More

    ಗೋವಾ-ಬೆಂಗಳೂರು ರೈಲು ಡೌಟ್

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಮೊನ್ನೆಯಷ್ಟೇ ಘೋಷಣೆಯಾದ ಯಶವಂತಪುರ- ವಾಸ್ಕೋ (ಗೋವಾ)- ಯಶವಂತಪುರ (06587/ 06588) ಡೈಲಿ ಸೂಪರ್ ಫಾಸ್ಟ್ ರೈಲು ಓಡುವುದೇ ಡೌಟ್. ಅದರ ಬದಲು ಈಗಾಗಲೇ ಸಂಚರಿಸುತ್ತಿರುವ ಕಾರವಾರ ರೈಲನ್ನು (ನಂ.16523/ 24 ಹಾಗೂ 16513/14) ಪಡೀಲು ಬೈಪಾಸ್ ಮಾರ್ಗಕ್ಕೆ ತಿರುಗಿಸುವ ದೊಡ್ಡ ಪ್ರಯತ್ನವೊಂದು ನಡೆಯುತ್ತಿದೆ.

    ಕುಂದಾಪುರದಲ್ಲಿ ಶುಕ್ರವಾರ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭಾಗವಹಿಸಿದ ಸಮಾರಂಭದಲ್ಲಿ ಸ್ಥಳೀಯ ಯಾತ್ರಿ ಸಂಘಟನೆ ಮುಖಂಡರು ಮುಂದಿಟ್ಟ ಸಲಹೆ ಮತ್ತು ಜತೆಗೆ ನಡೆಯುತ್ತಿರುವ ಕೆಲ ಬೆಳವಣಿಗೆಗಳು ಇದಕ್ಕೆ ಪುಷ್ಠಿ ನೀಡಿದೆ.
    ಹಾಲಿ ಸಂಚರಿಸುವ ಬೆಂಗಳೂರು-ಮಂಗಳೂರು-ಕಣ್ಣೂರು/ಕಾರವಾರ ರೈಲನ್ನು ಸುಬ್ರಹ್ಮಣ್ಯದಲ್ಲಿ ಬೇರ್ಪಡಿಸಿ, ಪ್ರತ್ಯೇಕ ಇಂಜಿನ್‌ನೊಂದಿಗೆ ಕಾರವಾರಕ್ಕೆ ತೆರಳುವ ರೈಲನ್ನು ಪಡೀಲು ಮಾರ್ಗದಲ್ಲಿ ಕಳುಹಿಸುವುದು, ವಿಭಜನೆಗೊಂಡ ರೈಲು ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್‌ಗೆ ಬಂದು ಕಣ್ಣೂರಿಗೆ ತೆರಳುವುದು ಉತ್ತಮ ಎಂಬುದು ಈಗ ಚರ್ಚೆಯ ವಿಷಯ. ಈ ನಿಟ್ಟಿನಲ್ಲಿ ಒಂದು ವಿಭಾಗದ ಅಧಿಕಾರಿ ವರ್ಗ ಕೂಡಾ ನಿರಂತರ ಶ್ರಮಿಸುತ್ತಿದೆ.

    ಪ್ರಸಕ್ತ ಬೆಂಗಳೂರಿನಿಂದ ಕಾರವಾರ ಕಡೆಗೆ ತೆರಳುವ ರೈಲು ತುಂಬಾ ವಿಳಂಬವಾಗುವ ಕಾರಣ ಪ್ರಯಾಣಿಕರಿಲ್ಲದೆ ಖಾಲಿ ಓಡುತ್ತಿದೆ. ಹೀಗೆ ಹೆಚ್ಚು ದಿನ ಓಡುವುದು ಕಷ್ಟ. ಮತ್ತೆ ನಷ್ಟ ಎಂದು ರೈಲನ್ನೇ ರದ್ದುಪಡಿಸುವ ಪರಿಸ್ಥಿತಿ ಬರಬಾರದು ಎನ್ನುವ ಉದ್ದೇಶದಿಂದ ಪ್ರಯಾಣಿಕ ಸ್ನೇಹಿ ವ್ಯವಸ್ಥೆ ಬಗ್ಗೆ ವಿಚಾರ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ವಾಸ್ತವವಾಗಿ ರೈಲ್ವೆ ಪ್ರಥಮ ಹಂತದಲ್ಲಿ ಹಳೇ ರೈಲನ್ನೇ ಪಡೀಲು ಮಾರ್ಗ ಓಡಿಸಲು ಉದ್ದೇಶಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕೆಲ ಸಂಘಟನೆ ಪದಾಧಿಕಾರಿಗಳು ಹೋರಾಟ ಮಾಡಿ ಕೇಂದ್ರದ ಮೇಲೆ ಒತ್ತಡ ಹೇರಿ ಕಾರವಾರ ಮೂಲಕ ಗೋವಾಕ್ಕೆ ಸಾಗುವ ಹೊಸ ರೈಲನ್ನೇ ಪಡೆದಿದ್ದರು. ಹೊಸ ರೈಲು ಕೊಟ್ಟರೂ ಅದು ಮುಂದುವರಿಸಲು ಕೆಲವರು ಆಸಕ್ತರಾಗಿಲ್ಲ. ನಷ್ಟದ ನೆಪ ಹೇಳಿ ಭವಿಷ್ಯದಲ್ಲಿ ಇರುವ ರೈಲಿನಲ್ಲಿಯೇ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯೇ ಅಧಿಕ ಎನ್ನುವ ಸುಳಿವನ್ನು ಕೆಲ ರೈಲ್ವೆ ಅಧಿಕಾರಿಗಳು ಕೂಡ ನೀಡಿದ್ದಾರೆ.

    ಸುಬ್ರಹ್ಮಣ್ಯದಲ್ಲಿ ವಿಭಜನೆ ಸಮಸ್ಯೆ: ಪಡೀಲ್‌ನಲ್ಲಿ ರೈಲು ಬೋಗಿಗಳನ್ನು ಪ್ರತ್ಯೇಕಗೊಳಿಸುವ ವ್ಯವಸ್ಥೆಗಳಿಲ್ಲ. ಹೀಗಾಗಿ ಸುಬ್ರಹ್ಮಣ್ಯದಲ್ಲಿ ಬೇರ್ಪಡಿಸಬೇಕಾಗುತ್ತದೆ. ಆದರೆ ಅದರಿಂದಲೂ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಅಧಿಕ ಭೋಗಿಗಳಿರುವ ರೈಲು ನಿಲ್ದಾಣದಿಂದ ಮೊದಲು ಹೊರಡಬೇಕಿದ್ದು, ಇದರ ಪ್ರಕಾರ 13 ಬೋಗಿಗಳಿರುವ ಮಂಗಳೂರು ಜಂಕ್ಷನ್- ಸೆಂಟ್ರಲ್- ಕಣ್ಣೂರು (ಕೇರಳ) ಮಾರ್ಗದ ರೈಲು ಮೊದಲು ಹೊರಡಬೇಕು. ಆ ರೈಲು ಮುಂದಿನ ನಿಲ್ದಾಣ (ಸುಬ್ರಹ್ಮಣ್ಯ ಬಳಿಕದ ನಿಲ್ದಾಣ ಒಂಭತ್ತು ಕಿ.ಮೀ. ದೂರದ ಎಡಮಂಗಲ) ತಲುಪಿದ ಬಳಿಕ ಒಂಭತ್ತು ಭೋಗಿಗಳು ಇರುವ ಕಾರವಾರ ಮಾರ್ಗದ ರೈಲು ಹೊರಡಬೇಕು. ಈ ವ್ಯವಸ್ಥೆಯಿಂದ ಕಾರವಾರ ರೈಲು ಮತ್ತೆ ವಿಳಂಬವಾಗುತ್ತದೆ ಎನ್ನುತ್ತಾರೆ ರೈಲ್ವೆ ಯಾತ್ರಿ ಸಂಘದ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ.

    ಮಂಗಳೂರು ಪ್ರಯಾಣಿಕರಿಗೂ ಕಷ್ಟ: ಇರುವ ರೈಲನ್ನು ಸುಬ್ರಹ್ಮಣ್ಯದಲ್ಲಿ ಪ್ರತ್ಯೇಕಿಸುವುದರಿಂದ ರಾಜಧಾನಿಯಿಂದ ಮಂಗಳೂರು ಸಂಪರ್ಕಿಸುವ ರೈಲು ಸುಮಾರು ಅರ್ಧ ಗಂಟೆ ವಿಳಂಬವಾಗಿ ಮಂಗಳೂರು ತಲುಪಲಿದೆ. ಸುಬ್ರಹ್ಮಣ್ಯದಲ್ಲಿ ರೈಲು ಪ್ರತ್ಯೇಕಿಸುವ ಪ್ರಕ್ರಿಯೆಗೆ 20ರಿಂದ 30 ನಿಮಿಷ ತನಕ ತಗುಲಲಿದೆ.

    ಎರಡೂ ರೈಲು ಸಿಗುವುದೇ?: ಈಗಾಗಲೇ ಇರುವ ಕಾರವಾರ ರೈಲನ್ನು ಪಡೀಲ್ ಮಾರ್ಗದ ಮೂಲಕ ನೇರವಾಗಿ ಸಾಗುವಂತೆ ಮಾಡಿ, ಜತೆಗೆ ಗೋವಾ ರೈಲನ್ನೂ ಪಡೀಲು ಮಾರ್ಗದ ಮೂಲಕ ಸಂಚರಿಸುವ ವ್ಯವಸ್ಥೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೊಸ ರೈಲನ್ನು ಒದಗಿಸಿ ಇರುವ ಹಾಲಿ ರೈಲನ್ನು ಯಥಾಸ್ಥಿತಿ ಕಾಯ್ದುಕೊಳ್ಳುವುದು ಉಭಯ ಕಡೆಗಳ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಎಂಬ ಮಾತುಗಳೂ ಇವೆ.

     ಘೋಷಣೆಯಾದ ಹೊಸ ರೈಲು ಪಡೀಲು ಮಾರ್ಗ ಸಂಚರಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಈ ವಿಷಯದಲ್ಲಿ ನಾವು ಅವರಿಗೆ ಬೆಂಬಲವಾಗಿದ್ದೇವೆ. ಆದರೆ ಈಗಾಗಲೇ ಮಂಗಳೂರು ಜಂಕ್ಷನ್, ಮಂಗಳೂರು ಸೆಂಟ್ರಲ್ ಮಾರ್ಗ ಸಂಚರಿಸುತ್ತಿರುವ ರೈಲು ಪಡೀಲು ಬೈಪಾಸ್ ಮೂಲಕ ಕಾರವಾರಕ್ಕೆ ಸಂಚರಿಸುವುದಕ್ಕೆ ನಮ್ಮ ತೀವ್ರ ವಿರೋಧವಿದೆ.
    – ಹನುಮಂತ ಕಾಮತ್, ಅಧ್ಯಕ್ಷ, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts