More

    ಉತ್ತರ ಕರ್ನಾಟಕ ಪ್ರತ್ಯೇಕ ಧ್ವಜ ಹಾರಾಟ

    ಹಿರೇಬಾಗೇವಾಡಿ: ಗ್ರಾಮದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಿದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಅಡಿವೇಶ ಇಟಗಿ ಮತ್ತು ಕಾರ್ಯಕರ್ತರನ್ನು ಶುಕ್ರವಾರ ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದ್ದಾರೆ.

    ಗ್ರಾಮದ ಬೈಲಹೊಂಗಲ ಬಸ್ ನಿಲ್ದಾಣದಲ್ಲಿ ವಿದ್ಯುತ್ ಕಂಬಕ್ಕೆ ಧ್ವಜ ಸಿಕ್ಕಿಸಿ ಘೋಷಣೆ ಕೂಗಿದ ಕಾರ್ಯಕರ್ತರನ್ನು, ಧ್ವಜವನ್ನು ಪೊಲೀಸರು ವಶಕ್ಕೆ ಪಡೆದರು. ಘೋಷಣೆ ಕೂಗುವುದಾಗಿ ಹೇಳಿದ್ದ ಕಾರ್ಯಕರ್ತರು, ರಾಷ್ಟ್ರಗೀತೆ ಹಾಡಲು ಪ್ರಾರಂಭಿಸಿ ಅದೇ ವೇಳೆ ಕಂಬಕ್ಕೆ ಧ್ವಜ ಸಿಕ್ಕಿಸಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಡಿವೇಶ ಇಟಗಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಸರ್ಕಾರಗಳೂ ಸ್ಪಂದಿಸುತ್ತಿಲ್ಲ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುವರ್ಣ ವಿಧಾನಸೌಧ ಪ್ರಯೋಜನಕ್ಕೆ ಬಾರದೆ ಬಿಕೋ ಎನ್ನುತ್ತಿದೆ. ಬೆಳಗಾವಿಗೆ ಪ್ರಮುಖವಾದ ಒಂಬತ್ತು ಇಲಾಖೆಗಳ ಕಚೇರಿ ಸ್ಥಳಾಂತರಿಸಲಾಗುವುದು ಎಂದು ಭರವಸೆ ನೀಡಿದ್ದ ಸರ್ಕಾರ ಬಳಿಕ ನೆರವೇರಿಸಿಲ್ಲ. ಹೀಗಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುಂಠಿತಗೊಂಡಿದೆ. ಈ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಸಮಿತಿಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರಕಾರ ಕಳೆದ ಮೂರು ವರ್ಷಗಳಿಂದ ಜನವರಿ ಒಂದರಂದು ಉತ್ತರ ಕರ್ನಾಟಕ ರಾಜ್ಯೋತ್ಸವದ ಆಚರಣೆ ಮಾಡುವುದಾಗಿ ತೀರ್ಮಾನಿಸಿ ಧ್ವಜಾರೋಹಣ ಮಾಡುತ್ತಿದ್ದೇವೆ ಎಂದರು.

    ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಮಾದುಭರಮಣ್ಣವರ ಮಾತನಾಡಿ, ಆಂದ್ರಪ್ರದೇಶ ಮತ್ತು ಬಿಹಾರವನ್ನು ಈಗಾಗಲೇ ಎರಡು ರಾಜ್ಯಗಳನ್ನಾಗಿ ವಿಂಗಡಿಸಲಾಗಿದೆ. ಅದರಂತೆ, ಉತ್ತರ ಕರ್ನಾಟಕವನ್ನೂ ಪ್ರತ್ಯೇಕ ರಾಜ್ಯವೆಂದು ಘೋಷಿಸಿದರೆ ಮಾತ್ರ ಸಮರ್ಪಕವಾಗಿ ಅಭಿವೃದ್ಧಿ ಮಾಡಬಹುದಾಗಿದೆ. ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. ಹೋರಾಟ ಸಮಿತಿಯ ಸಂತೋಷ ಕಾಕತಿ, ಅಡಿವೆಪ್ಪ ತೋಟಗಿ, ಆನಂದ ಪಾಟೀಲ, ಗಂಗಾಧರ ಅಗಸಿಮನಿ, ವಿರೂಪಾಕ್ಷಿ ರೊಟ್ಟಿ, ಶಿವು ಪಾಟೀಲ, ಬಸವರಾಜ ಧೂಳಪ್ಪನವರ, ಮುಶಪ್ಪ ಉಪ್ಪಾರ, ಸಮರ್ಥ ಇಟಗಿ, ಸುರೇಶ ಗುಂಡ್ಲೂರ, ಸಿದ್ದಣ್ಣ ಗೊಳಲಿ, ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts