More

    ಎಚ್‌ಐವಿ ಸೋಂಕಿತರ ತುತ್ತಿಗೆ ಕರೊನಾ ಕುತ್ತು

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಕರೊನಾ ವೈರಸ್ ಹೆಚ್ಚು ಬಾಧಿಸುತ್ತದೆ. ಎಚ್‌ಐವಿ ಪೀಡಿತರು ರೋಗ ಪ್ರತಿಬಂಧಕ ಶಕ್ತಿ ಕಳೆದುಕೊಂಡವರು. ಪೌಷ್ಟಿಕ ಆಹಾರ, ಕ್ರಮಬದ್ಧ ಔಷಧ ಸೇವನೆ, ನಿಯಮಿತ ಆರೋಗ್ಯ ಪರೀಕ್ಷೆಗೆ ಎಚ್‌ಐವಿ ಪಾಸಿಟಿವ್ ವ್ಯಕ್ತಿ ಒಳಗಾಗುತ್ತಿರಬೇಕು. ಇದಕ್ಕೆ ಲಾಕ್‌ಡೌನ್ ಬಳಿಕ ಸಮಸ್ಯೆಯಾಗಿದ್ದು, ಆಹಾರದ ಕೊರತೆಯೂ ಎದುರಾಗಿದೆ.
    ರಾಜ್ಯದಲ್ಲಿ 5 ಲಕ್ಷ ಎಚ್‌ಐವಿ ಸೋಂಕಿತರಿದ್ದಾರೆ. ಅದರಲ್ಲಿ 3 ಲಕ್ಷ ಜನ ಸರ್ಕಾರಿ ಆಸ್ಪತ್ರೆಯಲ್ಲಿದ್ದು, 1.50 ಲಕ್ಷ ಜನ ಎಆರ್‌ಟಿ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಆರೋಗ್ಯ ಪರೀಕ್ಷೆ, ಮಾತ್ರೆ ಪಡೆಯಲು ಗ್ರೀನ್ ಕಾರ್ಡ್ ಇದೆ. ಎಚ್‌ಐವಿ ಬಗ್ಗೆ ಸಮಾಜದಲ್ಲಿ ಅಸ್ಪಶ್ಯತಾ ಭಾವನೆ ಇರುವುದರಿಂದ ಆಯಾ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುವವರು ಕಡಿಮೆ, ಹೊರ ಜಿಲ್ಲೆಗಳಿಗೆ ಹೆಚ್ಚಾಗಿ ಹೋಗುತ್ತಾರೆ. ಲಾಕ್‌ಡೌನ್ ಬಳಿಕ ಇದು ಸಾಧ್ಯವಾಗುತ್ತಿಲ್ಲ.

    ಆಹಾರ ಕೊರತೆ: ಎಚ್‌ಐವಿ ಬಾಧಿತರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪತಿಯನ್ನು ಕಳೆದುಕೊಂಡು ಮಕ್ಕಳ ಸಾಕುವ ಹೊಣೆ ಹೆಗಲ ಮೇಲಿದೆ. ಜೀವನಕ್ಕಾಗಿ ಟೈಲರಿಂಗ್, ಕಾರ್ಖಾನೆ, ಕೂಲಿ, ಬೀಡಿ ಕಟ್ಟುವುದು, ಮನೆಗೆಲಸ ಮಾಡಿಕೊಂಡಿದ್ದಾರೆ. ಲಾಕ್‌ಡೌನ್ ನಂತರ ಕೆಲಸವೂ ಇಲ್ಲ, ಖರ್ಚಿಗೆ ಹಣವೂ ಇಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಎರಡು ತಿಂಗಳಿಗೆ 10 ಕೆ.ಜಿ. ಅಕ್ಕಿ ನೀಡಿದರೂ ಎಲ್ಲರ ಹೊಟ್ಟೆ ಭರ್ತಿಯಾಗುತ್ತಿಲ್ಲ.
    ವಲಸೆ ಕಾರ್ಮಿಕರಿಗೆ ಶೆಲ್ಟರ್, ಬಡವರಿಗೆ ಸಂಘ ಸಂಸ್ಥೆಗಳು ಆಹಾರ ಕಿಟ್ ನೀಡುತ್ತಿವೆ, ಆದರೆ ಎಚ್‌ಐವಿ ಸೋಂಕಿತರಿಗೆ ಸರ್ಕಾರ, ಸಂಘ ಸಂಸ್ಥೆಗಳು ನೆರವಾಗುತ್ತಿಲ್ಲ. ಇನ್ನು ಪೌಷ್ಟಿಕಾಂಶ ಕೊರತೆಯಿಂದ ರೋಗ ಉಲ್ಬಣವಾಗುವ ಜತೆ ಕರೊನಾಕ್ಕೆ ತುತ್ತಾಗುವ ಆತಂಕವೂ ಇದೆ.

    ಲಾಕ್‌ಡೌನ್‌ನಿಂದ ಎಚ್‌ಐವಿ ಬಾಧಿತರು ಸಮಸ್ಯೆಗೆ ಸಿಲುಕಿದ್ದಾರೆ. ಎರಡು ತಿಂಗಳಿಗೆ ನೀಡುವ 10 ಕೆ.ಜಿ. ಅಕ್ಕಿಯಲ್ಲಿ ಬದುಕುವುದು ಹೇಗೆ? ಜಿಲ್ಲಾಧಿಕಾರಿ, ತಹಸೀಲ್ದಾರ್‌ಗಳನ್ನು ಸಂಪರ್ಕಿಸಿದ್ದರೂ ಪ್ರಯೋಜನವಾಗಿಲ್ಲ. ಸಂಘ ಸಂಸ್ಥೆಗಳು ನಮ್ಮ ನೆರವಿಗೆ ಬಂದಿಲ್ಲ. ನಮಗೆ ಅಕ್ಕಿ ಜತೆ ಪೌಷ್ಟಿಕಾಂಶ ಆಹಾರ ಕಿಟ್ ವಿತರಿಸಿ, ಆರೋಗ್ಯ ಪರೀಕ್ಷೆಗೆ ಅನುಕೂಲ ಮಾಡಿಕೊಡಲಿ.
    – ಸಂಜೀವ ವಂಡ್ಸೆ, ಎಚ್‌ಐವಿ ಪರ ಹೋರಾಟಗಾರ

    ಎಚ್‌ಐವಿ ಸೋಂಕಿತರನ್ನು ಸಮಾಜ ನೋಡುವ ದೃಷ್ಟಿ ಬದಲಾಗದ ಕಾರಣ ತಪಾಸಣೆಗೆ ಉಡುಪಿ ಆಸ್ಪತ್ರೆಗೆ ಹೋಗದೆ ಮಂಗಳೂರಿಗೆ ಹೋಗಬೇಕಿದೆ. ಲಾಕ್‌ಡೌನ್‌ನಿಂದ ಆರೋಗ್ಯವೂ ಹದಗೆಡುತ್ತಿದೆ. ಪಡಿತರ ಕಿಟ್ ಇನ್ನಿತರ ಸೌಲಭ್ಯ ಸರ್ಕಾರ ಅಥವಾ ಸಂಘ ಸಂಸ್ಥೆಗಳಿಂದ ಸಿಗುತ್ತಿಲ್ಲ. ಕೇರಳ, ಗುಜರಾತ್, ಅಸ್ಸೋಂ, ತೆಲಂಗಾಣದಂತೆ ರಾಜ್ಯದಲ್ಲೂ ಮಾಸಿಕ ಗೌರವಧನ ನೀಡಬೇಕು.
    – ಸರೋಜಾ ಪುತ್ರನ್, ಖಜಾಂಚಿ, ಕರ್ನಾಟಕ ನೆಟ್‌ವರ್ಕ್ ಫಾರ್ ಪೀಪಲ್ ಲೀವಿಂಗ್ ವಿತ್ ಎಚ್‌ಐವಿ, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts