More

    ಪುಸ್ತಕಗಳಿಗಿಲ್ಲ ಇಲ್ಲಿ ನೆಲೆ, ಸೂಕ್ತ ವ್ಯವಸ್ಥೆ ಇಲ್ಲದೆ ನೆಲದಲ್ಲಿ ರಾಶಿ

    ಹರೀಶ್ ಮೋಟುಕಾನ ಮಂಗಳೂರು

    ಜ್ಞಾನ ನೀಡುವ ಪುಸ್ತಕಗಳು ಸಮರ್ಪಕ ವ್ಯವಸ್ಥೆ ಇಲ್ಲದೆ ನೆಲದಲ್ಲಿ ರಾಶಿ ಬೀಳಬೇಕಾದ ಸ್ಥಿತಿ ಮಂಗಳೂರು ನಗರದ ಸಾರ್ವಜನಿಕ ಗ್ರಂಥಾಲಯವೊಂದರಲ್ಲಿದೆ. ಮಹಾನಗರ ಪಾಲಿಕೆ ಯಾವ್ಯಾವುದೋ ಕೆಲಸಗಳಿಗೆ ಕೋಟಿಗಟ್ಟಲೆ ರೂ.ಖರ್ಚು ಮಾಡುವಾಗ ಗ್ರಂಥಾಲಯ ಕಟ್ಟಡ ನಿರ್ವಹಣೆ ಸಾಧ್ಯವಾಗುವುದಿಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸಿದೆ.

    ನಗರದ ಮಲ್ಲಿಕಟ್ಟೆಯಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ನೆಲದಲ್ಲಿ ರಾಶಿ ಹಾಕಲಾಗಿದೆ. ಮಳೆಗಾಲದಲ್ಲಿ ನೀರು ಜಿನುಗಿ ಪುಸ್ತಕಗಳು ಹಾಳಾಗುವ ಪರಿಸ್ಥಿತಿ ಇದೆ. ಗ್ರಂಥಾಲಯದ ಕಿಟಕಿಗಳು ಮುರಿದಿದ್ದು, ಗಾಳಿ ಮಳೆಗೆ ನೀರು ನೇರವಾಗಿ ಒಳಗೆ ಬಿದ್ದು ಪುಸ್ತಕಗಳು ಒದ್ದೆಯಾಗುವ ಭೀತಿ ಇದೆ.

    ಪ್ರತಿ ದಿನ ನೂರಾರು ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಕೆಳ ಮಹಡಿಯಲ್ಲಿ ದಿನ ಪತ್ರಿಕೆಗಳು, ವಾರ ಪತ್ರಿಕೆಗಳನ್ನು ಜೋಡಿಸಿಡಲಾಗಿದೆ. ಮೊದಲ ಮಹಡಿಯಲ್ಲಿ ಪುಸ್ತಕ ಸಂಗ್ರಹಾಲಯವಿದೆ. ಸುಮಾರು 25 ಸಾವಿರಕ್ಕೂ ಅಧಿಕ ಉತ್ತಮ ಪುಸ್ತಕಗಳು ಇಲ್ಲಿವೆ. ಸಾವಿರಾರು ಪುಸ್ತಕಗಳನ್ನು ನೆಲದಲ್ಲಿ ಅಟ್ಟಿ ಮಾಡಿ ಇಡಲಾಗಿದೆ. ಕಟ್ಟಡ ಹಳೇ ಕಾಲದ್ದಾಗಿರುವುದರಿಂದ ಗೆದ್ದಲು ಹಿಡಿಯುವ ಹಾಗೂ ಇಲಿ ಹೆಗ್ಗಣಗಳು ತಿನ್ನುವ ಸಾಧ್ಯತೆಯೂ ಇದೆ.

    ಗ್ರಂಥಾಲಯ ಕಟ್ಟಡ ಹಳೇ ಕಾಲದ್ದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಕಳೆದ ವರ್ಷ ಮಾಡು ರಿಪೇರಿ ಮಾಡಲಾಗಿದೆ. ಆದರೆ ಮಳೆಗಾಲದಲ್ಲಿ ಇದರಲ್ಲಿ ಕುಳಿತುಕೊಳ್ಳಲು ಭಯದ ವಾತಾವರಣವಿದೆ. ಮಣ್ಣಿನ ಗೋಡೆಯಾದ ಕಾರಣ ಮಳೆ ನೀರು ಬಿದ್ದು ಕುಸಿಯುವ ಸಾಧ್ಯತೆ ಇದೆ. ಪಾಲಿಕೆ ಆಡಳಿತ ಈ ಕಡೆಗೆ ಗಮನ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಆವರಣದಲ್ಲಿ ತ್ಯಾಜ್ಯ ರಾಶಿ: ಗ್ರಂಥಾಲಯದ ಎದುರು ಉದ್ಯಾನವನ ಇದೆ. ಇದಕ್ಕೆ ಆವರಣ ಗೋಡೆ ಇಲ್ಲ. ಕಲ್ಲು ಬೆಂಚುಗಳು ಮುರಿದು ಹೋಗಿವೆ. ಹೂವಿನ ಗಿಡಗಳು ಒಣಗಿ ಹೋಗಿವೆ. ಉದ್ಯಾನವನದಲ್ಲಿ ಪ್ಲಾಸ್ಟಿಕ್, ಮದ್ಯದ ಬಾಟಲಿ ತ್ಯಾಜ್ಯ ತುಂಬಿ ಹೋಗಿವೆ. ಗ್ರಂಥಾಲಯ ಕಟ್ಟಡ ಎದುರು ಸ್ವಲ್ಪ ಜಾಗವಿದ್ದು, ರಾತ್ರಿ ವೇಳೆ ಇಲ್ಲಿಯೇ ಊಟ ಮಾಡಿ, ಮಲಗುವ ಮಂದಿ ಇದ್ದಾರೆ. ಕೆಲವೊಮ್ಮೆ ಗ್ರಂಥಾಲಯ ಸಿಬ್ಬಂದಿಯೇ ಬಂದು ಅಲ್ಲಿ ಮಲಗಿರುವವರನ್ನು ಎಬ್ಬಿಸಬೇಕಾದ ಸ್ಥಿತಿ ಇದೆ.

    ಮಲ್ಲಿಕಟ್ಟೆಯಲ್ಲಿರುವ ಗ್ರಂಥಾಲಯದಲ್ಲಿ ಶ್ರೇಷ್ಠ ಬರಹಗಾರರ ಉತ್ತಮ ಪುಸ್ತಕ ಸಂಗ್ರಹವಿದೆ. ಆದಷ್ಟು ಕಪಾಟುಗಳಲ್ಲಿ ಜೋಡಿಸಿಟ್ಟಿದ್ದೇವೆ. ಸ್ಥಳಾವಕಾಶ ಕೊರತೆಯಿಂದ ನೆಲದಲ್ಲಿ ಅಟ್ಟಿ ಮಾಡಿ ಇಟ್ಟಿದ್ದೇವೆ. ಗ್ರಂಥಾಲಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಇದೆ. ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಇಲ್ಲಿ ಕುಳಿತುಕೊಳ್ಳಲು ಭಯವಾಗುತ್ತಿದೆ.

    ವೇದಾವತಿ
    ಗ್ರಂಥ ಪಾಲಕಿ

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳನ್ನು ಪರಿಶೀಲಿಸಿ, ಶಿಥಿಲಾವಸ್ಥೆಯಲ್ಲಿರುವುದನ್ನು ಗುರುತಿಸಿ, ಶೀಘ್ರದಲ್ಲೇ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಮಲ್ಲಿಕಟ್ಟೆ ಗ್ರಂಥಾಲಯದ ಸಮಸ್ಯೆ ಬಗ್ಗೆಯೂ ಗಮನ ವಹಿಸಲಾಗುವುದು.

    ಪ್ರೇಮಾನಂದ ಶೆಟ್ಟಿ
    ಮೇಯರ್

    ಸಾರ್ವಜನಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts