More

    ಶ್ರದ್ಧಾ ಭಕ್ತಿಯ ಶ್ರಿ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ

    ಸೋಮವಾರಪೇಟೆ: ಯಡೂರು ಗ್ರಾಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಶುಕ್ರವಾರ ರಾತ್ರಿ ಹಾಗೂ ಶನಿವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆಯಿತು.

    ಯಡೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಸುಗ್ಗಿಕಟ್ಟೆಯಲ್ಲಿ ಮಲೆನಾಡಿನ ಜನರ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಪೂಜಾ ಕಾರ್ಯಗಳು ನಡೆದವು.

    ಶುಕ್ರವಾರ ರಾತ್ರಿ ಸುಗ್ಗಿಕಟ್ಟೆಯಲ್ಲಿ ದೇವಿಗೆ ಎಡೆ ಇಟ್ಟ ಗ್ರಾಮಸ್ಥರು ಊರಿನ ಸಮೃದ್ಧಿಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು. ಉತ್ತಮ ಮಳೆಯಾಗಿ ಬರಗಾಲದ ಆತಂಕದಿಂದ ಕೃಷಿಕರನ್ನು ಮುಕ್ತಗೊಳಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು.

    ಸುಗ್ಗಿಕಟ್ಟೆಯಲ್ಲಿ ಮಹಿಳೆಯರು ಹರಕೆ ಮಾಡಿಕೊಂಡರು. ಇನ್ನು ಕೆಲವರು ತಮ್ಮ ಇಷ್ಟಾರ್ಥ ನೆರವೇರಿಕೆಗೆ ಹರಕೆ ಹೊತ್ತರು. ಪಟಾಕಿ ಸಿಡಿಸುತ್ತ, ವಾದ್ಯಗೋಷ್ಠಿಯಲ್ಲಿ ಗ್ರಾಮಸ್ಥರು ಸುಗ್ಗಿಕಟ್ಟೆ ಪ್ರದಕ್ಷಿಣೆ ಹಾಕಿದರು. ಗ್ರಾಮಸ್ಥರು ಮಡೆ ಭೋಜನ ಸ್ವೀಕರಿಸಿದರು.

    ಶನಿವಾರ ಬೆಳಗ್ಗೆ ಗ್ರಾಮದ ದೇವರಬಾವಿಯಲ್ಲಿ ಬಸವಣ್ಣ ದೇವರ ಗಂಗಾಸ್ನಾನ ನಡೆಯಿತು. ಮೈಮೇಲೆ ದೇವರು ಬಂದವರ ನೃತ್ಯ ಭಕ್ತರನ್ನು ಆಕರ್ಷಿಸಿತು. 13 ದಿನದ ಸುಗ್ಗಿ ಉತ್ಸವದಲ್ಲಿ ಗ್ರಾಮ ದೇವತೆಗೆ ಅರ್ಪಿಸಿದ ಪೂಜಾ ಕಾರ್ಯಗಳು ಸಂತೃಪ್ತಿ ಕೊಟ್ಟ ಬಗ್ಗೆ ದೇವರಲ್ಲಿ ಗ್ರಾಮಸ್ಥರು ಕೇಳಿ ತಿಳಿದುಕೊಂಡರು.
    ಬಸವಣ್ಣ ದೇವರನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರತಿ ಮನೆಯವರು ಈಡುಗಾಯಿಯೊಂದಿಗೆ ಪೂಜೆ ಸಲ್ಲಿಸಿದರು. ಅಡ್ಡೆ ಹೊತ್ತವರ ಕುಣಿತ ಭಕ್ತಾದಿಗಳನ್ನು ಆಕರ್ಷಿಸಿತು. ಸುಗ್ಗಿಕಟ್ಟೆಯಲ್ಲಿ ಗ್ರಾಮಸ್ಥರ ಸಾಮೂಹಿಕ ಕುಣಿತದೊಂದಿಗೆ, ದೇವತಕ್ಕರ ಮೆರವಣಿಗೆ ನಡೆಯಿತು. ಭಾನುವಾರ(ಇಂದು) ಮಲ್ಲಸುಗ್ಗಿ, ಸೋಮವಾರ ಹಗಲು ಸುಗ್ಗಿ, ಮಂಗಳವಾರ ಮಾರಿ ಕಳುಹಿಸುವ ಕಾರ್ಯದೊಂದಿಗೆ ಸುಗ್ಗಿ ಉತ್ಸವ ಮುಕ್ತಾಯಗೊಳ್ಳಲಿದೆ.

    ದೇವರ ಒಡೆಕಾರರಾದ ವೈ.ಡಿ.ನಾಗೇಶ್, ಕಾರ್ತಿಕ್, ನಾಗರಜು, ಬೆಳ್ಳಿಯಪ್ಪ, ಜಯರಾಂ, ದಯಾನಂದ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.
    ಯಡೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಭಾನುಪ್ರಕಾಶ್, ಕಾರ್ಯದರ್ಶಿ ಕಾರ್ತಿಕ್, ಪದಾಧಿಕಾರಿಗಳಾದ ರವಿ, ಪವನ್, ಕುಮಾರಸ್ವಾಮಿ, ವಿನಯ್, ಕಿರಣ್, ಪ್ರವೀಣ್ ಸೇರಿದಂತೆ ಗ್ರಾಮದ ಹಿರಿಯರು ಸುಗ್ಗಿ ಉತ್ಸವದ ಜವಾಬ್ದಾರಿ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts