More

    ಹಡಗಿನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ

    ಮಂಗಳೂರು: ಕರೊನಾ ಭೀತಿಯಿಂದ ಹಾಂಕಾಂಗ್‌ನಲ್ಲಿ ತಡೆಹಿಡಿಯಲ್ಪಟ್ಟ ಚೀನಾದ ಡ್ರೀಮ್ ವರ್ಲ್ಡ್ ಹಡಗಿನಲ್ಲಿದ್ದ ಮಂಗಳೂರು ಹಾಗೂ ಕಾಸರಗೋಡಿನ ಇಬ್ಬರು ಸಿಬ್ಬಂದಿ ಒಂದು ವಾರ ವಿಳಂಬವಾಗಿ ಮಂಗಳವಾರ ಮನೆ ತಲುಪಿದ್ದಾರೆ.

    ಹಡಗಿನ ಒಳಗಿನ ಬದುಕು ಸಾಮಾನ್ಯವಾಗಿತ್ತು. ಪ್ರಯಾಣಿಕರು ಹಡಗಿನಲ್ಲಿ ಇದ್ದಷ್ಟು ಅವಧಿ ಖುಷಿಯಾಗಿರುವಂತೆ ನೋಡಿಕೊಂಡಿದ್ದೇವೆ. ಇತರ ವಿಷಯಗಳ ಬಗ್ಗೆ ಮಾತನಾಡುವ ಅಧಿಕಾರವನ್ನು ನಾವು ಸಿಬ್ಬಂದಿ ಹೊಂದಿಲ್ಲ ಎಂದು ಮಂಗಳೂರಿನ ಮನೆ ತಲುಪಿದ ಕುಂಪಲದ ಗೌರವ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಹಡಗಿನಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ (ಸಮಸ್ಯೆ ಇಲ್ಲ ಎಂದು ಧೃಢ) ಬಂದಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಭಾನುವಾರವೇ ಬಿಡುಗಡೆ ಮಾಡಲಾಗಿದ್ದು, ಸಿಬ್ಬಂದಿಗೆ ಸೋಮವಾರ ಬಿಡುಗಡೆಯಾಗಲು ಸಾಧ್ಯವಾಗಿದೆ.

    ಹಾಂಕಾಂಗ್‌ನಿಂದ ಮುಂಬೈ ಮತ್ತು ಅಲ್ಲಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಕ್ಷಣ ಸಂಪರ್ಕ ವಿಮಾನಗಳು ದೊರೆತಿರುವ ಕಾರಣ ಒಂದೇ ದಿನದಲ್ಲಿ ಹಾಂಕಾಂಗ್‌ನಿಂದ ಮಂಗಳೂರು ತಲುಪಲು ಸಾಧ್ಯವಾಗಿದೆ ಎಂದವರ ಬಾವ ಗಣೇಶ್ ತಿಳಿಸಿದ್ದಾರೆ. ಹಡಗಿನಲ್ಲಿದ್ದ ಕಾಸರಗೋಡು ಜಿಲ್ಲೆಯ ಯುವಕ ಕೂಡ ಮಧಾಹ್ನ ಮನೆ ತಲುಪಿದ ಬಗ್ಗೆ ಮನೆ ಮಂದಿ ತಿಳಿಸಿದ್ದಾರೆ.

    ಮದುವೆ ಮುಂದೂಡಿಕೆ: ಜನವರಿ 26ರಂದು ಚೀನಾದಿಂದ ಹೊರಟಿದ್ದ ವರ್ಲ್ಡ್ ಡ್ರೀಂ ಹಡಗು ತೈವಾನ್ ತಲುಪಿದ ಬಳಿಕ ಗೌರವ್ ಡ್ಯೂಟಿ ಮುಗಿಸಿ ಪೂರ್ವ ನಿಗದಿಯಂತೆ ಫೆ.6ರಂದು ಮಂಗಳೂರು ತಲುಪಬೇಕಿತ್ತು. ಆದರೆ ವಿಶ್ವದಾದ್ಯಂತ ಕರೊನಾ ಭೀತಿ ಹರಡಿದ ಹಿನ್ನೆಲೆಯಲ್ಲಿ ತೈವಾನ್‌ನಲ್ಲಿ ಯಾವುದೇ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಹಡಗು ಇಳಿಯಲು ಅವಕಾಶ ದೊರೆಯದ ಕಾರಣ ಹಡಗು ಹಾಂಕಾಂಗ್‌ಗೆ ತೆರಳಿ ಲಂಗರು ಹಾಕಿತ್ತು. ಇದರಿಂದಾಗಿ ಫೆ.10ರಂದು ನಡೆಯಬೇಕಿದ್ದ ಗೌರವ್ ಮದುವೆ ಮುಂದೂಡಿಕೆಯಾಗಿದೆ. ಕಾಸರಗೋಡು ಯುವಕನ ಮದುವೆ ಪುತ್ತೂರಿನಲ್ಲಿ ಫೆ.16ರಂದು ನಿಗದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts