More

    ರಸ್ತೆ ಸಂಪರ್ಕ ಕಾಣದ ಕಾಲನಿ!| ಶವ ಹೊರ ತರಲೂ ಹೆಣಗಾಟ, ತುರ್ತು ಸಂದರ್ಭ ದೇವರೇ ಗತಿ

    ಹಗರಿಬೊಮ್ಮನಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿರುವ ರಾಮನಗರದ ಕೂಡ್ಲಿಗಿ ವೃತ್ತ ಮುಂದಿರುವ ಕಾಲನಿಗೆ ರಸ್ತೆ ಸಂಪರ್ಕ ಇಲ್ಲವಾಗಿದ್ದು, ಜನರ ಓಡಾಟ ಕಷ್ಟವಾಗಿದೆ. ಅಲ್ಲದೆ ಯಾರಾದರೂ ಮೃತಪಟ್ಟರೆ ಶವ ಹೊರತರಲು ಹರಸಾಹಸ ಪಡಬೇಕು..!

    ಪುರಸಭೆ ಕಚೇರಿ ಕೂಗಳತೆ ದೂರದಲ್ಲಿರುವ 18ನೇ ವಾರ್ಡ್‌ಗೆ ಒಳಪಡುವ ರಾಮನಗರದಲ್ಲಿರುವ ಕಾಲನಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು, 300 ಜನರು ವಾಸಿಸುತ್ತಿದ್ದಾರೆ. ಕಾಲನಿಯ ಒಂದು ಕಡೆ ಕೂಡ್ಲಿಗಿ ರಸ್ತೆ, ಇನ್ನೊಂದು ಕಡೆ ಕೊಟ್ಟೂರು ರಸ್ತೆ, ಮುಂಭಾಗದಲ್ಲಿ ರೈಲು ನಿಲ್ದಾಣವಿದೆ. ಕೂಡ್ಲಿಗಿ ರಸ್ತೆ ಮತ್ತು ಕೊಟ್ಟೂರು ರಸ್ತೆಗೆ ಮುಖವಾಗಿರುವ ಮನೆಗಳನ್ನು ಬಿಟ್ಟರೆ ಕಾಲನಿ ಒಳಗಡೆ ವಾಸಿಸುವವರಿಗೆ ಮುಖ್ಯರಸ್ತೆಗೆ ಬರಲು ರಸ್ತೆ ಸಂಪರ್ಕ ಇಲ್ಲ. ಮುಖ್ಯರಸ್ತೆಗೆ ಬರಬೇಕೆಂದರೆ ಕಿರಿದಾದ ಕಲ್ಲು, ಮಣ್ಣಿನ ಕಾಲುದಾರಿಯೇ ಗತಿ. ಬೈಕ್ ಒಯ್ಯುವುದು-ತರುವುದು ಸಹ ಕಷ್ಟ. ಇನ್ನು ಆಟೋ ಸೇರಿ ಇತರ ವಾಹನಗಳಪ್ರವೇಶ ಅಸಾಧ್ಯ. ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ ಆ ದೇವರೇ ಗತಿ ಎನ್ನುವಂತಾಗಿದೆ. ಅಷ್ಟೇ ಅಲ್ಲದೆ ಯಾರಾದರೂ ಮೃತಪಟ್ಟರೆ ಶವ ಹೊರತರಲು ಫಜೀತಿ ಅನುಭವಿಸಬೇಕು. ಅಭಿವೃದ್ಧಿಯೂ ಮರೀಚಿಕೆಯಾಗಿದೆ.

    ಸಮಸ್ಯೆಗೆ ಕಾರಣವೇನು?: ರಾಮನಗರ ಪುನರ್ವಸತಿ ಪ್ರದೇಶವಾಗಿದೆ. ತುಂಗಭದ್ರಾ ಅಣೆಕಟ್ಟೆ ನಿರ್ಮಾಣದ ವೇಳೆ ನಾರಾಯಣ ದೇವರಕೆರೆ ಮುಳುಗಡೆಯಾದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳಿಗೆ ರಾಮನಗರದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ ಮತ್ತು ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಆದರೆ, ಈಗ ಸಮಸ್ಯೆ ತಲೆದರೋರಿರುವ ಕಾಲನಿ ಹಿಂದಿನ ನೀಲಿನಕ್ಷೆ ಪ್ರಕಾರ ಕೈಗಾರೀಕರಣ ಪ್ರದೇಶವಾಗಿದ್ದರಿಂದ ಯಾವುದೇ ರಸ್ತೆಗಳನ್ನು ನಿರ್ಮಿಸಿಲ್ಲ. ಅಲ್ಲದೆ, ಚಿಂತ್ರಪಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದ್ದಾಗ ಜನರ ವಾಸಕ್ಕೆಂದು ಮನಸೋ ಇಚ್ಛೆ ಫಾರ್ಮ್ ನಂ.10 ನೀಡಿರುವುದು ಹಾಗೂ ಅತಿಕ್ರಮಣದಿಂದ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಖಾಲಿ ನಿವೇಶನಗಳು ಇದ್ದಾಗ ಜನರ ಸಂಚಾರಕ್ಕೆ ತೊಂದರೆ ಆಗಿರಲಿಲ್ಲ. ಈಗ ಎಲ್ಲರೂ ಕಟ್ಟಡಗಳನ್ನು ನಿರ್ಮಿಸಿಕೊಂಡ ಬಳಿಕ ಸಮಸ್ಯೆ ಉಂಟಾಗಿದೆ. ರಸ್ತೆ ಸಂಪರ್ಕ ಕಲ್ಪಿಸಲು ನಿವಾಸಿಗಳು ಹಲವು ಬಾರಿ ಪುರಸಭೆ ಕಚೇರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕಾಲನಿ ನಿವಾಸಿಗಳ ಆರೋಪವಾಗಿದೆ.

    ಈ ಏರಿಯಾದಲ್ಲಿ 40 ವರ್ಷಗಳಿಂದ ವಾಸವಾಗಿದ್ದೇನೆ. ಮುಖ್ಯರಸ್ತೆಗೆ ಸಂಪರ್ಕ ಇಲ್ಲದೇ ತುಂಬಾ ತೊಂದರೆಯಾಗಿದೆ. ಮನೆಗಳಲ್ಲಿ ಯಾರಿಗಾದರೂ ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಒಂದು ಆಟೋ ಒಳಗೆ ಬರಲು ಸಾಧ್ಯವಿಲ್ಲ. ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಬೇಕಿದೆ. ಕಾಲುದಾರಿಯ ಮೂಲಕವೇ ಮನೆಗಳಿಗೆ ತೆರಳಬೇಕು. ಪಟ್ಟಣದ ಮಧ್ಯಭಾಗದಲ್ಲಿರುವ ಕಾಲನಿಗೆ ಇಂತಹ ಸಮಸ್ಯೆಯಾಗಿರುವುದು ದುರಂತ. ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು.
    ಎನ್.ಎಚ್.ಎಂ.ಮಂಜುನಾಥ ಕಾಲನಿ ನಿವಾಸಿ, ರಾಮನಗರ

    ರಸ್ತೆ ಸಂಪರ್ಕ ಕಲ್ಪಿಸುವಂತೆ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ. ಹಿಂದಿನ ಗ್ರಾಪಂ ಆಡಳಿತ ನಿವೇಶನ ನೀಡಿದಾಗಲೇ ರಸ್ತೆ ಸಂರ್ಪಕಕ್ಕೆ ಅವಕಾಶ ನೀಡಬೇಕಿತ್ತು. ಶೀಘ್ರವೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಸ್ಥಳೀಯರ ಮನವೊಲಿಸಲಾಗುವುದು. ಇದಕ್ಕೆ ನಿವಾಸಿಗಳು ಸಹಕರಿಸಿದರೆ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯ.
    ಕೃಷ್ಣನಾಯ್ಕ ಪುರಸಭೆ ಮುಖ್ಯಾಧಿಕಾರಿ, ಹಬೊಹಳ್ಳಿ

    ಅಶೋಕ ಉಪ್ಪಾರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts