More

    ಬಿಸಿಲಿಗೆ ಉತ್ತರ ಭಾರತ ತತ್ತರ; ರಾಜಸ್ಥಾನದಲ್ಲಿ 48 ಡಿ.ಸಿ ದಾಟಿದ ತಾಪಮಾನ

    ನವದೆಹಲಿ: ಉತ್ತರ ಭಾರತ ತೀವ್ರ ಬಿಸಿಲಿನ ಝುಳಕ್ಕೆ ಸಿಲುಕಿದೆ. ರಾಜಸ್ಥಾನದ ಬಾರ್ಮರ್​ನಲ್ಲಿ ಗರಿಷ್ಠ ತಾಪಮಾನ 48 ಡಿಗ್ರಿ ಸೆಲ್ಸಿಯಸ್ ದಾಟಿದೆ. ಹವಾಮಾನ ಇಲಾಖೆಯು ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಬಿಸಿಗಾಳಿ ಅಲರ್ಟ್ ಘೊಷಿಸಿದೆ. ಜತೆಗೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದಲ್ಲೂ ಎಚ್ಚರಿಕೆ ನೀಡಲಾಗಿದೆ.

    ರಾಜಸ್ಥಾನದಲ್ಲಿ ತಾಪಮಾನ ಏರಿಕೆ ಕಾರಣ ಗುರುವಾರ ಐವರು ಮೃತಪಟ್ಟಿದ್ದಾರೆ. ಬಾರ್ಮರ್​ನಲ್ಲಿ 48.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಖೈರ್ತಾಲ್ ಜಿಲ್ಲೆಯಲ್ಲಿ ಹಲವು ಪ್ರಾಣಿ, ಪಕ್ಷಿಗಳು ಸತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫಲೋಡಿಯಲ್ಲಿ 48.6 ಡಿಗ್ರಿ ಸೆಲ್ಸಿಯಸ್, ಫತೇಪುರ್​ದಲ್ಲಿ 47.6 ಡಿಗ್ರಿ ಸೆಲ್ಸಿಯಸ್, ಜೈಸಲ್ಮೇರ್​ನಲ್ಲಿ 47.5 ಡಿಗ್ರಿ ಸೆ., ಜೋಧ್​ಪುರ 47.4 ಡಿಗ್ರಿ ಸೆ., ಜಲೋರ್ 47.3 ಡಿಗ್ರಿ ಸೆ., ಕೋಟಾದಲ್ಲಿ 47.4 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ.

    ಮುಂದಿನ ದಿನಗಳಲ್ಲಿ ರಾಜಸ್ಥಾನದಲ್ಲಿ ತಾಪಮಾನ 50 ಡಿಗ್ರಿ ತಲುಪಬಹುದು ಎಂದು ಅಂದಾಜು ಮಾಡಲಾಗಿದೆ. ರಾಜ್ಯದ 19 ನಗರಗಳಲ್ಲಿ ತಾಪಮಾನ 45 ಡಿಗ್ರಿಗಿಂತ ಹೆಚ್ಚು ದಾಖಲಾಗಿದೆ. ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸಂಸ್ಕರಣಾಗಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ವಿುಕನೊಬ್ಬ ಬಿಸಿಲಿಗೆ ಸಾವಿಗೀಡಾಗಿದ್ದಾನೆ.

    ಗುಜರಾತ್​ನ ಅಹಮದಾಬಾದ್ ಮತ್ತು ಗಾಂಧಿನಗರದಲ್ಲಿ ಎರಡು ದಿನ ರೆಡ್ ಅಲರ್ಟ್ ಘೊಷಿಸಲಾಗಿದೆ. ರಾತ್ರಿ 10 ಗಂಟೆಯವರೆಗೂ 40 ಡಿಗ್ರಿ ಸೆ. ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಾಲ್ಕು ದಿನಗಳ ನಂತರ ತಾಪಮಾನ 2-3 ಡಿಗ್ರಿಗಳಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ಈ ವರ್ಷ ಮೊದಲ ಬಾರಿಗೆ ಕಾಶ್ಮೀರಕ್ಕೂ ಹೀಟ್​ವೇವ್ ಅಪ್ಪಳಿಸಿದೆ. ಮುಂದಿನ 5 ದಿನಗಳ ಕಾಲ ರಾಜಸ್ಥಾನ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ತಾಪಮಾನ 44 ಡಿಗ್ರಿಗಿಂತ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಏರ್​ಪೋರ್ಟ್​ಗೆ ಸಿಡಿಲು ವಿಮಾನ ಸಂಚಾರ ರದ್ದು: ಗೋವಾದಲ್ಲಿ ಭಾರಿ ಮಳೆ, ಸಿಡಿಲಿನ ಕಾರಣ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್​ವೇ ದೀಪಗಳು ಹಾನಿಗೊಂಡಿದ್ದು, 6 ವಿಮಾನಗಳ ಹಾರಾಟ ರದ್ದಾಗಿದೆ. ಬುಧವಾರ ಸಂಜೆ ಸುಮಾರು 5 ಗಂಟೆಗೆ ಸಿಡಿಲು ಬಡಿದಿದೆ. 8 ಗಂಟೆಯ ಹೊತ್ತಿಗೆ ರನ್​ವೇ ದೀಪಗಳನ್ನು ಪುನಃಸ್ಥಾಪಿಸಲಾಯಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

    ಎಲ್ಲೆಲ್ಲಿ ಮಳೆ ಎಚ್ಚರಿಕೆ?: ಪಶ್ಚಿಮ ಬಂಗಾಳ, ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್, ತಮಿಳುನಾಡು, ಪುದುಚೇರಿ, ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಭಾರಿ ಮಳೆ ಎಚ್ಚರಿಕೆ. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಸಾಧಾರಣ ಮಳೆ ಸಾಧ್ಯತೆ

    ಮುಂಗಾರು ಪೂರ್ವ ಮಳೆ ಇಳಿಕೆ: ದೇಶದಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಕಡಿಮೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 9ರಿಂದ ಮೇ 15ರ ನಡುವೆ ಶೇ.55ರಷ್ಟು ಕಡಿಮೆ ಮಳೆ ದಾಖಲಾಗಿದೆ. ಆದರೆ, ಈ ಬಾರಿ ಮುಂಗಾರು ಮಳೆ ಉತ್ತಮವಾಗುವ ಲಕ್ಷಣಗಳಿವೆ.

    ಕೇರಳ ಮಳೆಗೆ 7 ಬಲಿ: ಕೇರಳದಲ್ಲಿ ಋತುವಿನ ಆರಂಭದಲ್ಲೇ ಮುಂಗಾರು ಅಬ್ಬರಿಸಿದ್ದು ಗುರುವಾರವೂ ದೆಮುಂದುವರಿದ ಧಾರಾಕಾರ ಮಳೆಗೆ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ. ಹಲವು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ ರಾಜ್ಯದ ಹಲವು ಭಾಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿ. ಪಟ್ಟಣಂತಿಟ್ಟ, ಅಲಪುಳ, ಕೊಟ್ಟಾಯಂ, ಎರ್ನಾಕುಳಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಮಲಪು್ಪರಂ, ಕೋಳಿಕೋಡ್ ಮತ್ತು ವಯ್ನಾಡ್ ಜಿಲ್ಲೆಗಳಲ್ಲಿ ಈಗಾಗಲೇ ಘೋಷಿಸಿರುವ ಆರೆಂಜ್ ಅಲರ್ಟ್ ಮುಂದುವರಿಯಲಿದೆ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಕೊಚ್ಚಿಯ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿ ಸಂಚಾರಕ್ಕೆ ಅಡ್ಡಿಯಾಗಿದೆ.

    ವಿಮಾನ ಸಂಚಾರ ವ್ಯತ್ಯಯ: ಕೇರಳಕ್ಕೆ ಆಗಮಿಸುವ ಹಾಗೂ ಅಲ್ಲಿಂದ ತೆರಳುವ ಅನೇಕ ವಿಮಾನಗಳ ಸಂಚಾರ ಅತಿವೃಷ್ಟಿಯಿಂದಾಗಿ ಅಸ್ತವ್ಯಸ್ತಗೊಂಡಿದೆ. ದೋಹಾ, ಮಸ್ಕತ್, ದುಬೈ, ದಮ್ಮಂ ಮತ್ತು ರಿಯಾದ್​ನಿಂದ ಕಲ್ಲಿಕೋಟೆ ಏರ್​ಪೋರ್ಟ್​ಗೆ ಐದು ವಿಮಾನಗಳನ್ನು ಬೇರೆಡೆ ಡೈವರ್ಟ್ ಮಾಡಲಾಗಿದೆ. ಕೋಳಿಕೋಡ್​ನಿಂದ ಹೊರಡಲಿದ್ದ ವಿಮಾನಗಳ ಸಂಚಾರ ವಿಳಂಬಗೊಂಡಿದೆ.

    ಬಂಗಾಳಕ್ಕೆ ರೆಮಾಲ್ ಚಂಡಮಾರುತ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ತೀವ್ರ ಸ್ವರೂಪ ಪಡೆದು ಭಾನುವಾರ ಸಂಜೆ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಗಳನ್ನು ತಲುಪಲಿವೆ ಎಂದು ಐಎಂಡಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಈ ಚಂಡಮಾರುತ ಭಾನುವಾರ ಗಂಟೆಗೆ 102 ಕಿ.ಮೀ. ವೇಗದಲ್ಲಿ ಸಾಗುವ ನಿರೀಕ್ಷೆಯಿದೆ. ಇದು ಬಂಗಾಳ ಕೊಲ್ಲಿಯಲ್ಲಿ ಮೊದಲ ಮುಂಗಾರು-ಪೂರ್ವ ಚಂಡಮಾರುತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts