆ.

    ಮುಖ್ಯ ರಸ್ತೆ ಕ್ರಾಸ್​ನಿಂದ ಬಸ್ ಆಗಮಿಸಿದೇ ಇರುವುದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಂತೂ ಗ್ರಾಮದಿಂದ ಮುಖ್ಯ ರಸ್ತೆಯಲ್ಲಿರುವ ಬಸ್ ನಿಲ್ದಾಣ ತಲುಪಲು ವೃದ್ಧರು, ಅಂಗವಿಕಲರು, ವಿದ್ಯಾರ್ಥಿಗಳು, ಗರ್ಭಿಣಿಯರು, ರೋಗಿಗಳು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

    ಕಿರಿದಾದ, ಇಕ್ಕಟ್ಟಾದ ಹದಗೆಟ್ಟ ರಸ್ತೆ. ಪ್ರಸ್ತುತ ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸಲಾಗುತ್ತಿದ್ದ ಟ್ರ್ಯಾಕ್ಟರ್, ಚಕ್ಕಡಿ ಹಾಗೂ ಇನ್ನಿತರ ಕೃಷಿ ಸಾಮಗ್ರಿಗಳು ಸುಗಮ ಸಂಚಾರಕ್ಕೆ ಅಡೆತಡೆ ಉಂಟು ಮಾಡುತ್ತಿದ್ದವು. ಇದನ್ನೇ ಮುಂದಿಟ್ಟುಕೊಂಡು ಸಾರಿಗೆ ಅಧಿಕಾರಿಗಳು ಬಸ್ ಸಂಚಾರ ಸ್ಥಗಿತಗೊಳಿಸಿದ್ದರು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಪಿಎಂ ಗ್ರಾಮ ಸಡಕ್ ಯೋಜನೆಯಡಿ ಉತ್ತಮ ರಸ್ತೆ ನಿರ್ವಿುಸಲಾಗಿದೆ. ಪ್ರಸ್ತುತ ವಿಶಾಲವಾಗಿರುವ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಎರಡೂ ಬದಿಯಿಂದ ಯಾವುದೇ ಅಡೆತಡೆ ಇಲ್ಲದೆ ಸುರಕ್ಷಿತವಾಗಿ ಸಂಚರಿಸಬಹುದು. ಬದಲಾದ ಸನ್ನಿವೇಶ ಹಾಗೂ ವಸ್ತು ಸ್ಥಿತಿಗೆ ಅನುಗುಣವಾಗಿ ಸಾರಿಗೆ ಸಂಸ್ಥೆಯ ಬಸ್​ಗಳನ್ನು ಬಸಾಪೂರಕ್ಕೆ ಸರಾಗವಾಗಿ ಓಡಿಸಬಹುದಾಗಿದೆ. ಆದ್ದರಿಂದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ವಾಸ್ತವ ಅರಿತು ಗ್ರಾಮಕ್ಕೆ ಬಸ್​ಗಳನ್ನು ಓಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರು ರಸ್ತೆಯ ಸುಸ್ಥಿತಿಯ ಬಗೆಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ಬಸಾಪೂರ ಗ್ರಾಮಕ್ಕೆ ಬಸ್​ಗಳನ್ನು ಓಡಿಸಲು ಕ್ರಮ ಜರುಗಿಸಬೇಕಿದೆ.

    ಅಧಿಕಾರಿಗಳ ಜತೆಯಲ್ಲಿ ರ್ಚಚಿಸಿ ಆ ಭಾಗದ ಕುಂದುಕೊರತೆಗಳನ್ನು ಪರಿಶೀಲಿಸಿ ಅಗತ್ಯ ಬಿದ್ದರೆ ಹೆಚ್ಚಿನ ಬಸ್ ವ್ಯವಸ್ಥೆ ಅನುಕೂಲ ಮಾಡಿಕೊಡುತ್ತೇನೆ.
    | ಅಶೋಕ ಪಾಟೀಲ, ಹುಬ್ಬಳ್ಳಿ ವಿಭಾಗದ ಸಂಚಾರಿ ಅಧಿಕಾರಿ

    ಪ್ರತಿದಿನ ಪಾಲಕರು ಕರಕೊಂಡು ಬಂದು ಕ್ರಾಸ್​ತನಕ ಬಿಟ್ಟು ಹೋಗೋದು ಬಾಳ ತೊಂದರೆಯಾಗಾಕತ್ತೇತಿ. ಬಸ್ ಊರ ಒಳಗ ಬಂದ್ರ ಸಾಲಿ ಕಲ್ಯಾರಿಗೂ ಮತ್ತ ವಯಸ್ಸಾದವರಿಗೂ ಬಾಳ ಅನುಕೂಲ ಅಕ್ಕೇತಿ. ಈ ಕೆಲಸ ನಮ್ಮ ಶಾಸಕರು ಮಾಡಿ ಕೊಡ್ತಾರಂತ ಬಾಳ ನಂಬ್ಕಿ ಐತಿ. ಸಾಹೇಬ್ರ ನೀವೇನಾದ್ರು ಮಾಡ್ರಿ ನಮ್ಮ ಊರಾಗ ಬಸ್ ಅಡ್ಡಾಡುವಂಗ ಮಾಡಿಕೊಟ್ಟು ಪುಣ್ಯಕಟ್ಟಿಕೊಳ್ರಿ.
    | ರಂಜಿತಾ ಮಾಯಣ್ಣವರ, ಬಸಾಪೂರ ಗ್ರಾಮದ ವಿದ್ಯಾರ್ಥಿನಿ

    ರಾಜಕಾರಣಿಗಳು ಇಲೆಕ್ಷನ್ ಬಂದಾಗ ಅಷ್ಟ ನಮ್ಮ ಹತ್ರ ವೋಟ್ ಕೇಳಾಕ ಬರ್ತಾರ. ಬಿಟ್ರ ಬರೂದೇ ಇಲ್ಲ. ಮಕ್ಕಳಿಗೆ, ಮುದುಕರಿಗೆ ಭಾಳ ತ್ರಾಸ ಆಗಾಕತ್ತೇತಿ. ಶಾಸಕರ ನೀವೇ ಇದರ ಬಗ್ಗೆ ಗಮನಹರಿಸಿ ಬಸ್ ಓಡಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡ್ರಿ.
    | ಬಿ.ಎಸ್. ದುಂದೂರ,
    ಬಸಾಪೂರ ಗ್ರಾಮದ ನಿವಾಸಿ

    ಈ ಕೂಡಲೆ, ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು
    | ಶಂಕರ ಪಾಟೀಲ ಮುನೇನಕೊಪ್ಪ ಶಾಸಕ, ನವಲಗುಂದ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts