More

    ಎಟಿಎಂಗಳಲ್ಲಿಲ್ಲ ಕನಿಷ್ಠ ಸುರಕ್ಷತೆ

    ಬೆಳಗಾವಿ: ದಿನದಿಂದ ದಿನಕ್ಕೆ ಕರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್-19 ಸೋಂಕು ಸಾಂಕ್ರಾಮಿಕವಾಗಿ ಹರಡುವುದನ್ನು ನಿಯಂತ್ರಿಸಲು ಬೆಳಗಾವಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಎಟಿಎಂ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

    ಬೆಳಗಾವಿ ನಗರದಲ್ಲಿ ಒಟ್ಟು 204 ಎಟಿಎಂ ಕೇಂದ್ರಗಳಿದ್ದರೆ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ 557 ಕೇಂದ್ರಗಳು ಸೇರಿ ಜಿಲ್ಲಾದ್ಯಂತ 761 ಎಟಿಎಂ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಕೆಲವು ಕೇಂದ್ರಗಳಲ್ಲಿ ಮಾತ್ರ ಕರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಬಹುತೇಕ ಎಟಿಎಂಗಳಲ್ಲಿ ಕರೊನಾ ವೈರಸ್ ತಡೆಯಲು ಕನಿಷ್ಠ ಸುರಕ್ಷತಾ ಕ್ರಮ ವಹಿಸಿಲ್ಲ.

    ನಿರ್ಲಕ್ಷೃ ಧೋರಣೆ: ಭದ್ರತಾ ಸಿಬ್ಬಂದಿ ಇಲ್ಲದ ಯಾವುದೇ ಎಟಿಎಂಗಳಲ್ಲಿ ಬರುವ ಗ್ರಾಹಕರಿಗೆ ಬಳಸಲು ಸ್ಯಾನಿಟೈಸರ್ ಇಟ್ಟಿಲ್ಲ. ಹಲವೆಡೆ ಎಟಿಎಂಗಳಲ್ಲಿನ ಎಸಿ ಸಹ ಬಂದ್ ಮಾಡಿಲ್ಲ. ಜಿಲ್ಲಾಡಳಿತ ಹಾಗೂ ಸರ್ಕಾರದ ಆದೇಶ ಇದ್ದಾಗಲೂ ಗ್ರಾಹಕರ ಆರೋಗ್ಯ ಕಳಕಳಿಯಿಂದ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸಿರುವ ಬ್ಯಾಂಕ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

    ನೋಟಿಸ್ ಎಚ್ಚರಿಕೆ: ಈ ಬಗ್ಗೆ ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್ ಅಧಿಕಾರಿಗಳು, ‘ಭದ್ರತಾ ಸಿಬ್ಬಂದಿ ಇರುವ ಎಟಿಎಂಗಳಲ್ಲಿ ಮಾತ್ರ ಸ್ಯಾನಿಟೈಸರ್ ಇಟ್ಟು, ಗ್ರಾಹಕರಿಗೆ ಬಳಸುವಂತೆ ಹೇಳಲು ಸೂಚಿಸಲಾಗಿತ್ತು. ಸಿಬ್ಬಂದಿ ಇಲ್ಲದ ಕಡೆ ದಾರವೊಂದಕ್ಕೆ ಬಾಟಲಿ ಕಟ್ಟಿ ಬಿಡುವಂತೆಯೂ ಹಾಗೂ ಎಸಿ ಬಳಸದಂತೆ ಕಟ್ಟುನಿಟ್ಟಾಗಿ ತಿಳಿಸಲಾಗಿತ್ತು. ನಿಯಮ ಪಾಲಿಸದೆ ಇರುವುದನ್ನು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

    ಗ್ರಾಹಕರ ದೂರುಗಳೇನು?: ಬಹುತೇಕ ಎಟಿಎಂಗಳಲ್ಲಿ ಸ್ಯಾನಿಟೈಸರ್ ಇಟ್ಟಿಲ್ಲ. ಎಟಿಎಂ ಯಂತ್ರಗಳಿಗೆ ಆಗಾಗ ಸೋಂಕು ನಿವಾರಕ ಔಷಧ ಸಿಂಪಡಿಸುತ್ತಿಲ್ಲ. ಕೆಲವೊಂದು ಎಟಿಎಂಗಳಲ್ಲಿ ಇನ್ನೂ ಎಸಿ ಬಳಸುತ್ತಿದ್ದಾರೆ. ಔಟ್ ಆಫ್ ಸರ್ವಿಸ್ ಫಲಕ ನೇತುಹಾಕುವಂತೆ ಕನಿಷ್ಠ ಪಿನ್‌ಕೋಡ್ ಟೈಪಿಸುವಾಗ ಕೈವಸ್ತ್ರ ಇಲ್ಲವೆ ಇನ್ನಿತರ ವಸ್ತುಗಳನ್ನು ಬಳಸುವ ಬಗ್ಗೆ ಅರಿವು ಮೂಡಿಸುವ ಭಿತ್ತಿಪತ್ರವನ್ನೂ ಅಂಟಿಸಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ವಿಥ್‌ಡ್ರಾ ಮಾಡುವ ಗ್ರಾಹಕರಿಗೆ ಕರೊನಾತಂಕ

    ಸಂಬಳ ಆಗಿರಬಹುದು ಎಂಬ ನಿರೀಕ್ಷೆಯಿಂದ ಬುಧವಾರ ಗಾಂಧಿನಗರದಲ್ಲಿನ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಎಟಿಎಂ ಕೇಂದ್ರಕ್ಕೆ ಹೋಗಿದ್ದೆ. ಅಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಕೇಂದ್ರದ ಒಳಗಾಗಲಿ, ಹೊರಗಾಗಲಿ ಸ್ಯಾನಿಟೈಸರ್ ಇಟ್ಟಿರಲಿಲ್ಲ. ವಿಧಿ ಇಲ್ಲದೆ ಮೂರ್ನಾಲ್ಕು ಎಟಿಎಂಗಳಿಗೆ ಹೋದೆ. ಎಲ್ಲೆಡೆ ಅದೇ ಪರಿಸ್ಥಿತಿ ಇದ್ದು, ಸ್ಯಾನಿಟೈಸರ್ ಇರಲಿಲ್ಲ. ಅನಿವಾರ್ಯವಾಗಿ ಬೈಕ್ ಕೀ ಬಳಸಿ ಎಟಿಎಂ ಯಂತ್ರದ ಬಟನ್ ಪ್ರೆಸ್ ಮಾಡಿ ಹಣ ಪಡೆದುಕೊಂಡೆ ಎಂದು ಖಾಸಗಿ ಕಂಪನಿ ನೌಕರ ಶಿವಾನಂದ ಗೌಡರ ತಿಳಿಸಿದರು. ನಗರದ ಹೊರ ವಲಯದಲ್ಲಿರುವ ಎಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಇಡುವುದು, ಎಸಿ ಬಂದ್ ಮಾಡುವುದು ಸೇರಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಪಾಲಿಸದಿರುವುದು ಗ್ರಾಹಕರಲ್ಲಿ ಆತಂಕ ತಂದಿದೆ.

    ಸರ್ಕಾರ ಅದೆಷ್ಟೇ ಆದೇಶ ಜಾರಿಗೊಳಿಸಿದರೂ ನಮ್ಮ ಆಡಳಿತ ವ್ಯವಸ್ಥೆ ಸುಧಾರಿಸುವುದಿಲ್ಲ. ಕರೊನಾ ವೈರಸ್ ದಾಳಿಯಿಟ್ಟ ಇಂತಹ ಸಂದರ್ಭದಲ್ಲಿ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುವುದು ಸೂಕ್ತ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಿಂದ ಬರುವಾಗಲೇ ಹ್ಯಾಂಡ್‌ಗ್ಲೌಸ್ ಹಾಕಿಕೊಂಡು ಬಂದಿದ್ದೆ. ಹಣ ಪಡೆದುಕೊಂಡ ಬಳಿಕ ಮನೆಗೆ ತೆರಳಿ ಸ್ಯಾನಿಟೈಸರ್ ಬಳಸಿದೆ.
    | ಸಂತೋಷ ಪವಾರ್ ಬ್ಯಾಂಕ್ ಗ್ರಾಹಕ

    ಎಲ್ಲ ಎಟಿಎಂ ಕೇಂದ್ರಗಳಲ್ಲಿ ಹಣ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಜತೆಗೆ ನಗರ ಸೇರಿ ಜಿಲ್ಲೆಯ ಎಲ್ಲ ಎಟಿಎಂಗಳಲ್ಲಿ ಸ್ಯಾನಿಟೈಜರ್ ಇಡುವಂತೆ ಎಲ್ಲ ಬ್ಯಾಂಕ್‌ಗಳಿಗೆ ಸುತ್ತೋಲೆ ಮೂಲಕ ಸೂಚನೆ ನೀಡಲಾಗಿದೆ. ಜನತೆ ಸ್ಯಾನಿಟೈಸರ್ ಇಲ್ಲವಾದರೂ ಸುರಕ್ಷತೆ ದೃಷ್ಟಿಯಿಂದ ಕೈವಸ್ತ್ರ ಇಲ್ಲವೆ ಇನ್ನಿತರ ವಸ್ತುಗಳನ್ನು ಬಳಸಿ ಸ್ಕ್ರೀನ್ ಸ್ಪರ್ಶಿಸದೆ ಬಟನ್ ಉಪಯೋಗಿಸಿ ಬ್ಯಾಂಕಿಂಗ್ ಮಾಡುವುದು ಉತ್ತಮ.
    | ವಿ.ರಾಹುಲ್ ಲೀಡ್ ಬ್ಯಾಂಕ್ ಮ್ಯಾನೇಜರ್ ಬೆಳಗಾವಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts