More

    ಹೆಬ್ಬಾಡಿಗಿಲ್ಲ ವಾರಾಹಿ ನೀರು

    ಶಂಕರನಾರಾಯಣ: ಕೋಟಿ ಕೋಟಿ ರೂಪಾಯಿ ಅನುದಾನ ಬಳಸಿ ಕೃಷಿ ಹಾಗೂ ಕುಡಿಯುವ ನೀರು ಹಿನ್ನೆಲೆಯಲ್ಲಿ ಆರಂಭವಾದ ವಾರಾಹಿ ನೀರಾವರಿ ಕಾಲುವೆ ಉಡುಪಿ ಜಿಲ್ಲೆಯ ಮೂಲೆಮೂಲೆೆಗೂ ನೀರು ಹರಿಸುತ್ತಿದೆ. ಆದರೆ ಶಂಕರನಾರಾಯಣ ಗ್ರಾಮ ಪಂಚಾಯಿತಿ ಕುಳಂಜೆ ಗ್ರಾಮ ಹೆಬ್ಬಾಡಿ, ದಿಂಬದಮನೆ, ಅಗಳಕೋಣು, ಮಕ್ಕಿಮನೆ, ಹೆಬ್ಬಾಡಿ ಮೇಲುಕೋಡಿ ಭಾಗದ 100 ಎಕರೆಗೂ ಮೇಲ್ಪಟ್ಟ ಕೃಷಿ ಭೂಮಿಗೆ ಓ ನೀರು ಸಿಗುತ್ತಿಲ್ಲ.

    ವಾರಾಹಿ ಯೋಜನೆಗಾಗಿ ನಮ್ಮ ಫಲವತ್ತಾದ ಭೂಮಿ ಕಳೆದುಕೊಂಡಿದ್ದೇವೆ. ಈಗ ಕೃಷಿ ಚಟುವಟಿಕೆಗೆ ನೀರಿಲ್ಲದೆ ಸಮಸ್ಯೆಯಾಗಿದೆ. ವಾರಾಹಿ ಬಲದಂಡೆ 15.825 ಕಿ.ಮೀ. ನೀರುಜಡ್ಡು, ಇಲ್ಲಿಂದ ನೀರನ್ನು ಹೆಬ್ಬಾಡಿ ಭಾಗಕ್ಕೆ ಸುಲಭವಾಗಿ ಹರಿಸಬಹುದಾದರೂ ಇಲಾಖೆ ಮನಸ್ಸು ಮಾಡುತ್ತಿಲ್ಲ ಎನ್ನುವುದು ಇಲ್ಲಿನ ಕೃಷಿಕರ ಆರೋಪ.

    ಹೆಬ್ಬಾಡಿ ಭಾಗದ ಕೃಷಿ ಭೂಮಿ ಹಾಗೂ ವಾರಾಹಿ ಬಲದಂಡೆ ಕಾಲುವೆಯ 15ನೇ ಕಿ.ಮೀ. ನೀರು ಜಡ್ಡು ಎಂಬಲ್ಲಿ ಎರಡು ಗುಡ್ಡಗಳು ಅಡ್ಡ ಬಂದಿದ್ದು, ನೀರಾವರಿ ಇಲಾಖೆ ಶ್ರಮ ವಹಿಸಿ 150ರಿಂದ 200 ಮೀ. ದೂರ 20 ಅಡಿ ಆಳ ಮತ್ತು 5 ಅಡಿ ಅಗಲದಲ್ಲಿ ಗುಡ್ಡದ ಬುಡ ಕೊರೆದು ಪೈಪ್ ಅಳವಡಿಸಿದರೆ ಕಾಲುವೆ ನೀರನ್ನು ಗುರುತ್ವಾಕರ್ಷಣ ಶಕ್ತಿ ಮೇಲೆ ನಿರಂತರವಾಗಿ ಹೆಬ್ಬಾಡಿ ಭಾಗಕ್ಕೆ ಹರಿಸಬಹುದು ಎನ್ನುತ್ತಾರೆ ಇಲ್ಲಿನ ಕೃಷಿಕರು.

    ಶಂಕರನಾರಾಯಣ ಗ್ರಾಪಂ ಕುಳಂಜೆ ಗ್ರಾಮದ ಹೆಬ್ಬಾಡಿ ಭಾಗಕ್ಕೆ ಕಣ್ಣೆದುರೇ ವಾರಾಹಿ ಕಾಲುವೆ ನೀರು ಹರಿದರೂ ಸರ್ಕಾರ ನಮಗೆ ನೀರು ಕೊಡುವ ವ್ಯವಸ್ಥೆ ಮಾಡಲಿಲ್ಲ. ನೀರುಜಡ್ಡು ಎಂಬಲ್ಲಿ ನೀರಾವರಿ ಇಲಾಖೆ ಎಫ್‌ಐಸಿ(ಫೀಲ್ಡ್ ಇರಿಗೇಶನ್ ತೂಬು) ಇಟ್ಟಿದ್ದು 20 ಅಡಿ ಆಳ 5 ಅಡಿ ಅಗಲದ 200 ಮೀ. ಕಾಲುವೆ ಮಾಡಿದರೆ ಹೆಬ್ಬಾಡಿಯ ಕೃಷಿ ಭೂಮಿಗೆ ನೀರುಣಿಸಬಹುದು. ನೀರಾವರಿ ಇಲಾಖೆ ಇತ್ತ ಗಮನ ಹರಿಸಬೇಕು.
    ಮಟಪಾಡಿ ಸದಾಶಿವ ಶೆಟ್ಟಿ ಕೃಷಿಕರು ಹೆಬ್ಬಾಡಿ

    ವಾರಾಹಿ ಯೋಜನೆ ಪ್ರೊ ಇರಿಗೇಶನ್ ಆಗಿದ್ದು, ಮೂಲ ಯೋಜನೆಯಲ್ಲಿ ಇಲ್ಲದಿರುವುದರಿಂದ ಪಂಪ್ ಮಾಡಿ ನೀರು ಕೊಡಲು ಅವಕಾಶ ಇಲ್ಲ. ಇದಕ್ಕೆ ಸರ್ಕಾರ ಆದೇಶ ಮಾಡಬೇಕು. ಕಾಲುವೆ ಹರಿಯುವ ಮೇಲ್ಭಾಗಕ್ಕೆ ನೀರು ಕೊಡುವುದಕ್ಕೆ ಆಗೋದಿಲ್ಲ. ಸಬ್ ಚಾನಲ್, ಎಫೈಸಿ, ನೀರು ವಿತರಣೆ ಇನ್ನು ಆಗಬೇಕಿದೆ. ಇದೆಲ್ಲ ಮಾಡಬೇಕಿದ್ದರೆ ಹೆಬ್ಬಾಡಿ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ಸಾಧ್ಯವಿದೆ. ಗುರುತ್ವಾಕರ್ಷಣೆಯಿಂದಲೇ ನೀರು ಹೆಬ್ಬಾಡಿಗೆ ಹೋಗೋದಾದರೆ ಪೂರೈಕೆ ಮಾಡಬಹುದು. ರೈತರೆಲ್ಲ ಒಟ್ಟಾಗಿ ಎಷ್ಟು ಜಾಗ, ಕೃಷಿ ಭೂಮಿಯಿದೆ ಎನ್ನುವ ಮಾಹಿತಿ ಜತೆ ಅರ್ಜಿ ಕೊಡಲಿ. ಗುರುತ್ವಾಕರ್ಷಣೆ ಶಕ್ತಿಯಲ್ಲಿ ನೀರು ಪೂರೈಕೆ ಆಗೋದಾದರೆ ಮುಂದೆ ಎಫೈಸಿಯಲ್ಲಿ ನೀರು ಸಿಗುತ್ತದೆ.

    ಎಂ.ಪಿ.ಭಟ್ ಸಹಾಯಕ ಇಂಜಿನಿಯರ್, ವಾರಾಹಿ ನೀರಾವರಿ ಯೋಜನೆ

    ಎಲ್ಲವೂ ಕಾರ್ಯಗತವಾದರೆ, ವಾರಾಹಿ ಬಲದಂಡೆಯ 19ನೇ ಕಿ.ಮೀ. ಕುಳಂಜೆ ಗ್ರಾಮದ ಶಿಂಗಿನಕೋಡ್ಲು ಭರತ್ಕಲ್ ಎಂಬಲ್ಲಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಪೈಪ್ ಮುಖಾಂತರ ಅತಿ ಶೀಘ್ರದಲ್ಲಿ ಹರಿಯಲಿದೆ. ಆದರೆ ಕಾಲುವೆ ಬುಡದಲ್ಲೇ ಹೆಬ್ಬಾಡಿ ಭಾಗಕ್ಕೆ ನೀರು ಹರಿಯುವುದಿಲ್ಲ. ಈ ಭಾಗದ 100 ಎಕರೆಗೂ ಮೇಲ್ಪಟ್ಟು ಕೃಷಿ ಭೂಮಿಗೆ ನೀರಾವರಿ ಇಲಾಖೆ ನೀರು ಹರಿಸದಿರುವುದು ಸೋಜಿಗವೆನಿಸುತ್ತಿದೆ. ಇನ್ನಾದರೂ ಇಲಾಖೆ ನೀರು ಹರಿಸಲು ಕ್ರಮ ಕೈಗೊಳ್ಳಲಿ.
    ಚಿಟ್ಟೆ ರಾಜಗೋಪಾಲ ಹೆಗ್ಡೆ ಅಧ್ಯಕ್ಷ ಪಶ್ಚಿಮ ವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts